ADVERTISEMENT

23ರಂದು ಖಾಸಗಿ ಬಸ್ ನಿಲ್ದಾಣ ಉದ್ಘಾಟನೆ

ನಗರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಹಾಲಪ್ಪ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 14:09 IST
Last Updated 8 ಜನವರಿ 2021, 14:09 IST

ಸಾಗರ: ನಗರವ್ಯಾಪ್ತಿಯ ನ್ಯೂ ಬಿ.ಎಚ್. ರಸ್ತೆಯಲ್ಲಿ ನಿರ್ಮಿಸಿರುವ ನೂತನ ಖಾಸಗಿ ಬಸ್ ನಿಲ್ದಾಣ ಜ.23ರಂದು ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಹೇಳಿದರು.

ಶುಕ್ರವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗಲೇ ಇದರ ಉದ್ಘಾಟನೆಯಾಗಬೇಕಿತ್ತು. ಆಗ ಅಧ್ಯಕ್ಷರಾಗಿದ್ದ ವೀಣಾ ಪರಮೇಶ್ವರ್ ರಾಜಕೀಯ ಕಾರಣಗಳಿಗಾಗಿ ಒಪ್ಪದೆ ಇರುವುದರಿಂದ ಉದ್ಘಾಟನೆ ಮುಂದಕ್ಕೆ ಹೋಗಿತ್ತು. ನಂತರ ಕೋವಿಡ್ ಕಾರಣಕ್ಕೆ ಉದ್ಘಾಟನೆ ವಿಳಂಬವಾಗಿದೆ’ ಎಂದರು.

‘ಜ.23ರಂದು ಗಣಪತಿ ಕೆರೆಯ ಪಕ್ಕದಲ್ಲಿ ನಿರ್ಮಿಸಿರುವ ನೂತನ ಧ್ವಜಸ್ತಂಭದ ಉದ್ಘಾಟನೆ ಕೂಡ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿ ಹಲವು ಗಣ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಸರ್ವರಿಗೂ ಸೂರು’ ಯೋಜನೆಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದ್ದ ವೇಳೆಯಲ್ಲಿ ಈ ಯೋಜನೆಯನ್ನು ಜಾರಿಗೆ ತಂದದ್ದು ಕಾಗೋಡು ತಿಮ್ಮಪ್ಪ ಅವರು ಎಂದು ಕಾಂಗ್ರೆಸ್ ಸದಸ್ಯರು ಹೇಳಿದ್ದು ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

‘ಯೋಜನೆ ಕೇಂದ್ರ ಸರ್ಕಾರದ್ದು. ಅದು ಪ್ರಧಾನ ಮಂತ್ರಿಗಳ ಹೆಸರಿನಲ್ಲಿದೆ. ಮಾಹಿತಿ ಕೊರತೆಯಿಂದ ನೀವು ತಪ್ಪು ಮಾತನಾಡುತ್ತಿದ್ದೀರಿ’ ಎಂದು ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ತೀವ್ರ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಮಧ್ಯ ಪ್ರವೇಶಿಸಿದ ಶಾಸಕ ಹಾಲಪ್ಪ ಹರತಾಳು, ‘ಈ ಸಭೆಯಲ್ಲಿ ಅನಗತ್ಯವಾಗಿ ಕಾಗೋಡು ತಿಮ್ಮಪ್ಪ ಅವರ ಹೆಸರು ತರುವುದು ಸರಿಯಲ್ಲ. ಅವರ ಬಗ್ಗೆ ಎಲ್ಲರಿಗೂ ಗೌರವವಿದೆ. ಯೋಜನೆ ಯಾರದ್ದು, ಅದು ಯಾರು ಕಾರ್ಯಗತಗೊಳಿಸಿದ್ದು ಎಂಬುದನ್ನು ಅರಿತು ಮಾತನಾಡಬೇಕು. ಅನಗತ್ಯವಾಗಿ ಕಾಗೋಡರನ್ನು ಟೀಕೆ ಮಾಡಲು ನೀವೇ ಅವಕಾಶ ಮಾಡಿಕೊಡುತ್ತಿದ್ದೀರಿ’ ಎಂದು ಕಾಂಗ್ರೆಸ್ ಸದಸ್ಯರಿಗೆ ಹೇಳಿದರು.

‘ಇಂದಿರಾಗಾಂಧಿ ಕಾಲೇಜು ಪಕ್ಕದಲ್ಲಿ ನೂತನ ಸಂತೆ ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ ಈಗ ನಡೆಯುತ್ತಿರುವಂತೆ ಗುರುವಾರ ದಿನ ಅಲ್ಲಿ ಸಂತೆ ನಡೆಸಲು ಸಾಧ್ಯವಿಲ್ಲ. ಏಕೆಂದರೆ ಕಾಲೇಜು ತೆರೆದಿರುತ್ತದೆ. ಸುಮಾರು 3 ಸಾವಿರ ಹೆಣ್ಣು ಮಕ್ಕಳು ಅಲ್ಲಿ ಓದುತ್ತಿದ್ದಾರೆ. ಗುರುವಾರದ ಬದಲು ಭಾನುವಾರ ಸಂತೆ ನಡೆಸುವ ಸಾಧ್ಯತೆ ಕುರಿತು ಪರಿಶೀಲಿಸಬೇಕು’ ಎಂದು ಹಾಲಪ್ಪ ಸಲಹೆ ನೀಡಿದರು.

ಬಫರ್ ಜೋನ್ ವ್ಯಾಪ್ತಿಯಲ್ಲಿ ಕೆಲವರು ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ನ ಎನ್.ಲಲಿತಮ್ಮ, ಜೆಡಿಎಸ್‌ನ ಸೈಯದ್ ಜಾಕೀರ್ ಒತ್ತಾಯಿಸಿದರು.

ಈ ಬಗ್ಗೆ 7 ದಿನಗಳ ಮುಂಚಿತವಾಗಿ ನೋಟಿಸ್ ನೀಡಿದರೆ ಉತ್ತರಿಸಬಹುದು ಎಂದು ಅಧ್ಯಕ್ಷೆ ಮಧುರಾ ಶಿವಾನಂದ್ ತಿಳಿಸಿದರು.

ಯಾವುದು ಕಾನೂನುಬಾಹಿರ, ಯಾವುದು ಸಮ್ಮತ ಎಂದು ತಿಳಿಸಲು ಮುಂಚಿತವಾಗಿ ನೋಟಿಸ್ ಕೊಡುವ ಅಗತ್ಯವಿಲ್ಲ ಎಂದು ಸದಸ್ಯರು ಪ್ರತಿಪಾದಿಸಿದರು.

ಬಫರ್ ಜೋನ್ ಕುರಿತು ಪೌರಾಯುಕ್ತ ಎಚ್.ಕೆ. ನಾಗಪ್ಪ ವಿವರಣೆ ನೀಡಿ ಮುಗಿಸುತ್ತಿದ್ದಂತೆ ಸಭೆ ಮುಕ್ತಾಯವಾಗಿದೆ ಎಂದು ಅಧ್ಯಕ್ಷರು ಘೋಷಿಸಿದ್ದು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರನ್ನು ಕೆರಳಿಸಿತು.

ಸಭೆಯನ್ನು ದಿಢೀರನೆ ಮುಕ್ತಾಯಗೊಳಿಸಿದ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸಭಾಂಗಣದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.