ADVERTISEMENT

ಸಮಾಜದ ಸಮಸ್ಯೆಗಳಿಗೆ ಪರಿಹಾರದ ಹುಡುಕಾಟ

ಯೋಜನಾಧಾರಿತ ವಿಜ್ಞಾನವಸ್ತು ಪ್ರದರ್ಶನ ಸ್ಪರ್ಧೆ ‘ಇನ್‌ಸ್ಪೈರ್ ಅವಾರ್ಡ್’ನಲ್ಲಿ ವಿದ್ಯಾರ್ಥಿಗಳ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 12:57 IST
Last Updated 19 ಡಿಸೆಂಬರ್ 2018, 12:57 IST
ಸಾಗರ ತಾಲ್ಲೂಕು ಮತಿಘಟ್ಟ ಸರ್ಕಾರಿ ಶಾಲೆಯ ವಿದ್ಯಾರ್ಥಿ ಮೋಹನ ರೂಪಿಸಿದ ವಿದ್ಯತ್ ಬಳಸದೇ ಕೃಷಿಗೆ ನೀರು ಹರಿಸುವ ಸಾಧನ.
ಸಾಗರ ತಾಲ್ಲೂಕು ಮತಿಘಟ್ಟ ಸರ್ಕಾರಿ ಶಾಲೆಯ ವಿದ್ಯಾರ್ಥಿ ಮೋಹನ ರೂಪಿಸಿದ ವಿದ್ಯತ್ ಬಳಸದೇ ಕೃಷಿಗೆ ನೀರು ಹರಿಸುವ ಸಾಧನ.   

ಶಿವಮೊಗ್ಗ: ಆಧುನಿಕ ಕಾಲಘಟ್ಟದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿಎದುರಾಗುವಹಲವು ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಮೂಲಕ ಶಾಶ್ವತ ಪರಿಹಾರ ಸೂಚಿಸುವ ಪ್ರಯತ್ನ ಮಾಡಿದರು.

ಕಸ್ತೂರ ಬಾ ಕಾಲೇಜು ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯೋಜನಾಧಾರಿತ ವಿಜ್ಞಾನವಸ್ತು ಪ್ರದರ್ಶನ ಸ್ಪರ್ಧೆ ‘ಇನ್‌ಸ್ಪೈರ್ ಅವಾರ್ಡ್’ನಲ್ಲಿ ಇಂತಹ ಹಲವು ಪರಿಹಾರಗಳು ಕಂಡುಬಂದವು.

ವೈಜ್ಞಾನಿಕ ರಸ್ತೆ ಉಬ್ಬುಗಳು:

ADVERTISEMENT

ರಸ್ತೆ ಸಂಚಾರದಲ್ಲಿ ವಾಹನಗಳ ವೇಗ ನಿಯಂತ್ರಿಸಲು ರಸ್ತೆ ಉಬ್ಬುಗಳನ್ನು ಅಳವಡಿಸುವುದು ಸಾಮಾನ್ಯ ಸಂಗತಿ. ಹಲವು ಬಾರಿ ಅವೈಜ್ಞಾನಿಕ ರಸ್ತೆ ಉಬ್ಬುಗಳ ಪರಿಣಾಮ ದ್ವಿಚಕ್ರ ವಾಹನ ಸವಾರರು ಬಿದ್ದು ಜೀವ ಕಳೆದುಕೊಂಡ ಉದಾಹರಣೆ ಸಾಕಷ್ಟು ಇವೆ. ಇಂತಹ ಅವೈಜ್ಞಾನಿಕ ಪದ್ಧತಿಗೆ ಪೋದಾರ್ ಇಂಟರ್ ನ್ಯಾಷನಲ್‌ ಸ್ಕೂಲ್‌ನ ಉತ್ಸವ್ ಸಿ. ಪಟೇಲ್ ಉತ್ತರ ನೀಡಿದರು.

ವಾಹನಗಳು ನಿಧಾನವಾಗಿ ಚಲಿಸಿದರೆ ಕುಗ್ಗುವ ರಸ್ತೆ ಉಬ್ಬುಗಳು, ವೇಗವಾಗಿ ಬರುವ ವಾಹನಗಳಿಗೆ ತಡೆಯಂತೆ ಕೆಲಸ ಮಾಡುತ್ತಿವೆ. ಇದರಿಂದ ವಾಹನಗಳು ನಿಗದಿತ ಮಿತಿ ದಾಟಿ ಚಲಾಯಿಸುದಕ್ಕೆ ಕಡಿವಾಣ ಬೀಳುತ್ತದೆ. ಉತ್ಸವ್‌ಗೆ ಶಾಲೆಯ ಶಿಕ್ಷಕಿ ಪ್ರಿಯತಾ ಮಾರ್ಗದರ್ಶನ ಮಾಡಿದ್ದಾರೆ.

ವಿದ್ಯುತ್ ಬಳಸದೇ ನೀರು ಬಳಕೆ:

ಸಾಗರ ತಾಲ್ಲೂಕು ಮತಿಘಟ್ಟ ಸರ್ಕಾರಿ ಶಾಲೆಯ ವಿದ್ಯಾರ್ಥಿ ಮೋಹನ ರೂಪಿಸಿದ ವಿದ್ಯತ್ ಬಳಸದೇ ಕೃಷಿ ಹಾಗೂ ಗೃಹ ಬಳಕೆಗೆ ಹಳ್ಳ, ಬಾವಿಯ ನೀರು ಬಳಸುವ ವಿಧಾನ ಗಮನ ಸೆಳೆಯಿತು. ಹರಿಯುವ ನೀರಿಗೆ ಪೈಪ್‌ ಜೋಡಿಸಿ ಆ ನೀರನ್ನು ನೂತನ ಸಾಧನೆಕ್ಕೆ ಹರಿಸಿದರೆ ಅಲ್ಲಿಂದ ಒತ್ತಡ ತಂತ್ರದ ಆಧಾರದ ಮೇಲೆ ನೀರು ಬಳಕೆಗೆ ನೀಡಬಹುದು.

ತುಂಗಾ ಪ್ರೌಢಶಾಲೆ ವಿದ್ಯಾರ್ಥಿಗಳ ಕಂಡುಹಿಡಿದ ನೀರಿನ ಕಲ್ಮಶ ಸ್ವಚ್ಛಗೊಳಿಸುವ ಯಂತ್ರದಿಂದ ನದಿ, ಹಳ್ಳ, ಕೊಳ್ಳಗಳಲ್ಲಿ ತೃಲುವ ವಸ್ತುಗಳನ್ನು ಸಂಗ್ರಹಿಸುತ್ತಾ ದಡಕ್ಕೆ ಹಾಕಬಹುದು. ಇದನ್ನು ಇನ್ನಷ್ಟು ಸುಧಾರಿಸಿದರೆ ಗಂಗಾ ನದಿಯನ್ನೂ ಸ್ವಚ್ಛಗೊಳಿಸಬಹುದು ಎನ್ನುತ್ತಾರೆ ವಿದ್ಯಾರ್ಥಿನಿಯರಾದ ಹೇಮಾವತಿ, ರಮ್ಯಾ, ಭಾಗ್ಯಾ.

ವಿದ್ಯುತ್ ಇಲ್ಲದೇ ಇಟ್ಟಿಗೆ, ಮರಳು ಬಳಸಿ ನಿರ್ಮಿಸಿದ ತಂಪುಪೆಟ್ಟಿಗೆ, ಸೋಲಾರ್ ಕುಕ್ಕರ್, ಕಡಿಮೆ ವೆಚ್ಚದ ಬಹು ಉಪಯೋಗಿ ಒಲೆಗಳು, ಸೆನ್ಸಾರ್ ಬಳಸಿ ಅಪಘಾತ ತಡೆಯುವ ವಿಧಾನ, ಸ್ವಯಂ ಚಾಲಿತ ಬೀದಿದೀಪಗಳು ಗಮನ ಸೆಳೆದವು.

ದೇಶದ ಅಭಿವೃದ್ಧಿಗೆ ವಿಜ್ಞಾನದಆಸರೆ:

ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಶಿವಮೊಗ್ಗ ಡಯಟ್ ಆಯೋಜಿಸಿದ್ದ ಈ ವಿಜ್ಞಾನವಸ್ತು ಪ್ರದರ್ಶನವನ್ನುಉದ್ಘಾಟಿಸಿದ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಮಾತನಾಡಿ,ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಪಾತ್ರ ಗಣನೀಯವಾಗಿದೆ. ಪ್ರಗತಿಗೆ ನಿರಂತರ ಸಂಶೋಧನೆಗಳು ಅಗತ್ಯ. ವಿಜ್ಞಾನದ ವಿದ್ಯಾರ್ಥಿಗಳು ಪ್ರತಿ ವಿಷಯಗಳಲ್ಲೂ ಕುತೂಹಲಿಗಳಾಗಬೇಕು. ವಿಜ್ಞಾನದ ಮಹತ್ವ ಅವಿಯಬೇಕು. ಅಧ್ಯಯನಶೀಲರಾಗಬೇಕು, ಕ್ರೀಯಾಶೀಲರಾಗಬೇಕು. ಸಂಶೋಧನೆ ಕೈಗೊಳ್ಳುವವರು ಅಪಾರ ತಾಳ್ಮೆ, ಬದ್ಧತೆ, ತ್ಯಾಗದ ಮನೋಭಾವ ಹೊಂದಿರಬೇಕು ಎಂದು ಸಲಹೆ ನೀಡಿದರು.

ಭವಿಷ್ಯದಲ್ಲಿ ವಿಜ್ಞಾನಿಗಳಾಗ ಬಯಸುವ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ, ಪ್ರತಿಯೊಂದನ್ನೂ ಕುತೂಹಲದಿಂದ ನೋಡುವ, ತಿಳಿದುಕೊಳ್ಳುವ ಮನಸ್ಸು ಹೊಂದಬೇಕು. ಆಗ ವಿಜ್ಞಾನದ ಅಪಾರ ಜ್ಞಾನ ವೃದ್ಧಿಸುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಸುಮಂಗಲ, ನೋಡಲ್ ಅಧಿಕಾರಿ ಸಂಯುಕ್ತಾ, ದಿವಾಕರ್, ಮಹಬಲೇಶ್ವರ ಹೆಗಡೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.