ಶಿವಮೊಗ್ಗ: ‘ಅತ್ಯಂತ ಘನತೆ ಹೊಂದಿರುವುದು ಪೊಲೀಸ್ ಇಲಾಖೆ. ಈ ಇಲಾಖೆಯ ಗೌರವ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ’ ಎಂದು ನಿವೃತ್ತ ಸಿಪಿಐ ಜಿ.ವಿ. ಗಣೇಶಪ್ಪಹೇಳಿದರು.
ಇಲ್ಲಿನ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮಾತನಾಡಿದರು.
‘ದೇಶದಲ್ಲೇ ಕರ್ನಾಟಕ ಪೊಲೀಸರಿಗೆ ಹೆಚ್ಚಿನ ಗೌರವ ಇದೆ. ಇದು ಹೆಮ್ಮೆ ಪಡುವ ವಿಚಾರ. ಹೆಸರಾದ ಇಲಾಖೆಯನ್ನು ಇದೇ ರೀತಿಯಾಗಿ ಮುಂದುವರಿಸಿಕೊಂಡು ಹೋಗಲು ಅಧಿಕಾರಿಗಳು ಮತ್ತು ಸಿಬ್ಬಂದಿ ಪಣತೊಟ್ಟು ಕಾರ್ಯನಿರ್ವಹಿಸಬೇಕು. ವೃತ್ತಿಯನ್ನು ಕಾರ್ಯ ನಿಷ್ಠೆಯಿಂದ ನಿರ್ವಹಿಸಿದ್ದೇ ಆದರೆ, ಜೀವನದಲ್ಲಿ ಒಂದು ಉನ್ನತ ಗುರಿ ತಲುಪಲು ಸಾಧ್ಯವಾಗುತ್ತದೆ’ ಎಂದರು.
ಪೊಲೀಸರು ನಿರಂತರ ಜನಸಂಪರ್ಕದಲ್ಲಿ ಇರಬೇಕು. ಅವರೊಂದಿಗೆ ಉತ್ತಮವಾಗಿ ನಡೆದುಕೊಳ್ಳಬೇಕು. ಯಾವುದೇ ರೀತಿಯ ಅಪರಾಧ ಪ್ರಕರಣಗಳು ನಡೆದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸಬೇಕು. ಆಗ ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ, ವಿಶ್ವಾಸ ಮೂಡುತ್ತದೆ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಅಪರಾಧ ತಡೆಗಟ್ಟುವಲ್ಲಿ ಹಬ್ಬ, ಸಮಾರಂಭವನ್ನು ಗಣನೆಗೆ ತೆಗೆದುಕೊಳ್ಳದೆ ಶ್ರಮಿಸುತ್ತಿದ್ದಾರೆ. ಅಪರಾಧಗಳ ಪತ್ತೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಶ್ರಮ ಹೆಚ್ಚಿದೆ. ಪೊಲೀಸರು ತಮ್ಮ ಕರ್ತವ್ಯ ನಿಷ್ಠೆಯಿಂದ ಶಾಂತಿ ಸುವ್ಯವಸ್ಥೆಯನ್ನು ಉತ್ತಮವಾಗಿ ಕಾಪಾಡಿಕೊಂಡಿದ್ದಾರೆ. ಅಹಿತಕರ ಘಟನೆ ಸಂಭವಿಸಿದರೂ ಅದನ್ನು ಜಿಲ್ಲಾ ಪೊಲೀಸರು ಯಶಸ್ವಿಯಾಗಿ ಹತೋಟಿಗೆ ತಂದಿದ್ದಾರೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಎಂಟು ತುಕಡಿಗಳು ಪಥ ಸಂಚಲನದಲ್ಲಿ ಭಾಗವಹಿಸಿ ಗಮನ ಸೆಳೆದವು. ಸಕಲ ಗೌರವಗಳೂಂದಿಗೆ ಜಿ.ವಿ ಗಣೇಶಪ್ಪ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಮಹಾನಗರ ಪಾಲಿಕೆಯ ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳುಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.