ADVERTISEMENT

ಸಂಸ್ಕೃತಿ ಉಳಿಸಲು ಮಹಿಳೆಯರಿಗೆ ರಾಯಭಾರತ್ವ

ಕರ್ನಾಟಕ ಜಾನಪದ ಪರಿಷತ್ತು ರಾಜ್ಯ ಅಧ್ಯಕ್ಷ ತಮ್ಮೇಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 12:28 IST
Last Updated 4 ಮಾರ್ಚ್ 2019, 12:28 IST
ಶಿವಮೊಗ್ಗ ಸಮೀಪದ ಸಿದ್ದರಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಪದ ಆಟಗಳ ಸ್ಫರ್ಧೆ ಮತ್ತು ಜನಪದ ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ  ಜಿಲ್ಲಾ ಜಾನಪದ ಪರಿಷತ್ತು ರಾಜ್ಯ ಘಟಕದ ಅಧ್ಯಕ್ಷ ಟಿ.ತಮ್ಮೇಗೌಡ ಅವರು ಮಾತನಾಡಿದರು.
ಶಿವಮೊಗ್ಗ ಸಮೀಪದ ಸಿದ್ದರಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಪದ ಆಟಗಳ ಸ್ಫರ್ಧೆ ಮತ್ತು ಜನಪದ ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ  ಜಿಲ್ಲಾ ಜಾನಪದ ಪರಿಷತ್ತು ರಾಜ್ಯ ಘಟಕದ ಅಧ್ಯಕ್ಷ ಟಿ.ತಮ್ಮೇಗೌಡ ಅವರು ಮಾತನಾಡಿದರು.   

ಶಿವಮೊಗ್ಗ: ಆಧುನಿಕ ಪ್ರಾಭಾವಳಿಯಿಂದ ಮೂಲ ಸಂಸ್ಕೃತಿ ಉಳಿಸಬೇಕು. ಜನಪದ ಸಂಸ್ಕೃತಿಯತ್ತ ಯುವಜನರನ್ನು ಆಕರ್ಷಿಸಲು ಮಹಿಳೆಯರು ರಾಯಬಾರಿಗಳಂತೆ ಕೆಲಸ ಮಾಡಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತು ರಾಜ್ಯಘಟಕದ ಅಧ್ಯಕ್ಷ ಟಿ.ತಮ್ಮೇಗೌಡ ಕೋರಿದರು.

ಸಮೀಪದ ಸಿದ್ದರಹಳ್ಳಿಯಲ್ಲಿ ಜಿಲ್ಲಾ ಜಾನಪದ ಪರಿಷತ್ತು, ಮತ್ತೂರು ಗ್ರಾಮ ಪಂಚಾಯಿತಿ, ಸಿದ್ದರಹಳ್ಳಿ ಹಾಲು ಉತ್ಪಾದಕರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಡಾ.ಎಚ್.ಎಲ್. ನಾಗೇಗೌಡರ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ಜನಪದ ಆಟಗಳ ಸ್ಫರ್ಧೆ ಮತ್ತು ಜನಪದ ಕಲಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನಪದ ಕಲೆ, ಆಟಗಳು, ಸಾಹಿತ್ಯ ಸಂಸ್ಕತಿಯಿಂದ ಮನುಷ್ಯನ ಜೀವನ ಆರಂಭವಾಗಿದೆ. ಬಾಲ್ಯದ ದಿನಗಳಲ್ಲಿ ಆಡಿರುವ ಈ ಎಲ್ಲಾ ಆಟಗಳು ನಮ್ಮ ಬದುಕಿಗೆ ಸ್ಫೂರ್ತಿ ಎಂದು ಬಣ್ಣಿಸಿದರು.

ADVERTISEMENT

ಯುಗಾದಿ ಹಬ್ಬದಲ್ಲಿ ಅಳುಗಲಿಮಣೆ ಆಟ ಆಕರ್ಷಕವಾಗಿತ್ತು, ಈಗ ನಮ್ಮ ಹಬ್ಬಗಳ ಸಂಭ್ರಮದ ಮೇಲೆ ಆಧುನಿಕ ಮಾಧ್ಯಮಗಳು ಪ್ರಭಾವ ಬೀರಿವೆ. ಸ್ಥಳೀಯ ಸರ್ಕಾರಗಳು ಬೆಂಬಲಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿ, ಆಧುನಿಕ ಮಾಯಾಜಾಲಕ್ಕೆ ಸಿಲುಕಿರುವ ಜನಸಮೂಹ ಮತ್ತೆ ನಮ್ಮ ಜಾನಪದ ಕಲೆ, ಆಟ, ಸಂಪ್ರದಾಯಗಳತ್ತ ಆಕರ್ಷಿತರಾಗುತ್ತಿದ್ದಾರೆ. ಮತ್ತೆ ಕಟ್ಟುವ ಕೆಲಸಗಳು ಕೆಲಸಕ್ಕೆ ಬಾರದ ಹರಟೆಯಿಂದ ಸಾಧ್ಯವಾಗದು. ಆಸಕ್ತಿ ಮತ್ತು ಕುತೂಹಲ ಕೆರಳಿಸುವ ಪ್ರಯತ್ನ ನಡೆಯಬೇಕು. ಹೊಸ ತಲೆಮಾರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು.

ಈ ಸಮಯದಲ್ಲಿ ಲಗೋರಿ, ಚಿನ್ನಿದಾಂಡು, ಬುಗುರಿ, ಗೋಲಿ, ಹಗ್ಗ ಜಗ್ಗಾಟ, ಮಡಕೆ ಒಡೆಯುವುದು, ಗೋಣಿಚೀಲ ಓಟ, ಕುಂಟ ಪಿಲ್ಲೆ, ಚನ್ನೇಮಣೆ, ಚೌಕಾಬಾರ, ಹಗ್ಗ ಜಿಗಿತ, ಮೂರುಕಾಲಿನ ಓಟ ಸ್ಪರ್ಧೇಗಳು ನಡೆದವು. ಜನಪದ ಹಾಡು, ಸೋಬಾನೆ ಪದ, ಬೀಸುವಪದ ಗೀಗಿಪದ ಸೇರಿದಂತೆ ಹಲವು ಕಲೆಗಳ ಪ್ರದರ್ಶನ ನಡೆಯಿತು.

ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎಂ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು.ಗ್ರಾಮ ಮುಖಂಡರಾದ ಎಸ್.ಎಚ್. ಬೆಟ್ಟೇಗೌಡರು, ಕೆ.ಪಿ.ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸದಸ್ಸೆ ಮಂಜುಳಾ ನರಸಿಂಹ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ದೇವರಾಜ್, ಪಿಡಿಒ ಮಂಜುನಾಥ, ಮಾಲಾ ರಾಮಪ್ಪ, ಬಿ.ಟಿ. ಸುಜಾತಾ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕಿ ವಿನೋಧ ಸ್ವಾಗತಿಸಿದರು. ಸಹನಾ ಜಿ. ಭಟ್ ಅವರು ಜನಪದ ಗೀತೆ ಹಾಡಿದರು. ಭಾರತಿ ರಾಮಕೃಷ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.