ADVERTISEMENT

ನವೋದಯ ಲೇಖಕರಲ್ಲಿ ಕನ್ನಡದ ಹಸಿವು

ಉಪನ್ಯಾಸ ಕಾರ್ಯಕ್ರಮದಲ್ಲಿ ಕೆ.ವಿ. ಅಕ್ಷರ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 6:58 IST
Last Updated 22 ಜುಲೈ 2019, 6:58 IST
ಶಿವಮೊಗ್ಗ ಕಟೀಲ್ ಅಶೋಕ್ ಪೈ ಮೆಮೋರಿಯಲ್ ಇನ್‌ಸ್ಟಿಟ್ಯೂಟ್‌ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಗ್ಗೋಡಿನ ನೀನಾಸಂನ ಕೆ.ವಿ. ಅಕ್ಷರ ಮಾತನಾಡಿದರು.
ಶಿವಮೊಗ್ಗ ಕಟೀಲ್ ಅಶೋಕ್ ಪೈ ಮೆಮೋರಿಯಲ್ ಇನ್‌ಸ್ಟಿಟ್ಯೂಟ್‌ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಗ್ಗೋಡಿನ ನೀನಾಸಂನ ಕೆ.ವಿ. ಅಕ್ಷರ ಮಾತನಾಡಿದರು.   

ಶಿವಮೊಗ್ಗ: ಇತ್ತೀಚೆಗೆ ಬರುತ್ತಿರುವ ಕನ್ನಡ ಕಾವ್ಯಗಳಲ್ಲಿ ನೆನಪಿಡುವಂತಹ ಎರಡು ಉತ್ತಮ ಸಾಲುಗಳು ಸಿಗುತ್ತಿಲ್ಲ ಎಂದುಹೆಗ್ಗೋಡಿನ ನೀನಾಸಂನ ಕೆ.ವಿ. ಅಕ್ಷರ ಅಭಿಪ್ರಾಯಪಟ್ಟರು.

ನಗರದ ಕಟೀಲ್ ಅಶೋಕ್ ಪೈ ಮೆಮೋರಿಯಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಮಾನಸ ಸಾಂಸ್ಕೃತಿಕ ಅಧ್ಯಯನಗಳ ಕೇಂದ್ರ
ದಿಂದ ಭಾನುವಾರ ಏರ್ಪಡಿಸಿದ್ದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವಿಂದು ಆಧುನಿಕತೆಯ ಅಹಂಕಾರದಿಂದ ಅರ್ಥವಾದಿಗಳಾಗುತ್ತಿದ್ದೇವೆ. ಸ್ವಯಂಕೃತ ವಿಸ್ಮೃತಿಯ ಬೆಲೆಯಲ್ಲಿ ನಾವು ಸಿಕ್ಕಿ ಹಾಕಿಕೊಂಡಿದ್ದು, ಇದರಿಂದ ಹೊರಬರಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗತಕಾಲದ ಕಾವ್ಯ ಪರಂಪರೆಯನ್ನು ನಾವು ಕಳೆದುಕೊಂಡಿದ್ದೇವೆ. ನವೋದಯ ಕಾಲಘಟ್ಟದ ಲೇಖಕರಿಗೆ ಕನ್ನಡದ ಹಸಿವಿತ್ತು. ಆನಂತರ ಕನ್ನಡವೇ ಸಡಿಲವಾಗುತ್ತಾ ಸಾಗಿತು. ಇಂದಿಗೂ ಕನ್ನಡದಲ್ಲಿ ಅಲಂಕಾರ ಶಾಸ್ತ್ರ ಓದಲು ಯಾವುದೇ ಪುಸ್ತಕ ಸಿಗುತ್ತಿಲ್ಲ. ಹಾಗಾಗಿ ಪುನಃ ಭಾರತೀಯ ಕಾವ್ಯ ಮೀಮಾಂಸೆಯನ್ನೇ ಓದಬೇಕಾದ ಪರಿಸ್ಥಿತಿಯಿದೆ. ಹಾಗಾಗಿಯೇ ಕಾಳಿದಾಸ, ಭವಭೂತಿ, ಮಿಲ್ಟನ್, ಶೇಕ್ಸ್‌ಪಿಯರ್‌ ನಾಟಕಗಳನ್ನು ಕನ್ನಡಕ್ಕೆ ತರುವುದಕ್ಕೆ ಸಾಕಷ್ಟು ಕಷ್ಟವಾಗಿದೆ’ ಎಂದು ಹೇಳಿದರು.

ADVERTISEMENT

ಭವಭೂತಿಯನ್ನು ಇಂದಿನ ಕಾಲಕ್ಕೆ ಹೋಲಿಸಿದರೆ ಕಾಳಿದಾಸನಿಗಿಂತ ಶ್ರೇಷ್ಠ ನಾಟಕಕಾರನಾಗಿ ಕಂಡು ಬರುತ್ತಾನೆ. ಚಿತ್ರ, ಕಾವ್ಯ, ನಾಟಕ, ಸಂಗೀತ ಹೀಗೆ ಹೊಸ ಹೊಸ ತಂತ್ರಗಳನ್ನು ಭವಭೂತಿ ನಾಟಕದಲ್ಲಿ ತಂದಿದ್ದಾನೆ. ಈತನ ಕಾವ್ಯ ಶರೀರ ನೋಡಿದಾಗ ಕಾಳಿದಾಸನಿಗಿಂತ ಭಿನ್ನವಾದ ಭಾಷೆಯನ್ನು ಬಳಸಿರುವುದು ಮನವರಿಕೆಯಾಗುತ್ತದೆ. ಉದ್ದುದ್ದ ಸಾಲುಗಳನ್ನು ಈತ ರಚಿಸಿರುವುದರಿಂದ ಅದನ್ನು ಕನ್ನಡಕ್ಕೆ ಭಾಷಾಂತರಿಸುವುದು ಸವಾಲಿನ ಕೆಲಸ. ಆದರೆ, ಬಿ.ಎಂ.ಶ್ರೀ, ಪು.ತಿ.ನ, ಕುವೆಂಪು, ಡಿ.ವಿ.ಜಿಯಂತಹ ನವೋದಯಕಾರರ ಕಾವ್ಯಗಳನ್ನು ಓದಿದಾಗ ಭವಭೂತಿಯ ನಾಟಕಗಳ ಭಾಷಾಂತರದಲ್ಲಿ ಯಶಸ್ವಿಯಾಗಬಹುದು ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸ ಕಾರ್ಯಕ್ರಮದ ನಂತರ ಸಂವಾದ ನಡೆಯಿತು. ವಿಮರ್ಶಕ ಟಿ.ಪಿ. ಅಶೋಕ್, ಚಿಂತಕ ಡಾ. ರಾಜೇಂದ್ರ ಚೆನ್ನಿ, ಮಾನಸ
ಟ್ರಸ್ಟ್‌ನ ಡಾ.ರಜನಿ ಪೈ,ಕಟೀಲ್ ಅಶೋಕ್ ಪೈ ಮೆಮೋರಿಯಲ್ ಇನ್‌ಸ್ಟಿಟ್ಯೂಟ್‌ನ ಪ್ರಾಚಾರ್ಯರಾದ ಡಾ.ಸಂಧ್ಯಾ ಕಾವೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.