ADVERTISEMENT

ಸಾಮರಸ್ಯದ ಬದುಕೇ ಮಲೆನಾಡಿನ ಪ್ರಜ್ಞೆ

17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಆಶಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 6:59 IST
Last Updated 2 ಫೆಬ್ರುವರಿ 2023, 6:59 IST
ಶಿವಮೊಗ್ಗದ ಆಲ್ಕೊಳ ವೃತ್ತದಿಂದ ಸಾಹಿತ್ಯ ಗ್ರಾಮದ ವೇದಿಕೆ ಸ್ಥಳಕ್ಕೆ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಚಿತ್ರದಲ್ಲಿದ್ದಾರೆ
ಶಿವಮೊಗ್ಗದ ಆಲ್ಕೊಳ ವೃತ್ತದಿಂದ ಸಾಹಿತ್ಯ ಗ್ರಾಮದ ವೇದಿಕೆ ಸ್ಥಳಕ್ಕೆ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಚಿತ್ರದಲ್ಲಿದ್ದಾರೆ   

ಶಿವಮೊಗ್ಗ: ‘ಸಾಮರಸ್ಯದ ಬದುಕು ಮಲೆನಾಡಿನ ಪರಂಪರೆಯಿಂದಲೇ ಬಂದಿದೆ. ಅದನ್ನೇ ಸರಳವಾಗಿ ಕುವೆಂಪು ‘ವಿಶ್ವಮಾನವ ಪ್ರಜ್ಞೆ’ ಅಂದರು. ಜನಸಾಮಾನ್ಯರಲ್ಲಿ ವೈಚಾರಿಕ ದೃಷ್ಟಿ ಮತ್ತು ವೈಜ್ಞಾನಿಕ ಚಿಂತನೆ ಒಡಮೂಡಿಸಿ ವಿಶ್ವಮಾನವ ಪ್ರಜ್ಞೆಯ ಆಶಯಗಳು ಸಡಿಲಗೊಳ್ಳದಂತೆ ಸಾಹಿತ್ಯ ನೆರವಾಗಲಿ’ ಎಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಆಶಿಸಿದರು.

ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಸಾಹಿತ್ಯ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಾಹಿತ್ಯ ಯಾವ ಪ್ರಕಾರದ್ದೇ ಇರಲಿ ಅದು ಜನಪರವಾಗಿರಬೇಕು. ಇತರರ ನೋವನ್ನು ಅರಿತು ಅದಕ್ಕೆ ಸ್ಪಂದಿಸಬಲ್ಲವನೇ ಸಂವೇದನಾಶೀಲ. ಆತನಿಗೆ ಬರವಣಿಗೆ ಸಾಧ್ಯವಿದ್ದರೆ ಸತ್ವಶಾಲಿ ಸಾಹಿತ್ಯ ಸೃಷ್ಟಿಯಾಗುತ್ತದೆ. ಜನರ ಬದುಕಿನ ಬಗ್ಗೆ ಆಸಕ್ತಿ, ಅನುಕಂಪ ತಾಳಿದ ಸಾಹಿತಿ ಉತ್ತಮ ಸಾಹಿತ್ಯ ಸೃಷ್ಟಿಸಬಲ್ಲ. ಅಲಂಕಾರಿಕವಾಗಿ ಆಕರ್ಷಕವಾಗಿ ಬರೆದರೂ ಅದರಲ್ಲಿ ಅನುಭವದ ತೀವ್ರತೆ ಇಲ್ಲದಿದ್ದರೆ ಅದು ಬರಹವಾಗುತ್ತದೆಯೇ ಹೊರತು ಓದುಗನ ಹೃದಯ ತಟ್ಟುವ ಸಾಹಿತ್ಯವಾಗುವುದಿಲ್ಲ’ ಎಂದರು.

ADVERTISEMENT

‘ಕನ್ನಡ ಭಾಷೆ ಶತಮಾನಗಳಿಂದಲೂ ಉಳಿಯುತ್ತಲೇ ಬಂದಿದೆ. ಎಲ್ಲ ದಾಳಿಗಳ ನಡುವೆಯೂ ಕನ್ನಡ ಭಾಷೆ ಉಸಿರಾಡುತ್ತಲೇ ಇದೆ. ಕನ್ನಡ ಭಾಷೆಯನ್ನು ಉಳಿಸಿದವರು ನಮ್ಮ ಹಳ್ಳಿಗರು. ಗ್ರಾಮೀಣರು ಎಂದೂ ಈ ಭಾಷೆಯನ್ನು ಕೈಬಿಡುವುದಿಲ್ಲ. ಎಲ್ಲ ಭಾಷೆಯ ಪದಗಳನ್ನೂ ಕನ್ನಡ ಭಾಷೆಯನ್ನಾಗಿ ಮಾಡಿಕೊಂಡು ಬೆಳೆಸುತ್ತಿದ್ದಾರೆ. ಕಥೆ ಕಾದಂಬರಿಗಳಿಂದ ಕನ್ನಡ ಉಳಿಯುವುದಿಲ್ಲ ಬದಲಾಗಿ ಕನ್ನಡ ಬಳಸುವ ಗ್ರಾಮೀಣರಿಂದ ಉಳಿದಿದೆ’ ಎಂಬ ಪೂರ್ಣಚಂದ್ರ ತೇಜಸ್ವಿ ಅವರ ಮಾತನ್ನು ನೆನಪಿಸಿಕೊಂಡರು.

ಸಮ್ಮೇಳನ ಉದ್ಘಾಟಿಸಿದ ಸಾಹಿತಿ ನಾ.ಡಿಸೋಜ, ‘ಸಾಹಿತ್ಯ ಎಂದರೆ ವಯಸ್ಸಾದವರಿಗೆ ಎಂಬ ಭಾವನೆ ಬಂದಿದೆ. ಸಾಹಿತ್ಯದಿಂದ ಯುವ ಸಮುದಾಯ ದೂರ ಉಳಿಯುತ್ತಿದೆ. ಪುಸ್ತಕಗಳು ಜ್ಞಾನದ ಸಂಕೇತ. ಪುಸ್ತಕಗಳನ್ನು ಓದಬೇಕು, ಜ್ಞಾನ ಹೆಚ್ಚಳ ಮಾಡಿಕೊಳ್ಳಬೇಕು. ಯುವ ಜನರಲ್ಲಿ ಸಾಹಿತ್ಯ ಅಧ್ಯಯನದ ಅಗತ್ಯವಿದೆ’ ಎಂದರು.

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಗುಂಡಾ ಜೋಯ್ಸ್ ಧ್ವಜ ಹಸ್ತಾಂತರ ಮಾಡಿ ಮಾತನಾಡಿ, ‘ಕನ್ನಡಿಗರು ಇರುವವರೆಗೆ ಕನ್ನಡ ಭಾಷೆ ಇರುತ್ತದೆ ಎಂಬುದನ್ನು ವಿದ್ವಾಂಸರು ಹೇಳಿದ್ದಾರೆ’ ಎಂದರು.

ವಿವಿಧ ಲೇಖಕರ ಕೃತಿಗಳನ್ನು ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಬಿಡುಗಡೆ ಮಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಶಿಕಾರಿಪುರ ತಾಲ್ಲೂಕು ಅಧ್ಯಕ್ಷ ಎಚ್.ಎಸ್.ರಘು ಇದ್ದರು.

ಅಡಿಕೆ ಬೆಳೆ ಅವೈಜ್ಞಾನಿಕ ವಿಸ್ತರಣೆ; ಆತಂಕ
‘ಅಡಿಕೆ ಬೆಳೆ ಪ್ರದೇಶದ ಅವೈಜ್ಞಾನಿಕ ವಿಸ್ತರಣೆ ಹಾಗೂ ಎಲೆಚುಕ್ಕಿ ರೋಗದಿಂದಾಗಿ ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಮಲೆನಾಡಿನ ರೈತರು ತೊಂದರೆಗೊಳಗಾಗಲಿದ್ದಾರೆ. ಅಡಿಕೆಯನ್ನು ಆಧರಿಸಿದ ಜಿಲ್ಲೆಯ ಆರ್ಥಿಕತೆ ತಲ್ಲಣಿಸಲಿದೆ’ ಎಂದು ಲಕ್ಷ್ಮಣ ಕೊಡಸೆ ಆತಂಕ ವ್ಯಕ್ತಪಡಿಸಿದರು.

‘ಬಗರ್‌ಹುಕುಂ ಜಾಗದಲ್ಲೂ ಅಡಿಕೆ ಹಾಕಿ, ಅದಕ್ಕಾಗಿ ಕೊಳವೆಬಾವಿಗಳನ್ನು ಅಪರಿಮಿತವಾಗಿ ಕೊರೆದು ಜಲಮೂಲವನ್ನು ಬರಿದು ಮಾಡಲಾಗುತ್ತಿದೆ. ಬೆಳೆಗಾರರಿಗೆ ನೆರವಾಗಲು ಅಡಿಕೆಯ ವಿವಿಧ ಬಳಕೆ ಬಗ್ಗೆ ಸಂಶೋಧನೆ ನಡೆಸಬೇಕಿದೆ. ಅಡಿಕೆ ಚೊಗರನ್ನು ನೈಸರ್ಗಿಕ ಬಣ್ಣವಾಗಿ ಬಳಕೆ ಮಾಡಲು ಇನ್ನಷ್ಟು ಸಂಶೋಧನೆ ನಡೆಯಬೇಕಿದೆ’ ಎಂದರು.

ಮಾಜಿ ಮುಖ್ಯಮಂತ್ರಿಗಳ ಹೆಸರಲ್ಲಿ ಅಧ್ಯಯನ‍ಪೀಠ
ಜಿಲ್ಲೆಯ ನಾಲ್ವರು ಮುಖ್ಯಮಂತ್ರಿಗಳು ನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಇವರಲ್ಲಿ ಕಡಿದಾಳ್ ಮಂಜಪ್ಪನವರ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ, ಬಂಗಾರಪ್ಪ ಹೆಸರಿನಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪನಾಯಕ ವಿವಿಯಲ್ಲಿ ಹಾಗೂ ಜೆ.ಎಚ್. ಪಟೇಲರ ಹೆಸರಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಆರಂಭಿಸಬೇಕು ಎಂದು ಲಕ್ಷ್ಮಣ ಕೊಡಸೆ ಒತ್ತಾಯಿಸಿದರು.

ಹಸೆಚಿತ್ತಾರ, ಭೂಮಣ್ಣಿ ಬುಟ್ಟಿ ಉಳಿಸಿ
ಹಸೆ ಚಿತ್ತಾರಗಳು, ಭೂಮಣ್ಣಿ ಬುಟ್ಟಿಯ ಚಿತ್ತಾರಗಳು ಅಪ್ಪಟ ದೇಶೀಯ ಚಿತ್ತಾರಗಳಾಗಿವೆ. ಅಂಟಿಕೆ ಪಿಂಟಿಕೆ, ಡೊಳ್ಳು ಕುಣಿತ ಮೊದಲಾದ ಮಲೆನಾಡಿನ ಕಲಾ ಪ್ರಕಾರಗಳು ಯುವ ಪೀಳಿಗೆಯನ್ನು ತಲುಪಬೇಕಿದೆ. ಮಲೆನಾಡಿನ ಈಗಿನ ಚಿತ್ರಣ ಬಹಳಷ್ಟು ಬದಲಾವಣೆಯಾಗಿದೆ. ಮೊಬೈಲ್ ಬಳಕೆ ಬಂದ ಬಳಿಕ ಮಾಹಿತಿ ತಂತ್ರಜ್ಞಾನ ಸಾಕಷ್ಟು ಸುಧಾರಣೆಯಾಗಿದೆ. ಆದರೆ ಗ್ರಾಮೀಣ ಯುವಕ ಯುವತಿಯರಿಗೆ ಗುಣಮಟ್ಟದ ಶಿಕ್ಷಣ ಮತ್ತು ಕೌಶಲದ ಬಗ್ಗೆ ಸೂಕ್ತ ಮಾರ್ಗದರ್ಶನ ಬೇಕಿದೆ ಎಂದರು.

ಮಂತ್ರಮಾಂಗಲ್ಯ ವಿವಾಹ ಸಂಹಿತೆ ಪ್ರತಿಪಾದನೆ..
ವಿದ್ಯಾವಂತ ಯುವಕ–ಯುವತಿಯರು ಮದುವೆಯಲ್ಲಿ ಆಗುವ ದುಂದುವೆಚ್ಚ ತಪ್ಪಿಸಿ ಅರ್ಥಪೂರ್ಣವಾಗಿ ವೈವಾಹಿಕ ಬಾಂಧವ್ಯಕ್ಕೆ ಒಳಗಾಗಲು ಕುವೆಂಪು ಅವರು ‘ಮಂತ್ರ ಮಾಂಗಲ್ಯ’ವೆಂಬ ಸರಳ ವಿವಾಹಸಂಹಿತೆಯನ್ನು ರೂಪಿಸಿ ಅದನ್ನು ತಮ್ಮ ಮನೆಯಿಂದಲೇ ಅನುಷ್ಠಾನ ಮಾಡಿ ಮಾದರಿ ಹಾಕಿಕೊಟ್ಟಿದ್ದರು. ಆದರೆ, ಈಗ ಮಲೆನಾಡಿನ ಗ್ರಾಮಾಂತರ ಭಾಗದ ರಸ್ತೆ ಬದಿಯಲ್ಲಿ ಕಲ್ಯಾಣ ಮಂಟಪಗಳಲ್ಲಿ ಅರ್ಚಕರ ಮಧ್ಯಸ್ಥಿಕೆಯಲ್ಲಿ ಅದ್ಧೂರಿಯಾಗಿ ಮದುವೆ ನಡೆಯುತ್ತಿವೆ. ಇದಕ್ಕೆ ವಿವರಣೆ ಕೊಡುವ ಅಗತ್ಯವಿಲ್ಲ ಎಂದು ಕೊಡಸೆ ಮಾರ್ಮಿಕವಾಗಿ ಹೇಳಿದರು.

ಮಲೆನಾಡಿನಲ್ಲಿ ಭೂತ, ಯಕ್ಷಿಣಿ, ಪಂಜುರ್ಲಿ, ಚೌಡಿಗಳೆಲ್ಲವ ಈಗ ಅರ್ಚಕರ ಮಧ್ಯಸ್ಥಿಕೆ ಬಂದಿರುವುದು ಕಾಣುವಂತಾಗಿದೆ. ಹಿಂದೆ ಹತ್ತಾರು ಗ್ರಾಮಗಳಿಗೆ ಒಂದೊಂದರಂತೆ ಇದ್ದ ನಾಗದೇವತೆ ದೇವಸ್ಥಾನಗಳು ಈಗ ಊರಿಗೊಂದರಂತೆ ಆಗುತ್ತಿವೆ. ತಳ ಸಮುದಾಯಗಳು ಪೂಜಿಸುತ್ತಿದ್ದ ದೇವರುಗಳಿಗೆ ಶಕ್ತಿ ತುಂಬುವ ನೆಪದಲ್ಲಿ ಅವೆಲ್ಲ ಈಗ ಪುರೋಹಿತ ಸಂಪ್ರದಾಯದ ದೇವರುಗಳಾಗಿ ಪರಿವರ್ತನೆ ಆಗುತ್ತಿವೆ ಎಂದು ಅತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.