ADVERTISEMENT

ಎಇಇ, ಲೆಕ್ಕ ಸಹಾಯಕ ಲೋಕಾಯುಕ್ತ ಬಲೆಗೆ

ಕೃಷಿ ವಿ.ವಿ: ಎಫ್‌.ಡಿ ವಾಪಸ್ ಕೊಡಲು ಗುತ್ತಿಗೆದಾರನಿಗೆ ₹40,000 ಲಂಚಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 16:25 IST
Last Updated 15 ಏಪ್ರಿಲ್ 2024, 16:25 IST
ಎಇಇ ಲೋಹಿತ್ ಪ್ರಶಾಂತಕುಮಾರ್
ಎಇಇ ಲೋಹಿತ್ ಪ್ರಶಾಂತಕುಮಾರ್   

ಶಿವಮೊಗ್ಗ: ಕಾಮಗಾರಿಯ ಭದ್ರತಾ ಹಣ (ಎಫ್‌ಡಿ) ವಾಪಸ್ ಕೊಡಲು ಗುತ್ತಿಗೆದಾರನಿಂದ ₹ 30,000 ಲಂಚ ಪಡೆಯುತ್ತಿದ್ದ ಸಾಗರ ತಾಲ್ಲೂಕು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಎಇಇ ಲೋಹಿತ್ ಪ್ರಶಾಂತಕುಮಾರ್‌ ಹಾಗೂ ಲೆಕ್ಕ ಶಾಖೆಯ ಸಹಾಯಕ ಜಿ.ಆರ್.ಗಿರೀಶ್ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಶಿವಮೊಗ್ಗದ ಗುತ್ತಿಗೆದಾರ ಸತೀಶ ಚಂದ್ರ, ವಿಶ್ವವಿದ್ಯಾಲಯ ವ್ಯಾಪ್ತಿಯ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಬಬ್ಬೂರು ಫಾರ್ಮ್‌ನಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಆಡಳಿತ ಕಚೇರಿಯ ಚಾವಣಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದರು. ಅದು ಈಚೆಗೆ ಮುಕ್ತಾಯಗೊಂಡು ಬಿಲ್ ಕೂಡ ಪಾವತಿಯಾಗಿತ್ತು.

ಕಾಮಗಾರಿಗೆ ಸಂಬಂಧಿಸಿದಂತೆ ವ್ಯತ್ಯಾಸ ಮೊತ್ತದ ಎಫ್.ಡಿ ಹಣ ₹ 63,946 ಮರಳಿಸುವಂತೆ ಗುತ್ತಿಗೆದಾರ ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಅದು ಬಿಡುಗಡೆ ಆಗಿರಲಿಲ್ಲ. ಆ ಬಗ್ಗೆ ಎಇಇ ಲೋಹಿತ್‌ ಪ್ರಶಾಂತಕುಮಾರ್ ಬಳಿ ಕೇಳಿದ್ದರು. ಆ ಹಣ ಪಡೆಯಲು ಲೆಕ್ಕ ಸಹಾಯಕ ಗಿರೀಶ್ ಅವರಿಗೆ ₹ 40,000 ಲಂಚ ತಲುಪಿಸುವಂತೆ ಅವರು ಹೇಳಿದ್ದರು. ಲಂಚ ಕೊಟ್ಟರೆ ಮಾತ್ರ ಎಫ್‌.ಡಿ ಮೊತ್ತ ಬಿಡುಗಡೆ ಆಗಲಿದೆ ಎಂದು ಹೇಳಿದ್ದಾಗಿ  ಸತೀಶ ಚಂದ್ರ  ಶಿವಮೊಗ್ಗದ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಪೂರ್ವ ನಿಗದಿಯಂತೆ  ವಿಶ್ವವಿದ್ಯಾಲಯದಲ್ಲಿ ಸತೀಶ ಚಂದ್ರ ಅವರಿಂದ ಆರೋಪಿಗಳು ₹ 30,000 ಲಂಚ ಪಡೆಯುವಾಗ ಲೋಕಾಯುಕ್ತ ‍ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಇನ್‌ಸ್ಪೆಕ್ಟರ್‌ಗಳಾದ ಪ್ರಕಾಶ್ ಹಾಗೂ ವೀರಬಸಪ್ಪ ಎಲ್.ಕುಸುಲಾಪುರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.