ADVERTISEMENT

ಮಂಗನ ಕಾಯಿಲೆ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಎರಡನೇ ಸಾವು

ತೀರ್ಥಹಳ್ಳಿ: ನೂರು ಮಂದಿಯಲ್ಲಿ ಕಾಣಿಸಿಕೊಂಡ ವೈರಾಣು

ಶಿವಾನಂದ ಕರ್ಕಿ
Published 30 ಮಾರ್ಚ್ 2020, 17:20 IST
Last Updated 30 ಮಾರ್ಚ್ 2020, 17:20 IST
ದೇವದಾಸ್ ಹೊಸಬೀಡು
ದೇವದಾಸ್ ಹೊಸಬೀಡು   

ತೀರ್ಥಹಳ್ಳಿ: ಮಂಗನ ಕಾಯಿಲೆ ಉಲ್ಬಣಿಸುತ್ತಿದ್ದು ಸೋಮವಾರ ತಾಲ್ಲೂಕಿನ ಬಾಂಡ್ಯಕುಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಬೀಡು ಗ್ರಾಮದ ರೈತ ದೇವದಾಸ್ (62) ಮೃತಪಟ್ಟಿದ್ದಾರೆ.

ಎರಡು ದಿನಗಳ ಹಿಂದೆ ತಾಲ್ಲೂಕಿನ ಕನ್ನಂಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಚೀರನಕೊಡಿಗೆ ಗ್ರಾಮದ ಗುಲಾಬಿ (55) ಮೃತಪಟ್ಟಿದ್ದರು.

ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೇ ದೇವದಾಸ್ ಮೃತಪಟ್ಟಿದ್ದಾರೆ. ತಾಲ್ಲೂಕಿನಲ್ಲಿ ಇದುವರೆಗೆ 101 ಮಂದಿಯ ದೇಹದಲ್ಲಿ ಮಂಗನ ಕಾಯಿಲೆ ವೈರಾಣು ಇರುವುದು ದೃಢಪಟ್ಟಿದೆ.

ADVERTISEMENT

ಕೊರೊನಾ ವೈರಸ್ ಭೀತಿಯಿಂದ ನಲುಗಿ ಹೋಗಿರುವ ಮಲೆನಾಡಿನ ಜನತೆಗೆ ಮಂಗನ ಕಾಯಿಲೆ ಆಘಾತ ಉಂಟುಮಾಡಿದೆ. ಬಿಸಿಲೇರುತ್ತಿದ್ದಂತೆ ಮಲೆನಾಡಿನಲ್ಲಿ ಮಂಗನ ಕಾಯಿಲೆ ಭೀತಿ ಹೆಚ್ಚುತ್ತಿದೆ. ಅಲ್ಲಲ್ಲಿ ಮಂಗಗಳ ಸಾವು ರೋಗ ಹರಡುವ ತೀವ್ರತೆಯನ್ನು ಹೆಚ್ಚು ಮಾಡಿದೆ. ರೋಗ ನಿಯಂತ್ರಣದ ಸತತ ಪ್ರಯತ್ನದ ನಡುವೆ 4 ದಶಕಗಳಿಂದ ಕಾಡುತ್ತಿರುವ ಮಂಗನ ಕಾಯಿಲೆ ಚಿಕಿತ್ಸೆಗೆ ಈವರೆಗೂ ಶಾಶ್ವತ ಔಷಧ ಲಭ್ಯ ಇಲ್ಲದಿರುವುದು ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ.

ತಾಲ್ಲೂಕಿನಲ್ಲಿ ಆಗಸ್ಟ್ ತಿಂಗಳಿನಿಂದ ಇದುವರೆಗೆ ಸುಮಾರು 70 ಸಾವಿರಕ್ಕೂ ಹೆಚ್ಚು ಜನರಿಗೆ ಮಂಗನ ಕಾಯಿಲೆ ನಿಯಂತ್ರಣದ ಚುಚ್ಚುಮದ್ದು ಲಸಿಕೆ ನೀಡಲಾಗಿದೆ. ಉಣುಗು (ಉಣ್ಣೆ) ನಿಯಂತ್ರಣ ಮಾಡುವ 15 ಸಾವಿರ ಡಿಎಂಪಿ ತೈಲ ಬಾಟಲ್‌ಗಳನ್ನು ವಿತರಿಸಲಾಗಿದೆ.

ಮಂಗನ ಮೃತ ದೇಹ ಪತ್ತೆಯಾದ ಜಾಗದಲ್ಲಿ ಉಣುಗು ಹರಡದಂತೆ 50 ಮೀಟರ್ ಸುತ್ತ ಔಷಧ ಸಿಂಪಡಣೆ ಮಾಡಲಾಗಿದೆ. ಈ ಭಾಗದಲ್ಲಿನ ಜನರಲ್ಲಿ ಜ್ವರ ಕಾಣಿಸಿಕೊಂಡಿದೆಯೇ ಎಂಬ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳದೇ ಇರುವವರಿಗೆ ಲಸಿಕೆ ನೀಡಲಾಗುತ್ತಿದೆ.

ಜನಜಾಗೃತಿ ಕಾರ್ಯಕ್ರವನ್ನು ಗ್ರಾಮ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ಜ್ವರ ನಿಯಂತ್ರಣಕ್ಕಾಗಿ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ಹಣ ವೆಚ್ಚ ಮಾಡುತ್ತಿದ್ದರೂ ವೈದ್ಯಕೀಯ ಕ್ಷೇತ್ರ ಪರಿಣಾಮಕಾರಿಯಾದ ಬದಲಾವಣೆ ಕಂಡರೂ ಮಂಗನ ಕಾಯಿಲೆಗೆ ಔಷಧ ಕಂಡುಹಿಡಿಯಲು ಸಾಧ್ಯವಾಗಿಲ್ಲದೇ ಇರುವುದು ಜನರನ್ನು ಆತಂಕಕ್ಕೆ ನೂಕಿದೆ.

ಚುಚ್ಚುಮದ್ದು ಲಸಿಕೆ ನೀಡುವುದು, ಡಿಎಂಪಿ ತೈಲ ಹಂಚುವುದು, ಜಾಗೃತಿ ಕಾರ್ಯಕ್ರಮ ನಡೆಸುವುದು, ವೈದ್ಯರು, ವೈದ್ಯಕೀಯೇತರ ಸಿಬ್ಬಂದಿ ಪಾಲ್ಗೊಳ್ಳುವಿಕೆ, ಇತರ ಇಲಾಖೆಗಳ ಸಹಭಾಗಿತ್ವ ನಿರಂತರವಾಗಿ ನಡೆಸಲಾಗಿದ್ದರೂ ಮಂಗನ ಕಾಯಿಲೆ ನಿಯಂತ್ರಣ ಸಾಧ್ಯವಾಗದಂತಾಗಿದೆ. ಕಳೆದ ವರ್ಷ 3 ಮಂದಿ ಮಂಗನ ಕಾಯಲೆಗೆ ಬಲಿಯಾಗಿದ್ದು ಈ ಬಾರಿ ಲಸಿಕೆ ಪಡೆದ ಹೆಚ್ಚು ಜನರಲ್ಲಿ ರೋಗಾಣು ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿಸಿದೆ.

ತಾಲ್ಲೂಕಿನ ಕನ್ನಂಗಿ, ದಾನಸಾಲೆ, ತನಿಕಲ್ಲು, ದಬ್ಬಣಗದ್ದೆ, ಮಹಿಷಿ, ಮಾಳೂರು, ಬೆಟ್ಟಬಸರವಾನಿ, ಕುಡುಮಲ್ಲಿಗೆ, ಹಣಗೆರೆ, ಹೆಮ್ಮಕ್ಕಿ, ತೋಟದಕೊಪ್ಪ, ಸಿಂಧುವಾಡಿ, ದೇಮ್ಲಾಪುರ, ಸಿಂಧುವಾಡಿ, ಸಾಲೇಜನಗಲ್ಲು, ಗುತ್ತಿಯಡೇಹಳ್ಳಿ, ಬಾವಿಕೈಸರು, ಕುಡುವಳ್ಳಿ, ಚಿಡುವ, ಮಂಡಗದ್ದೆ, ಯೋಗಿಮಳಲಿ, ಕಟಗಾರು, ಮೇಳಿಗೆ, ಕುಂಟುವಳ್ಳಿ ಮುಂತಾದ ಭಾಗದಲ್ಲಿ ಚುಚ್ಚುಮದ್ದು ಲಸಿಕೆನೀಡಿ, ಡಿಎಂಪಿ ತೈಲ ವಿತರಿಸಲಾಗಿದೆ. ಕೋಣಂದೂರು, ಆರಗ ಯೋಗಿಮಳಲಿ, ಗುಡ್ಡೇಕೊಪ್ಪ ಗ್ರಾಮಗಳಲ್ಲಿ ಉಣ್ಣೆಗಳಲ್ಲಿ ಮಂಗನ ಕಾಯಿಲೆ ವೈರಸ್ ಪತ್ತೆಯಾಗಿದೆ. ಬೇಸಿಗೆ ಬಂತೆಂದರೆ ಜೀವ ಭಯದಿಂದ ನಲುಗಿಹೋಗುವ ಜನರಿಗೆ ಅಲ್ಲಲ್ಲಿ ಮಂಗಗಳು ಸಾಯುತ್ತಿರುವ ಸುದ್ದಿ ದುಃಸ್ವಪ್ನದಂತೆ ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.