ADVERTISEMENT

ಮಾಡಾಳು ಬಂಧನಕ್ಕೆ ರಚಿಸಿದ್ದ 7 ತಂಡ ಸಿಎಂ ಮನೆಯಲ್ಲಿ ಠಿಕಾಣಿ ಹೂಡಿದ್ದವೇ: ಕಿಮ್ಮನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 7:38 IST
Last Updated 10 ಮಾರ್ಚ್ 2023, 7:38 IST
   

ಶಿವಮೊಗ್ಗ: ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಂಧನಕ್ಕೆ ನಿಯೋಜಿಸಿದ್ದ ಲೋಕಾಯುಕ್ತ ಪೊಲೀಸರ ಏಳು ತಂಡಗಳು ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಯಲ್ಲಿ ಠಿಕಾಣಿ ಹೂಡಿದ್ದವೇ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಪ್ರಶ್ನಿಸಿದರು.

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಶುಕ್ರವಾರ ಇಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾಮೀನು ಸಿಕ್ಕ ಅರ್ಧ ಗಂಟೆಯಲ್ಲಿ ಮಾಡಾಳು ವಿರೂಪಾಕ್ಷಪ್ಪ ಮೆರವಣಿಗೆಯಲ್ಲಿ ಬರುತ್ತಾರೆ. ಪ್ರಕರಣದಲ್ಲಿ ಎ1 ಆರೋಪಿ ಅವರು. ಆದರೂ ಜಾಮೀನು ಸಿಗುತ್ತದೆ. ಇದನ್ನೆಲ್ಲ ಗಮನಿಸಿದರೆ ಲೋಕಾಯುಕ್ತ ಪೊಲೀಸರು ಸರ್ಕಾರದ ಸೂಚನೆಯಂತೆ ಮಾಡಾಳು ಪರವಾಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಬಡವರ ಪರವಾಗಿ ಯಾವತ್ತೂ ಕೆಲಸ ಮಾಡದ ಬಿಜೆಪಿ ದೇಶಕ್ಕೆ ಅಂಟಿರುವ ಕ್ಯಾನ್ಸರ್. ಅದನ್ನು ಸಂಪೂರ್ಣ ತೆಗೆದು ಹಾಕಬೇಕಿದೆ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್ ಪಡಿತರ ಅಕ್ಕಿಯ ಜೊತೆಗೆ ಬಡವರಿಗೆ ಬೇಳೆ, ಸೀಮೆಎಣ್ಣೆ, ಉಪ್ಪು, ಸಕ್ಕರೆ ಎಲ್ಲವನ್ನೂ ಕೊಟ್ಟಿತ್ತು. ಆದರೆ ಬಿಜೆಪಿ ಉಪ್ಪು, ಸೀಮೆಎಣ್ಣೆ ಇರಲಿ ಕೊಡುತ್ತಿದ್ದ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಿದೆ. ಹಾಗಿದ್ದರೂ ಜನರು ಬಿಜೆಪಿಗೆ ಏಕೆ ಮತ ಹಾಕುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಬಿಜೆಪಿ ಬಡವರಿಗೆ ಮಾಡಿರುವ ದ್ರೋಹವನ್ನು ಕಾರ್ಯಕರ್ತರು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸಬೇಕು ಎಂದು ಕಿಮ್ಮನೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.