ADVERTISEMENT

ತೀರ್ಥಹಳ್ಳಿ: ಮೋದಿಗೂ ಪುಟಿನ್‌ಗೂ ಯಾವುದೇ ವ್ಯತ್ಯಾಸ ಇಲ್ಲ: ಕಿಮ್ಮನೆ ರತ್ನಾಕರ

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಟೀಕೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 4:54 IST
Last Updated 26 ಮಾರ್ಚ್ 2022, 4:54 IST
ಕಿಮ್ಮನೆ ರತ್ನಾಕರ
ಕಿಮ್ಮನೆ ರತ್ನಾಕರ   

ತೀರ್ಥಹಳ್ಳಿ: ‘ಬಿಜೆಪಿ ಮುಖಂಡರು ಉಪ ಜಾತಿಗಳ ಮಾನ್ಯತೆಯ ಹಕ್ಕಿಗಾಗಿ ಬೇಡಿಕೆ ನೀಡುತ್ತಿರುವ ಸಂದರ್ಭದಲ್ಲಿ ಹಿಂದೂ ಒಂದು ಎಂಬ ಧಾರ್ಮಿಕ ಪ್ರಚೋದನೆಗೆ ಬೆಲೆ ಇಲ್ಲ. ಮಹಾತ್ಮ ಗಾಂಧಿ ಒಕ್ಕೂಟ ಭಾರತ ನೀಡಿದ್ದರು. ಇದೇ ರೀತಿ ಧರ್ಮದ ಅಮಲು ಹೆಚ್ಚಾದರೆ ದೇಶವು 20 ಛಿದ್ರವಾಗಲಿದೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಎಚ್ಚರಿಸಿದರು.

ಶುಕ್ರವಾರ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಪುಟಿನ್‌ ಉಕ್ರೇನ್‌ ಮೇಲೆ ದಾಳಿ ನಡೆಸಿದ್ರೆ, ಮೋದಿ ಜನರ ಮನಸ್ಸನ್ನು ಧರ್ಮದ ಹೆಸರಿನಲ್ಲಿ ಕಲುಷಿತಗೊಳಿಸುತ್ತಿದ್ದಾರೆ. ಮೋದಿಗೂ ಪುಟಿನ್‌ಗೂ ಯಾವುದೇ ವ್ಯತ್ಯಾಸ ಇಲ್ಲ’ ಎಂದು
ಹೇಳಿದರು.

‘ಜನೋಪಯೋಗಿ ಯೋಜನೆ ಜಾರಿ ಮಾಡದೇ ಧರ್ಮದ ಆಧಾರದ ಮೇಲೆ 8 ವರ್ಷಗಳ ಕಾಲ ಕೇಂದ್ರದ ಆಡಳಿತ ನಡೆದಿದೆ. ಬೆಲೆ ಏರಿಕೆ, ಬಡತನ, ನಿರುದ್ಯೋಗದಿಂದ ಜನಸಾಮಾನ್ಯರು ಬಳಲುತ್ತಿದ್ದಾರೆ. ಇದರ ನಡುವೆ ಆರ್ಟಿಕಲ್‌ 370, ತ್ರಿವಳಿ ತಲಾಕ್‌,
ಗೋ ಸಂರಕ್ಷಣೆ, ಬಾಬರಿ ಮಸೀದಿ, ಈದ್ಗಾ ಮೈದಾನ, ದತ್ತಪೀಠ, ಹಿಜಾಬ್‌... ಎಂಬ ವಿಷಯಗಳ ಆಧಾರದ ಮೇಲೆ ಧರ್ಮದ ಪ್ರಚೋದನೆ ಮಾಡಲಾಗಿದೆ’ ಎಂದು ದೂರಿದರು.

ADVERTISEMENT

‘ಬಿಜೆಪಿ ನಾಯಕರು ದೃಶ್ಯ ಮಾಧ್ಯಮ ನಡೆಸುತ್ತಿದ್ದಾರೆ. ಹಾಗಾಗಿ ಸುದ್ದಿಗಳು ಪಕ್ಷ ಕೇಂದ್ರಿತ ಪ್ರಸರಣದಲ್ಲಿ ತೊಡಗಿವೆ. ಕಾಂಗ್ರೆಸ್‌ ಪಕ್ಷದಲ್ಲಿ ಒಬ್ಬ ತಪ್ಪು ಮಾಡಿದರೆ 50 ಜನ ಅದರ ವಿರುದ್ಧ ನಿಲ್ಲುತ್ತಾರೆ. ಬಿಜೆಪಿಯಲ್ಲಿ ತದ್ವಿರುದ್ಧ ಕಲ್ಪನೆ ಬೆಳೆಸಲಾಗಿದೆ. ಆಂತರಿಕ ಸ್ವಾತಂತ್ರ್ಯಕಳೆದುಕೊಂಡವರು ಬಿಜೆಪಿಯೊಳಗೆ ಬದುಕುತ್ತಾರೆ’ ಎಂದು ಟೀಕಿಸಿದರು.

ಕೆಪಿಸಿಸಿ ಸದಸ್ಯ ಜಿ.ಎಸ್‌. ನಾರಾಯಣ ರಾವ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷೆ
ಶಬನಮ್‌, ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಮುಂಖಡರಾದ ಬೇಡನಬೈಲು ಯಲ್ಲಪ್ಪ, ವಿಲಿಯಂ ಮಾರ್ಟೀಸ್‌, ಮಂಜುನಾಥ್‌
ಇದ್ದರು.

ಬಂದೂಕು ತರಬೇತಿ ಹೆಸರಿನಲ್ಲಿ ಹಣ ಸಂಗ್ರಹ

‘ಗೃಹ ಸಚಿವ ಆರಗ ಜ್ಞಾನೇಂದ್ರ ಕಾಲ ಘಟ್ಟದಲ್ಲಿ ಪೊಲೀಸರಿಗೆ ಕೇಸರಿ ಬಟ್ಟೆ ಹಾಕಿಸಲಿ. ಬಿಜೆಪಿಯೇತರರ ದೂರುಗಳು ಠಾಣೆಯಲ್ಲಿ ದಾಖಲಾಗುವುದಿಲ್ಲ. ಬುಕ್ಲಾಪುರ ಕ್ವಾರಿಯಲ್ಲಿ ದಿನವೊಂದಕ್ಕೆ₹ 5 ಲಕ್ಷ ವ್ಯವಹಾರ ನಡೆಯುತ್ತಿದೆ. ಬಿಜೆಪಿಗರು ದಂಧೆಯಲ್ಲಿ ತೊಡಗಿದ್ದಾರೆ. ಬಂದೂಕು ತರಬೇತಿಯ ಹೆಸರಿನಲ್ಲಿ ₹ 26 ಲಕ್ಷ ಸಂಗ್ರಹಿಸಲಾಗಿದೆ. ₹ 4,200 ಖರ್ಚಿನ ಅಗತ್ಯವೇನಿದೆ. ಎಸ್‌ಪಿ, ಡಿವೈಎಸ್‌, ಸಚಿವರು ಇದಕ್ಕೆ ಸ್ಪಷ್ಟನೆ ನೀಡದಿದ್ದರೆ ಠಾಣೆಯ ಎದುರು ಧರಣಿ ನಡೆಸಲಾಗುವುದು’ ಎಂದು ಕಿಮ್ಮನೆ ರತ್ನಾಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.