ಕೋಣಂದೂರು: ಇಲ್ಲಿನ ಮುಖ್ಯ ರಸ್ತೆಯ ವಿಸ್ತರಣೆ ಕಾಮಗಾರಿಗಾಗಿ ಮರಗಳನ್ನು ಕಡಿಯಬಾರದು ಎಂದು ಪರಿಸರವಾದಿಗಳು ವಿರೋಧ ವ್ಯಕ್ತಪಡಸಿದ ಹಿನ್ನೆಲೆಯಲ್ಲಿ ಸಿಸಿಎಫ್ ಹನುಮಂತಪ್ಪ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದರು.
₹ 25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಗಾಗಿ 26 ಮರಗಳಲ್ಲಿ 22 ಮರಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಉಳಿದ ಮರಗಳು ಅಪಾಯಕಾರಿಯಾಗಿವೆ. ಅವುಗಳನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಪರಿಸರವಾದಿಗಳು ಮರಗಳನ್ನು ಕಡಿಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹನುಮಂತಪ್ಪ ಹೇಳಿದರು.
ಬೃಹತ್ ಮರಗಳ ರೆಂಬೆಗಳು ರಸ್ತೆಯ ಭಾಗಕ್ಕೆ ವ್ಯಾಪಿಸಿದ್ದು, ಮಳೆ, ಬಿರುಗಾಳಿಗೆ ಕೊಂಬೆಗಳು ಮುರಿದು ಬೀಳುತ್ತಿವೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಮರಗಳು ಬಿದ್ದರೆ ವಿದ್ಯುತ್ ಕಂಬಗಳಿಗೂ ಹಾನಿಯಾಗುತ್ತದೆ. ಮರಗಳ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದನ್ನು ಗಮನದಲ್ಲಿಟ್ಟುಕೊಳ್ಳದೇ ತೆರವು ಮಾಡಬೇಕು ಎಂದು ಗ್ರಾಮದ ಜೋಜಿ ಒತ್ತಾಯಿಸಿದರು.
ಎಸಿಎಫ್ ಐಶ್ವರ್ಯಾ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಾ ವಾಸುದೇವ, ಉಪಾಧ್ಯಕ್ಷೆ ಸುಜಾತಾ ಚೂಡಾಮಣಿ, ಸದಸ್ಯರಾದ ಕೆ.ವಿ. ರತ್ನಾಕರ, ಎ.ಸಿ. ಪೂರ್ಣೇಶ್, ಕಂಪದಗದ್ದೆ ಸುರೇಶ್, ಲಕ್ಷ್ಮಿ, ವರ್ತಕ ಸಂಘದ ಅಧ್ಯಕ್ಷ ಕೆ.ಆರ್. ಪ್ರಕಾಶ್, ಗ್ರಾಮಸ್ಥರಾದ ದೇವರಾಜ್ ಶೆಟ್ಟಿ, ರಾಮದಾಸ್ ಪ್ರಭು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.