ADVERTISEMENT

ಸಂಪತ್ತು ಸಂರಕ್ಷಿಸುವ ಹೊಣೆಯೇ ನಿಜವಾದ ಸಾಮರ್ಥ್ಯ

ಡಾ.ಶಿವರಾಮ ಕಾರಂತ ವಿಜ್ಞಾನ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿದ ನಾಗೇಶ್ ಹೆಗಡೆ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 16:12 IST
Last Updated 13 ಏಪ್ರಿಲ್ 2019, 16:12 IST
ಶಿವಮೊಗ್ಗ ಕರ್ನಾಟಕ ಸಂಘ ನೀಡುವ ‘ಜೀವಮಾನ ಸಾಧನೆ ಪ್ರಶಸ್ತಿ’ಗಳಾದ ಡಾ. ಶಂ.ಬಾ. ಜೋಷಿ ಪ್ರಶಸ್ತಿಯನ್ನು ಡಾ. ಬಿ.ಎ. ವಿವೇಕ ರೈ, ಶಿವರಾಮ ಕಾರಂತ ವಿಜ್ಞಾನ ಸಾಹಿತ್ಯ ಪ್ರಶಸ್ತಿಯನ್ನು ನಾಗೇಶ ಹೆಗಡೆ ಅವರಿಗೆ ಶನಿವಾರ ಪ್ರದಾನ ಮಾಡಲಾಯಿತು.
ಶಿವಮೊಗ್ಗ ಕರ್ನಾಟಕ ಸಂಘ ನೀಡುವ ‘ಜೀವಮಾನ ಸಾಧನೆ ಪ್ರಶಸ್ತಿ’ಗಳಾದ ಡಾ. ಶಂ.ಬಾ. ಜೋಷಿ ಪ್ರಶಸ್ತಿಯನ್ನು ಡಾ. ಬಿ.ಎ. ವಿವೇಕ ರೈ, ಶಿವರಾಮ ಕಾರಂತ ವಿಜ್ಞಾನ ಸಾಹಿತ್ಯ ಪ್ರಶಸ್ತಿಯನ್ನು ನಾಗೇಶ ಹೆಗಡೆ ಅವರಿಗೆ ಶನಿವಾರ ಪ್ರದಾನ ಮಾಡಲಾಯಿತು.   

ಶಿವಮೊಗ್ಗ: ಒಂದು ದೇಶದ ನಿಜವಾದ ಸಾಮರ್ಥ್ಯ ಅಲ್ಲಿನನೈಸರ್ಗಿಕ ಸಂಪತ್ತುಸಂರಕ್ಷಿಸಿಕೊಳ್ಳುವ ಹೊಣೆ ಅವಲಂಬಿಸಿದೆ ಎಂದು ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ ಪ್ರತಿಪಾದಿಸಿದರು.

ಕರ್ನಾಟಕ ಸಂಘದ ಸಭಾಂಗಣದಲ್ಲಿ ಶನಿವಾರ ಡಾ.ಶಿವರಾಮ ಕಾರಂತ ವಿಜ್ಞಾನ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ರಸ್ತೆಗಳು, ವಿಮಾನನಿಲ್ದಾಣ, ರೈಲ್ವೆ ಯೋಜನೆ, ಬಂದರು ನಿರ್ಮಾಣ, ಮೂಲ ಸೌಕರ್ಯಗಳನ್ನು ಒದಗಿಸುವುದೇ ಅಭಿವೃದ್ಧಿ ಎಂದು ಸರ್ಕಾರಗಳು ಭಾವಿಸಿವೆ. ನಮ್ಮ ನೈಸರ್ಗಿಕ ಸಂಪತ್ತು, ಕಾಡು, ನದಿ, ಕೆರೆ, ಕಟ್ಟೆ ಉಳಿಸಿಕೊಂಡು ಮೂಲಸೌಕರ್ಯ ನೀಡುವುದೇ ನಿಜವಾದಅಭಿವೃದ್ಧಿ ಎಂದರು.

ADVERTISEMENT

ಶಿವರಾಮ ಕಾರಂತರು ಸಾಹಿತಿಯಾದರೂ ಅದರಾಜೆ ಅವರು ವಿಶ್ವದೃಷ್ಟಿ ಹೊಂದಿದ್ದರು. ವಿಜ್ಞಾನ, ತಂತ್ರಜ್ಞಾನದ ಆಳ ಅರಿವಿನ ಆಧಾರದಲ್ಲಿ ಪರಿಸರದ ಅಗತ್ಯತೆ ಪ್ರತಿಪಾದಿಸುತ್ತಿದ್ದರು. ಅವುಗಳ ಮಹತ್ವ, ಜೀವಸಂಕುಲದಲ್ಲಿ ಅವುಗಳ ಪಾತ್ರ. ಮನುಷ್ಯನಿಗೆ ಅದರಿಂದಾಗುವ ಉಪಕಾರ ಅರ್ಥಮಾಡಿಸುತ್ತಿದ್ದರು. ಹಾಗಾಗಿಯೇ, ಅವರು ಪಶ್ಚಿಮಘಟ್ಟ ಉಳಿಸಿ ಆಂದೋಲನ, ಕೈಗಾ ಅಣು ಸ್ಥಾವವರದ ವಿರುದ್ಧ ಹೋರಾಟ ರೂಪಿಸಿದ್ದರು. ಅದರಿಂದಾಗುವ ಅನಾಹುತ ಮನವರಿಕೆ ಮಾಡಿಕೊಡುತ್ತಿದ್ದರು ಎಂದು ಶ್ಲಾಘಿಸಿದರು.

ಸಾಹಿತಿಯಾಗಿದ್ದರೂಸಮಾಜಮುಖಿ ಚಿಂತನೆ ಮಾಡುತ್ತಿದ್ದರು. ಆರ್ಥಿಕ ಅಸಮತೋಲನ ಕಂಡು ಮರುಗುತ್ತಿದ್ದರು.ಬಡವ–ಶ್ರೀಮಂತರ ನಡುವಿನ ಅಂತರ ಹೆಚ್ಚಳ ಕುರಿತು ಕಳವಳ ವ್ಯಕ್ತಪಡಿಸುತ್ತಿದ್ದರು. ಪರಿಸರಕ್ಕಾಗಿ ಪ್ರತಿಷ್ಠೆ ಪಣಕ್ಕಿಟ್ಟು ಚುನಾವಣೆಗೆ ಸ್ಪರ್ಧಿಸಿದ್ದ ಧೀಮಂತ ಸಾಹಿತಿ. ಅಂತಹ ವ್ಯಕ್ತಿ ಮತ್ತೆ ಹುಟ್ಟಿಬಂದಿಲ್ಲಎಂದು ಸ್ಮರಿಸಿದರು.

ಡಾ. ಶಂ.ಬಾ. ಜೋಷಿ ಸಂಶೋಧನಾ ಪ್ರಶಸ್ತಿ ಸ್ವೀಕರಿಸಿದ ವಿಶ್ರಾಂತ ಕುಲಪತಿ ಬಿ.ಎ.ವಿವೇಕ ರೈ ಮಾತನಾಡಿ, ಕುವೆಂಪು ಹಾಗೂ ಶಿವರಾಮ ಕಾರಂತರು ತಮ್ಮ ಮೇಲೆ ವೈಚಾರಿಕ ಪ್ರಭಾವ ಬೀರಿದ್ದರು. ಅವರ ಪ್ರಭಾವದಿಂದ ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ. ನನಗೂ ಮೊದಲೇ ಹುಟ್ಟಿದ ಕರ್ನಾಟಕ ಸಂಘದಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.

ಶಂ.ಬಾ. ಜೋಷಿ ಅವರು ಬೌಗೋಳಿಕ ಚೌಕಟ್ಟು, ಜಾತಿಯ ಬೇಲಿ ದಾಟಿ ಸಂಶೋಧನೆ ನಡೆಸಿದ ಮಹಾನುಭಾವರು. ಅವರ ತೌಲನಿಕ ಅಧ್ಯಯನದ ಸಂಶೋಧನೆಗಳು ಇಂದಿಗೂ ಮಾದರಿ ಎಂದು ಬಣ್ಣಿಸಿದರು.

ನಿವೃತ್ತ ಪ್ರಾಂಶುಪಾಲ ಡಾ.ಸತ್ಯನಾರಾಯಣ ಮಲ್ಲಿಪಟ್ಟಣ ಮಾತನಾಡಿ, ವಿವೇಕ ರೈ ತುಳು ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರು. ಅವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಇಂದಿಗೂ ಉತ್ತಮ ಕೆಲಸಗಳು ನಡೆಯುತ್ತಿವೆ. ಸೌಮ್ಯ ಸ್ವಭಾವದ ಅವರು ಕನ್ನಡ ಭಾಷೆಯ ಕೆಲಸಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದರು. ಇದುವರೆಗೂ 17 ಕೃತಿ ಪ್ರಕಟಿಸಿದ್ದಾರೆ ಎಂದು ವಿವರ ನೀಡಿದರು.

ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳ್ಳಿ ಮಾತನಾಡಿ, ನಾಗೇಶ ಹೆಗಡೆ ಅವರ ‘ಇರುವುದೊಂದೇ ಭೂಮಿ’ ಕೃತಿ ನನ್ನಂಥ ಲಕ್ಷಾಂತರ ಯುವಕರಲ್ಲಿ ಪರಿಸರದ ಪ್ರಜ್ಞೆ ಬೆಳೆಸಿದೆ. ಹೋರಾಟದ ಕಿಚ್ಚು ಹಚ್ಚಿದೆ. ಆ ಪುಸ್ತಕದ ಮೂಲಕ ಅವರು ನನಗೆ ಪರೋಕ್ಷ ಗುರು. ಪರಿಸರ ನಾಶದ ದುಷ್ಪರಿಣಾಮ ಕುರಿತು ಅವರು ಮೂರು ದಶಕಗಳ ಹಿಂದೆಯೇ ಎಚ್ಚರಿಸಿದ್ದರು. ಸಿದ್ಧಾಂತಗಳ ಸುದ್ದಿಗೆ ಬಂದರೆ ಸೌಮ್ಯ ಸ್ವಭಾವದ ಅವರದು ಈಗಲೂ ವಜ್ರಮುಷ್ಠಿ ಎಂದು ಶ್ಲಾಘಿಸಿದರು.

ಇಂದು ಮಳೆಗಾಗಿ ಮೋಡಬಿತ್ತನೆ, ಕುಡಿಯುವ ನೀರಿಗಾಗಿ 10 ಸಾವಿರ ಅಡಿ ಕೆಳಗಿನಿಂದ ನೀರು ತರುವ ಯೋಜನೆ ರೂಪಿಸಲಾಗುತ್ತಿದೆ. ಪರಿಸರ ಉಳಿಸಿಕೊಳ್ಳದೆ ಮಾಡುವ ಇಂತಹ ತಂತ್ರಗಳು ದುಡ್ಡು ಹೊಡೆಯುವ ದಾರಿಗಳು. ಇಂತಹ ವಿಷಯಗಳ ಕುರಿತು ಸರ್ಕಾರಕ್ಕೆ ಛಾಟಿ ಬೀಸುವ ಸಾಹಿತಿಗಳಮೇಲೆ ಮುಗಿಬೀಳಲು ಕೆಲವು ಪಕ್ಷಗಳು ಹೊಸ ಸಾಹಿತಿಗಳನ್ನು ಸೃಷ್ಟಿಸುತ್ತಿವೆ. ಅವರಿಗೆ ತರಬೇತಿ ನೀಡಿ ಬುದ್ಧಿ ಹೇಳುವ ಸಾಹಿತಿಗಳ ವಿರುದ್ಧ ಎತ್ತಿ ಕಟ್ಟಿತ್ತಿವೆ ಎಂದು ಗಂಬೀರ ಆರೋಪ ಮಾಡಿದರು.

ಸಂಘದ ಉಪಾಧ್ಯಕ್ಷಡಾ.ಕೆ.ಎನ್. ಗುರುದತ್ತ, ಕಾರ್ಯದರ್ಶಿ ಎಚ್‌.ಎಸ್.ನಾಗಭೂಷಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.