ADVERTISEMENT

‘ಸಾಧುಶೆಟ್ಟಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿ’

ಕಾಮಾಕ್ಷಿ ಸಮುದಾಯ ಭವನ ಉದ್ಘಾಟನೆ; ಕೆ.ಎಸ್.ಈಶ್ವರಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 4:56 IST
Last Updated 5 ಆಗಸ್ಟ್ 2025, 4:56 IST
ಶಿವಮೊಗ್ಗ ನಗರದ ಮಿಷನ್ ಕಾಂಪೌಂಡ್ ಸಮೀಪದ ಪಾರ್ಕ್ ಬಳಿ ನಿರ್ಮಿಸಿರುವ ಕಾಮಾಕ್ಷಿ ಸಮುದಾಯ ಭವನವನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು
ಶಿವಮೊಗ್ಗ ನಗರದ ಮಿಷನ್ ಕಾಂಪೌಂಡ್ ಸಮೀಪದ ಪಾರ್ಕ್ ಬಳಿ ನಿರ್ಮಿಸಿರುವ ಕಾಮಾಕ್ಷಿ ಸಮುದಾಯ ಭವನವನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು   

ಶಿವಮೊಗ್ಗ: ‘ಸಮಾಜದ ಕೆಲಸ ದೇವರ ಕೆಲಸ ಎಂದರಿತು, ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು. 

‘24 ಮನೆ ಸಾಧುಶೆಟ್ಟಿ ಮಹಿಳಾ ಜಿಲ್ಲಾ ಸಂಘ’ದಿಂದ ಸೋಮವಾರ ಇಲ್ಲಿನ ಮಿಷನ್ ಕಾಂಪೌಂಡ್ ಸಮೀಪ ಪಾರ್ಕ್ ಬಳಿಯಲ್ಲಿ ನಿರ್ಮಿಸಿರುವ ಕಾಮಾಕ್ಷಿ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಎಲ್ಲ ರಂಗಗಳಲ್ಲಿಯೂ ಸಾಧುಶೆಟ್ಟಿ ಸಮಾಜ ಅಭಿವೃದ್ಧಿ ಹೊಂದುತ್ತಿದೆ. ಸಮಾಜದ ಯುವಕರು ವಿದ್ಯಾವಂತರಾಗಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅನೇಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಇದರಿಂದ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ’ ಹರ್ಷ ವ್ಯಕ್ತಪಡಿಸಿದರು.

ADVERTISEMENT

‘ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಈ ಸಮಾಜದ ಯುವಕರು ಮುಂದಿದ್ದಾರೆ. ಇತ್ತೀಚೆಗೆ ಈ ಸಮಾಜದಿಂದ ಐಎಎಸ್, ಕೆಎಎಸ್ ವಿದ್ಯಾರ್ಥಿಗಳೂ ಹೊರಹೊಮ್ಮುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.

‘ಸಾಧುಶೆಟ್ಟಿ ಸಮಾಜದವರು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು. ನಾವು ಎಷ್ಟೇ ಸ್ಥಿತಿವಂತರಾಗಿರಬಹುದು. ಆದರೆ, ಶಿಕ್ಷಣ ಬಹಳ ಮುಖ್ಯ. ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲೂ ಪಾಲ್ಗೊಳ್ಳಲು ಉತ್ತೇಜನ ನೀಡಬೇಕು’ ಎಂದು ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಜಿ.ಅಶ್ವಿನಿ ಸಲಹೆ ನೀಡಿದರು.

‘ಸಮಾಜದ ಕಾರ್ಯಕ್ರಮಗಳಿಗೆ ರಿಯಾಯಿತಿ ದರದಲ್ಲಿ ಭವನ ಲಭಿಸುವಂತಾಗಬೇಕು. ಇದರಿಂದ, ಕಡುಬಡವರಿಗೆ ಅನಕೂಲವಾಗುತ್ತದೆ’ ಎಂದು ಸೂಡಾ ಮಾಜಿ ಅಧ್ಯಕ್ಷ ರಾಜು ಹೇಳಿದರು.

‘ಜಿಲ್ಲೆಯಲ್ಲಿ ಸಾಧುಶೆಟ್ಟಿ ಸಮಾಜ ಸದೃಢವಾಗಿದೆ. ಆದ್ದರಿಂದ, ರಾಜಕೀಯ ಕ್ಷೇತ್ರದಲ್ಲಿಯೂ ಸಮಾಜ ಹೆಚ್ಚಾಗಿ ಗುರುತಿಸಿಕೊಳ್ಳಬೇಕು’ ಎಂದು ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ನರಸಿಂಹ ಗಂಧದಮನೆ ಹೇಳಿದರು.  

ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಡಿ.ಎಸ್. ಅರುಣ್, ಡಾ.ಧನಂಜಯ ಸರ್ಜಿ, ಹೊಸಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಲೀಲಾವತಿ ರಾಮು, ಕೆಪಿಸಿಸಿ ಸಂಯೋಜಕ ಆರ್.ಮೋಹನ್ ಕುಮಾರ್, ಮಂಗೇಶ್ವರ, ಎನ್. ರಮೇಶ್, ಶೋಭಾ ಕೆ.ಆರ್, ಕೇಶವಮೂರ್ತಿ, ಎಸ್.ಎಲ್. ಕೃಷ್ಣಮೂರ್ತಿ, ಡಿ. ಗೋವಿಂದರಾಜ್, ಎಸ್. ಶಿವಾನಂದ್, ಡಿ.ಜಿ. ಕಿರಣ್, ಚೈತ್ರಾ ಮೋಹನ್, ಲೀಲಾವತಿ ರಾಮು, ಬಿ. ರಘು, ಸೋಮಶೇಖರ್ ಇದ್ದರು.

ಸಾಧುಶೆಟ್ಟಿ ಎಂದೇ ನಮೂದಿಸಿ

‘ಸೆ. 28ರಿಂದ ಜಾತಿಗಣತಿ ಸಮೀಕ್ಷೆ ನಡೆಯುತ್ತಿದ್ದು ನಮ್ಮಲ್ಲಿ ಅನೇಕ ಉಪ ಪಂಗಡಗಳಿವೆ. ರಾಜ್ಯದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯನ್ನು ಹಿಂದಿನ ಸಮೀಕ್ಷೆ ತೋರಿಸಿತ್ತು. ಈಗ ನಾವೆಲ್ಲರೂ ಒಂದಾಗಿ ಸಾಧುಶೆಟ್ಟಿ ಎಂದೇ ನಮೂದಿಸಬೇಕು’ ಎಂದು ಸಮಾಜದ ಅಧ್ಯಕ್ಷ ಉಮಾಪತಿ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.