ADVERTISEMENT

ಶಿವಮೊಗ್ಗ: ಕೆರೆ ಅಂಗಳವಾದ ಕೆಎಸ್‌ಸಿಎ ಕ್ರೀಡಾಂಗಣ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 4:23 IST
Last Updated 25 ಜುಲೈ 2021, 4:23 IST
ಶಿವಮೊಗ್ಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ನವುಲೆಯಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣ ಜಲಾವೃತಗೊಂಡಿರುವುದು
ಶಿವಮೊಗ್ಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ನವುಲೆಯಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣ ಜಲಾವೃತಗೊಂಡಿರುವುದು   

ಶಿವಮೊಗ್ಗ: ಕೆರೆಗಳನ್ನು ಕೆರೆಗಳಾಗಿಯೇ ಉಳಿಸಬೇಕು. ಇಲ್ಲದಿದ್ದರೆ ಪ್ರಕೃತಿಯೇ ಮನುಷ್ಯನ ತಪ್ಪನ್ನು ತಿದ್ದುತ್ತದೆ ಎಂಬುದಕ್ಕೆ ಶಿವಮೊಗ್ಗದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣ ಸಾಕ್ಷಿಯಾಗಿದೆ.

ನಗರ ಹೊರವಲಯದಲ್ಲಿರುವ ನವುಲೆಯ ಕೆರೆಯನ್ನು ಜನರ ವಿರೋಧದ ನಡುವೆಯೂ ಮುಚ್ಚಿ ಕ್ರೀಡಾಂಗಣ ನಿರ್ಮಿಸಲಾಗಿತ್ತು. ಇದೀಗ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕ್ರೀಡಾಂಗಣ ಕೆರೆಯಾಗಿದೆ.

ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕ್ರೀಡಾಂಗಣದಲ್ಲಿ ನಾಲ್ಕೈದು ಅಡಿ ನೀರು ನಿಂತಿದೆ.

ADVERTISEMENT

ಅಲ್ಲಿಗೆ ತೆರಳುವ ರಸ್ತೆಯ ಮೇಲೂ ನೀರು ಹರಿಯುತ್ತಿದೆ. ಕ್ರೀಡಾಂಗಣದ ಸಿಬ್ಬಂದಿಯೂ ಅಲ್ಲಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಕಚೇರಿ, ಪೆವಿಲಿಯನ್‌ ಕಟ್ಟಡದವರೆಗೆ ನೀರು ನುಗ್ಗಿದೆ.

ಸವಳಂಗ ರಸ್ತೆಯ 31 ಎಕರೆ ವಿಸ್ತಾರದ ನವುಲೆ ಕೆರೆಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ 30 ವರ್ಷಗಳಿಗೆ ಗುತ್ತಿಗೆ ನೀಡಲಾಗಿತ್ತು. 26 ಎಕರೆಯಲ್ಲಿ ಕೆಎಸ್‌ಸಿಎ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಿದೆ.

‘ತಗ್ಗು ಪ್ರದೇಶದಲ್ಲಿರುವ ಕಾರಣ ನೀರು ಪ್ರತಿ ಮಳೆಗಾಲದಲ್ಲೂ ಕ್ರೀಡಾಂಗಣ ಜಲಾವೃತ್ತಗೊಳ್ಳುತ್ತದೆ. ಇದರಿಂದ ವರ್ಷದ ಮೂರು ತಿಂಗಳು ಅಲ್ಲಿ ಕ್ರಿಕೆಟ್ ಆಡಲು ಸಾಧ್ಯವಾಗುವುದಿಲ್ಲ. ಕ್ರೀಡಾಂಗಣದೊಳಗೆ ಬರುವ ನೀರನ್ನು ಹೊರಗೆ ಬಿಡಲು ಕ್ರೀಡಾಂಗಣದಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಹೀಗಾಗಿ ಈ ಸಮಸ್ಯೆ ಕಾಡುತ್ತದೆ.

ಈ ಬಾರಿ ಮಳೆ ನೀರನ್ನು ಹೊರಹಾಕಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ, ಲಾಕ್‌ಡೌನ್‌ ಕಾರಣ ಈ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆಗಾಲ ಮುಗಿಯುತ್ತಿದಂತೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಮಳೆ ನೀರಿನಿಂದ ಕ್ರೀಡಾಂಗಣಕ್ಕೆ ಯಾವುದೇ ತೊಂದರೆಯಾಗಿಲ್ಲ’ ಎನ್ನುತ್ತಾರೆ ಕೆಎಸ್‌ಸಿಎ ವಲಯ ಸಂಚಾಲಕಡಿ.ಎಸ್‌.ಅರುಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.