ADVERTISEMENT

ಕುವೆಂಪು ವಿವಿ: ಜುಲೈ 26ರಿಂದ ಭೌತಿಕ ತರಗತಿ ಪುನರಾರಂಭ

ಲಸಿಕೆ ಪತ್ರದೊಂದಿಗೆ ತರಗತಿಗೆ ಹಾಜರಾಗಲು ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 6:02 IST
Last Updated 23 ಜುಲೈ 2021, 6:02 IST
ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯ ಪರೀಕ್ಷಾಂಗ ವಿಭಾಗದ ಕಟ್ಟಡ.
ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯ ಪರೀಕ್ಷಾಂಗ ವಿಭಾಗದ ಕಟ್ಟಡ.   

ಶಿವಮೊಗ್ಗ: ‘ಕೊರೊನಾ ಕಾರಣದಿಂದ ಸ್ಥಗಿತವಾಗಿದ್ದ ಪದವಿ, ಸ್ನಾತಕೋತ್ತರ ಪದವಿ ಮತ್ತು ಬಿ.ಇಡಿ ಭೌತಿಕ ತರಗತಿಗಳು ಜುಲೈ 26ರಂದು ಪುನರಾರಂಭಗೊಳ್ಳಲಿವೆ’ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ತಿಳಿಸಿದ್ದಾರೆ.

ಲಾಕ್‌ಡೌನ್‌ ಕಾರಣ ಶಾಲೆ, ಕಾಲೇಜುಗಳು ಮುಚ್ಚಿದ್ದವು. ಮೂರು ತಿಂಗಳ ನಂತರ ಈಗ ಕಾಲೇಜು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಕುವೆಂಪು ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಚಟುವಟಿಕೆ ಪುನರಾರಂಭಕ್ಕೆ ಸಿದ್ಧತೆ ನಡೆಯುತ್ತಿದ್ದು, ತರಗತಿ ಕೊಠಡಿಗಳು, ಹಾಸ್ಟೆಲ್ ಕೊಠಡಿಗಳು, ಪ್ರಯೋಗಾಲಯಗಳು, ಕಚೇರಿ ಸೇರಿ ವಿಶ್ವವಿದ್ಯಾಲಯದ ಆವರಣವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ.

ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಕಡ್ಡಾಯ: ಕಾಲೇಜು ಆರಂಭಕ್ಕೆ ಅನುಮತಿ ದೊರಕಿದ್ದು, ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಲಸಿಕೆ ಪಡೆದ ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗುವಂತೆ ಕುಲಪತಿ ಸೂಚನೆ ನೀಡಿದ್ದಾರೆ.

ADVERTISEMENT

ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 105 ಕಾಲೇಜುಗಳಿದ್ದು, 90 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಶಿವಮೊಗ್ಗದಲ್ಲಿ ಲಸಿಕೆ ಕಾರ್ಯಕ್ರಮ ಚೆನ್ನಾಗಿ ನಡೆದಿದ್ದು, ಶೇ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಲಸಿಕೆ ಪಡೆದಿದ್ದಾರೆ. ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ 40ರಿಂದ 50ರಷ್ಟು ಮಾತ್ರ ವಿದ್ಯಾರ್ಥಿಗಳು ಲಸಿಕೆ ಪಡೆದಿದ್ದಾರೆ ಎಂದು ಮಾಹಿತಿ ಇದೆ.

‘ಇನ್ನೂ ಯಾರು ಲಸಿಕೆ ಪಡೆದಿಲ್ಲವೋ ಅವರಿಗೆ ಜುಲೈ 26ರವರೆಗೆ ಸಮಯ ಇದೆ. ಆದರೂ, ಲಸಿಕೆ ಪಡೆಯಲು ಸಾಧ್ಯವಾಗದೇ ಇದ್ದರೆ ಅಂತಹ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲೇ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಮುನ್ನ ಲಸಿಕೆ ಪಡೆದ ಪತ್ರದೊಂದಿಗೆ, ಪೋಷಕರ ಒಪ್ಪಿಗೆಯ ಪತ್ರವನ್ನೂ ತರಬೇಕು’ ಎಂದು ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ತಿಳಿಸಿದ್ದಾರೆ.

ತರಗತಿ ಸಮಯದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಸಾನಿಟೈಸರ್ ಬಳಸುವ ಮೂಲಕ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ಕೊರೊನಾ ಭಯ ಬೇಡ, ಜಾಗ್ರತೆ ಇರಲಿ

ಯುಜಿಸಿ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ವಿಶ್ವವಿದ್ಯಾಲಯದ ತರಗತಿಗಳನ್ನು ಪ್ರಾರಂಭಿಸಲಾಗುವುದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕ್ಯಾಂಪಸ್ ಅನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೇ ಕಾಲೇಜಿಗೆ ಬರಬಹುದು. ಆದರೆ, ಜಾಗೃತಿಯಿಂದ ಇರಬೇಕು ಎನ್ನುತ್ತಾರೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ.

ಕುಲಸಚಿವರ ಅಧಿಕಾರ ಸ್ವೀಕಾರ

ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ (ಆಡಳಿತ) ನೇಮಕಗೊಂಡಿರುವ ಜಿ.ಅನುರಾಧಾ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಕುಲಸಚಿವ ಪ್ರೊ.ಎಸ್.ಎಸ್.ಪಾಟೀಲ್ ಅವರು ಅಧಿಕಾರ ಹಸ್ತಾಂತರಿಸಿದರು. ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.