ADVERTISEMENT

ಜ್ಞಾನ, ಸಂಶೋಧನಾ ಕೇಂದ್ರವಾಗಿ ಹುಲಿ–ಸಿಂಹಧಾಮ

ಪ್ರತಿ ಭಾನುವಾರ ಮಕ್ಕಳಿಗೆ ಪ್ರಾಣಿ, ಪಕ್ಷಿಗಳ ಕುರಿತು ವಿಶೇಷ ಅಧ್ಯಯನ ಶಿಬಿರ

ಚಂದ್ರಹಾಸ ಹಿರೇಮಳಲಿ
Published 4 ಡಿಸೆಂಬರ್ 2018, 13:58 IST
Last Updated 4 ಡಿಸೆಂಬರ್ 2018, 13:58 IST
ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪದ ಹುಲಿ–ಸಿಂಹಧಾಮ.
ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪದ ಹುಲಿ–ಸಿಂಹಧಾಮ.   

ಶಿವಮೊಗ್ಗ:ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮ ಇರುವುದು ಕೇವಲ ಮನೋರಂಜನೆಗಾಗಿ ಎಂಬ ಜನರ ಮನೋಭಾವ ಬದಲಿಸಿ, ವನ್ಯಜೀವಿಗಳ ಕುರಿತು ಜ್ಞಾನ ಸಂಪಾದಿಸಲು ಮತ್ತು ಅವುಗಳ ನಡವಳಿಕೆ ಮೇಲೆ ಸಂಶೋಧನೆ ಕೈಗೊಳ್ಳುವ ಆಲಯವಾಗಿಸಲುಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಮುಂದಾಗಿದೆ.

ಇಂತಹ ಪರಿಕಲ್ಪನೆ ಸಾಕಾರಕ್ಕಾಗಿ ಈಗಾಗಲೇ ಮೊದಲ ಹೆಚ್ಚೆ ಇಟ್ಟಿದ್ದು, ಡಿಸೆಂಬರ್ ತಿಂಗಳ ಎಲ್ಲ ಭಾನುವಾರ ಮಕ್ಕಳಿಗಾಗಿಯೇ ವಿಶೇಷ ಅಧ್ಯಯನ ಶಿಬಿರ ಆಯೋಜಿಸಿದೆ. ಅದಕ್ಕಾಗಿ ₨ 500 ಶುಲ್ಕ ನಿಗದಿಪಡಿಸಿದೆ.

ಅಲ್ಲಿಗೆ ಬರುವ ಮಕ್ಕಳಿಗೆ ವನ್ಯಜೀವಿ ತಜ್ಞರಿಂದ ಪ್ರಾಣಿಗಳ ಹುಟ್ಟು, ಬೆಳವಣಿಗೆ, ನಡವಳಿಕೆ, ಆಹಾರ ಪದ್ಧತಿ. ಜೀವಿತಾವಧಿ, ಅವುಗಳ ಬದುಕಿನ ಮೇಲೆ ಪ್ರಭಾವ ಬೀರುವ ಪರಿಸರ, ಬೇಟೆಯ ರೀತಿ ನೀತಿಗಳ ಕುರಿತು ಸಮಗ್ರ ಮಾಹಿತಿ ನೀಡುತ್ತಾರೆ. ಪ್ರಾಣಿ, ಪಕ್ಷಿಗಳ ಚಿತ್ರ ಬಿಡಿಸುವುದು, ಪ್ರಬಂಧ ಬರೆಯಲು ಮಕ್ಕಳನ್ನು ಪ್ರೇರೇಪಿಸುವ ಮೂಲಕ ವನ್ಯಜೀವಿಗಳೆಡೆಗೆ ವಿಶೇಷ ಪ್ರೀತಿ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ.

ADVERTISEMENT

‘ಶಿಬಿರದಲ್ಲಿ ಭಾಗವಹಿಸದವರಿಗೆ ಟೀ ಶರ್ಟ್, ಕ್ಯಾಪ್, ಪ್ರಮಾಣಪತ್ರ ನೀಡಲಾಗುತ್ತದೆ. ಗರಿಷ್ಠ 30 ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ. ಪೋಷಕರು ಧಾಮಕ್ಕೆ ಬೆಳಿಗ್ಗೆ 10ಕ್ಕೆ ಕರೆದುಕೊಂಡು ಮದ್ಯಾಹ್ನ 1ಕ್ಕೆ ಕರೆದುಕೊಂಡು ಹೋಗಬೇಕು’ ಎನ್ನುತ್ತಾರೆ ಸಿಂಹ ಧಾಮದ ಕಾರ್ಯ ನಿರ್ವಾಹಕ ನಿರ್ದೇಶಕ ಮುಕುಂದ್‌ಚಂದ್.

ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ 10 ಕಿ.ಮೀ. ದೂರದಲ್ಲಿರುವ ಸಿಂಹಧಾಮದಲ್ಲಿ 28 ವಿವಿಧ ಬಗೆಯ ವನ್ಯಜೀವಿಗಳು ಸೇರಿದಂತೆ ಒಟ್ಟು 332 ಪ್ರಾಣಿ, ಪಕ್ಷಿಗಳು ಇವೆ. ಹುಲಿ, ಚಿರತೆ, ಕರಡಿ, ಸಿಂಹ, ಕಿರುಬ, ನರಿ ಸೇರಿದಂತೆ ಒಟ್ಟು 185 ದೊಡ್ಡ ಪ್ರಾಣಿಗಳಿವೆ. ಅವುಗಳಲ್ಲಿ 14 ಚಿರತೆಗಳಿವೆ. 115 ವಿವಿಧ ಜಾತಿಯ, ವಿವಿಧ ದೇಶಗಳ ಪಕ್ಷಿಗಳಿವೆ. ಹೆಬ್ಬಾವು ಸೇರಿದಂತೆ 5 ಪ್ರಭೇದದ ಸರೀಸೃಪಗಳಿವೆ. ಈಗಿರುವ ತಡೆ ಸಹಿತ ಆವರಣ ಅವುಗಳ ಚಲನವಲನಕ್ಕೆ, ಇತರೆ ಚಟುವಟಿಕೆಗಳಿಗೆ ಕಿಷ್ಕಿಂಧೆಯಂತಾಗಿದೆ.

ಸಿಂಹ–ಹುಲಿಗಳಿಗೆ ಪ್ರತ್ಯೇಕ ಪ್ರದೇಶ:

600 ಹೆಕ್ಟೇರ್‌ ವಿಸ್ತಾರದ ಈ ಪ್ರದೇಶದಲ್ಲಿ ಹುಲಿ ಮತ್ತು ಸಿಂಹಗಳಿಗಾಗಿಯೇ ಪ್ರತ್ಯೇಕ ಪ್ರದೇಶ ಮೀಸಲಿಡಲಾಗಿದೆ. 4 ಸಿಂಹಗಳು, 7 ಹುಲಿಗಳಿವೆ. ಅವುಗಳಲ್ಲಿ 5 ಗಂಡು ಹಾಗೂ 2 ಹೆಣ್ಣು. ಹಿಂದೆ 27.5 ಹೆಕ್ಟೇರ್‌ನಲ್ಲಿ ಎಲ್ಲ ಪ್ರಾಣಿಗಳಿಗೂ ಅವಕಾಶ ಕಲ್ಪಿಸಲಾಗಿತ್ತು. ನಂತರ ಪ್ರಾಣಿಗಳ ಸಂಖ್ಯೆ ಹೆಚ್ಚಾದಂತೆ ಹುಲಿ ಮತ್ತು ಸಿಂಹಗಳಿಗಾಗಿಯೇ 35 ಹೆಕ್ಟೇರ್ ಪ್ರತ್ಯೇಕ ಸ್ಥಳ ಮೀಸಲಿಡಲಾಗಿದೆ.

ಹುಟ್ಟುಹಬ್ಬದ ಆಚರಣೆಗೂ ಅವಕಾಶ:

ಪ್ರಾಣಿ ಸಂಗ್ರಹಾಲಯದಲ್ಲಿನ ಪ್ರಾಣಿಗಳನ್ನು ದತ್ತು ನೀಡುವ ಯೋಜನೆ ಇದೆ. ವರ್ಷದ ಲೆಕ್ಕದಲ್ಲಿ ದತ್ತು ತೆಗೆದುಕೊಂಡರೆ ಸಾಕಷ್ಟು ವೆಚ್ಚವಾಗುತ್ತದೆ. ಈಗ ಹೊಸದೊಂದು ಯೋಜನೆ ರೂಪಿಸಲಾಗಿದೆ. ಜನ್ಮ ದಿನ ಆಚರಿಸಿಕೊಳ್ಳಲು ಬಯಸುವವರು ಒಂದು ದಿನ ಪ್ರಾಣಿಗಳ ಆಹಾರ, ಆರೈಕೆಗೆ ತಗಲುವ ವೆಚ್ಚವನ್ನು ಭರಿಸಬಹುದು. ಹೀಗೆ ಅರ್ಥಪೂರ್ಣವಾಗಿ ಸಿಂಹಧಾಮದಲ್ಲಿ ಜನ್ಮದಿನ ಆಚರಿಸಿಕೊಳ್ಳಲು ಬಯಸುವವರು ಮೊದಲೇ ಹೆಸರು ನೋಂದಾಯಿಸಿಕೊಳ್ಳಬೇಕು.

ಇಲ್ಲಿನಗೆ ವರ್ಷಕ್ಕೆ ಸರಾಸರಿ 2.5 ಲಕ್ಷ ಜನರು ಭೇಟಿ ನೀಡುತ್ತಿದ್ದಾರೆ. ಕಳೆದ ವರ್ಷ 1.77 ಕೋಟಿ ಸಂಗ್ರಹವಾಗಿತ್ತು. ಆದರೆ, ನಿರ್ವಹಣೆಯ ಖರ್ಚು ₹ 2.80 ಕೋಟಿ ತಲುಪಿತ್ತು. ಅದನ್ನು ಸರಿದೂಗಿಸಲು ರೂಪಿಸಿದ ಪ್ರಾಣಿಗಳ ದತ್ತು ಯೋಜನೆಗೆ ಸಂಘ ಸಂಸ್ಥೆಗಳು ಮತ್ತು ಜನರಿಂದ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.