ಶಿವಮೊಗ್ಗ: ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಅವರ ಪುತ್ರ ಕೆ.ಈ. ಕಾಂತೇಶ್ ಹಾಗೂ ಸೊಸೆ ಶಾಲಿನಿ ವಿರುದ್ಧ ಶಿವಮೊಗ್ಗದ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಶಿವಮೊಗ್ಗದ ವಕೀಲ ಬಿ.ವಿನೋದ್ ಸಲ್ಲಿಸಿದ್ದ ಖಾಸಗಿ ದೂರಿಗೆ ಸಂಬಂಧಿಸಿದಂತೆ, ‘ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯ ಕ್ರಿಮಿನಲ್ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಏಪ್ರಿಲ್ 24ರಂದು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ. ಚಂದ್ರಶೇಖರ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು.
ಕಾನೂನು ತಜ್ಞರ ಅಭಿಪ್ರಾಯ ಪಡೆದ ಲೋಕಾಯುಕ್ತ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣವೇನು?: ‘ಈಶ್ವರಪ್ಪ ಅವರು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭ ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ್ದಾರೆ’ ಎಂಬುದು ಆರೋಪ. ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ- 1988ರ ಕಲಂ 13(1)(ಡಿ) ಹಾಗೂ 13(1)(ಇ) ಮತ್ತು ಭಾರತೀಯ ದಂಡ ಸಂಹಿತೆ-1860ರ ಕಲಂ 420ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ದೂರುದಾರ ಬಿ.ವಿನೋದ್ ಅವರು 2016ರಲ್ಲಿ ಸಲ್ಲಿಸಿದ್ದ ಈ ಖಾಸಗಿ ದೂರನ್ನು ಲೋಕಾಯುಕ್ತ ಕೋರ್ಟ್ ವಜಾಗೊಳಿಸಿತ್ತು. ವಜಾ ಆದೇಶವನ್ನು ಪ್ರಶ್ನಿಸಿ ವಿನೋದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ದೂರಿನ ಮರು ಪರಿಗಣನೆಗೆ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.