ADVERTISEMENT

ಸರ್ಕಾರ ಬೀಳುವುದು ಖಚಿತ; ಆದರೆ, ಅದು ಕೇಂದ್ರ ಸರ್ಕಾರ: ಮಧು ಬಂಗಾರಪ್ಪ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಮಾತಿಗೆ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 13:46 IST
Last Updated 24 ಏಪ್ರಿಲ್ 2019, 13:46 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಶಿವಮೊಗ್ಗ:ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆ ಸತ್ಯ. ಅವರು ನುಡಿದಂತೆ ಮೇ 23ರ ಫಲಿತಾಂಶದ ನಂತರ ಸರ್ಕಾರ ಬೀಳುವುದು ಖಚಿತ. ಕೇಂದ್ರ ಸರ್ಕಾರ ಪತನ ನಿಶ್ಚಿತ ಎಂದು ಮಧು ಬಂಗಾರಪ್ಪ ಕುಟುಕಿದರು.

ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠನಕ್ಕೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದೆ. ಕಾಂಗ್ರೆಸ್‌, ಜೆಡಿಎಸ್‌ ಮುಖಂಡರೂ ಶ್ರಮಿಸಿದ್ದರು. ಆಗ ಕೆಲವರು ಪಾದಯಾತ್ರೆ ಶೋಕಿಗಾಗಿ ಎಂದು ಟೀಕಿಸಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಹಣ ನೀಡಿದ ನಂತರ ಅವರ ಮಾತು ಬದಲಾಗಿದೆ. ನೀರಾವರಿ ಯೋಜನೆ ಜಾರಿಗೆ ತರಲು ಸಾಧ್ಯವಾಗದ ಬಿ.ವೈ.ರಾಘವೇಂದ್ರ, ಯಡಿಯೂರಪ್ಪ ಜನಪ್ರತಿನಿಧಿಗಳಾಗುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಕೆಲವರು ಖಾಸಗಿ ವಿಷಯಗಳನ್ನು ಚುನಾವಣೆ ಸಮಯದಲ್ಲಿ ಪದೇ ಪದೇ ಪ್ರಸ್ತಾಪಿಸಿ ಕೀಳುಮಟ್ಟದ ಟೀಕೆ ಮಾಡಿದರು. ರಾಜಕೀಯದಲ್ಲಿ ತಟಸ್ಥ ಧೋರಣೆ ತೋರುವ ಶಿವರಾಜ್‌ಕುಮಾರ್ ವಿರುದ್ಧವೂ ಇಲ್ಲಸಲ್ಲದ ಆರೋಪ ಮಾಡಿದರು. ಸಮಯ ಬಂದಾಗ ಅದಕ್ಕೆಲ್ಲ ತಕ್ಕ ಉತ್ತರ ನೀಡುವೆ ಎಂದು ಕುಮಾರ್ ಬಂಗಾರಪ್ಪ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ADVERTISEMENT

ಎಲ್ಲೇಹಣ ಸಿಕ್ಕರೂ ಅದು ಜೆಡಿಎಸ್‌ ಚುನಾವಣೆಯಲ್ಲಿ ಹಂಚಲು ತೆಗೆದುಕೊಂಡು ಹೋಗುತ್ತಿರುವ ಹಣಎಂದು ಬಿಜೆಪಿ ಆರೋಪ ಮಾಡುತ್ತದೆ. ಹಾಗಾದರೆ ಇವರು ರಫೇಲ್ ಹಣ ಚುನಾವಣೆಗಾಗಿ ಖರ್ಚು ಮಾಡಿದರಾ ಎಂದು ಪ್ರಶ್ನಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ತಾನೇ ಅಭ್ಯರ್ಥಿ ಎಂದು ಭಾವಿಸಿ ಪ್ರಚಾರ ಕಾರ್ಯ ನಡೆಸಿದರು. ಎರಡೂ ಪಕ್ಷಗಳ ಮುಖಂಡರು 37 ದಿನಗಳು ನಿರಂತರ ಪರಿಶ್ರಮ ಹಾಕಿದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದೆವು. ಈ ಎಲ್ಲದರ ಫಲವಾಗಿ ತಮ್ಮ ಗೆಲುವು ನಿಶ್ಚಿತ. ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲೂ ಮುನ್ನಡೆ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ಅತಿ ಹೆಚ್ಚು ಮತದಾನವಾಗಿದೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಶೇ 12ರಷ್ಟು ಹೆಚ್ಚು ಮತದಾನವಾಗಿದೆ. ಹೆಚ್ಚುವರಿ ಮತಗಳ ಬಹುಪಾಲು ಜೆಡಿಎಸ್‌ಗೆ ದೊರೆತಿವೆ. ಬಿಜೆಪಿ ಅಪಪ್ರಚಾರಕ್ಕೆ ಕಿವಿಗೊಡದೆ ಮತದಾರರು ಬೆಂಬಲಿಸಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಪಾಲಿಕೆ ಸದಸ್ಯನಾಗರಾಜ್ ಕಂಕಾರಿ, ಜಿಲ್ಲಾ ವಕ್ತಾರ ಜಿ.ಡಿ. ಮಂಜುನಾಥ್, ಸುನೀಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.