ಶಿವಮೊಗ್ಗ: ‘ಜಿಲ್ಲೆಯನ್ನು ಅಂಧತ್ವ ಮುಕ್ತಗೊಳಿಸುವ ಉದ್ದೇಶ ಹೊಂದಲಾಗಿದೆ. ಆದ್ದರಿಂದ, ಆಶಾಕಾರ್ಯಕರ್ತರು ಕಣ್ಣಿನ ಸಮಸ್ಯೆ ತಿಳಿಯಲು ಮನೆ– ಮನೆಗೆ ಭೇಟಿ ನೀಡಿ, ವೈದ್ಯರೊಂದಿಗೆ ತಪಾಸಣೆ ನಡೆಸಿ ಮಾಹಿತಿ ಪಡೆಯಲಿದ್ದಾರೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಜಿಲ್ಲಾ ಇಲಾಖೆ, ಸರ್ವೇಕ್ಷಣಾಧಿಕಾರಿ ಜಿಲ್ಲಾ ಕಚೇರಿ, ಅಂಧತ್ವ ನಿಯಂತ್ರಣ ಜಿಲ್ಲಾ ವಿಭಾಗದಿಂದ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ‘ಆರೈಕೆ’: ಅಂಧತ್ವ ಮುಕ್ತ ಜಿಲ್ಲಾ ಅಭಿಯಾನ ಹಾಗೂ ಗೃಹ ಆರೋಗ್ಯ ಯೋಜನೆ ಕುರಿತ ಕಾರ್ಯಾಗಾರ ಮತ್ತು ಆಶಾ ಕೈಪಿಡಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅಭಿಯಾನದಲ್ಲಿ ಸಂಗ್ರಹಿಸಿದ ಮಾಹಿತಿ ಮೇರೆಗೆ ದೃಷ್ಟಿದೋಷ ಇರುವ ವ್ಯಕ್ತಿಗೆ ಸರ್ಕಾರದಿಂದಲೇ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು. ಶಂಕರ ಕಣ್ಣಿನ ಆಸ್ಪತ್ರೆ, ಮಣಿಪಾಲ ಆಸ್ಪತ್ರೆ, ಸುಬ್ಬಯ್ಯ ಆಸ್ಪತ್ರೆಗಳು ಅಭಿಯಾನಕ್ಕೆ ಕೈ ಜೋಡಿಸಿವೆ ಎಂದರು.
‘ಆರೈಕೆ’ ಅಭಿಯಾನದಿಂದ ಸಮಾಜಕ್ಕೆ ಶಕ್ತಿ ನೀಡುವ ಕೆಲಸ ಆಗಿದೆ. ಜನರು ಅನೇಕ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಮನೆ– ಮನೆಗೂ ಆರೋಗ್ಯ ಕಾರ್ಯಕ್ರಮದ ಅವಶ್ಯಕತೆ ಇದೆ. ಇಲ್ಲಿ ಆಶಾ-ಅಂಗನವಾಡಿ ಕಾರ್ಯಕರ್ತೆಯರು ಜೀವನ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ’ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಶ್ಲಾಘಿಸಿದರು.
‘ಸರ್ಕಾರದಿಂದ ಕ್ಯಾನ್ಸರ್ ಪೀಡಿತ ಮಕ್ಕಳ ಶಾಲೆ ಆರಂಭಿಸುತ್ತಿರುವುದು ಅಭಿನಂದನೀಯ. ಆಶಾ ಕಾರ್ಯಕರ್ತೆಯರ ಸಹಾಯಧನ ಹೆಚ್ಚಿಸುವ ಕುರಿತ ಸರ್ಕಾರ ಗಮನ ಹರಿಸಬೇಕು’ ಎಂದು ವಿಧಾನ ಪರಿಷತ್ ಶಾಸಕ ಡಿ.ಎಸ್ ಅರುಣ್ ಒತ್ತಾಯಿಸಿದರು.
‘ಆರೋಗ್ಯವೊಂದು ಸಂಪತ್ತು. ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚಿದೆ. ನಿಮ್ಮ ಬಗ್ಗೆಯೂ ನಮಗೆ ಕಾಳಜಿ ಇದೆ. ಸರ್ಕಾರ ನಿಮ್ಮ ಜೊತೆ ನಿಲ್ಲಲಿದೆ’ ಎಂದು ವಿಧಾನ ಪರಿಷತ್ ಶಾಸಕಿ ಬಲ್ಕಿಸ್ ಬಾನು ಭರವಸೆ ನೀಡಿದರು.
ಸಚಿವರಿಂದ ‘ಆಶಾ ಕೈಪಿಡಿ’ ಬಿಡುಗಡೆಗೊಳಿಸಲಾಯಿತು.
ಜಿಲ್ಲಾ ಪಂಚಾಯಿತಿ ಸಿಇಒ ಹೇಮಂತ್ ಕುಮಾರ್, ಡಿಎಚ್ಒ ಡಾ.ನಟರಾಜ್, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯ ಘಟಕದ ಅಧ್ಯಕ್ಷೆ ಜಿ. ಪಲ್ಲವಿ, ಭೋವಿ ಅಭಿವೃದ್ಧಿ ನಿಗಮದ ರಾಜ್ಯ ಘಟಕದ ಅಧ್ಯಕ್ಷ ಎಸ್. ರವಿಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್ ಇದ್ದರು.
ಖಾಸಗಿ ಆಸ್ಪತ್ರೆಗಳ ಸಹಯೋಗ
‘ಜೀವನ ಶೈಲಿಯ ಬದಲಾವಣೆಯಿಂದ ವಿವಿಧ ರೀತಿಯ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಆರೈಕೆ-ಅಂಧತ್ವ ಮುಕ್ತ ಅಭಿಯಾನ ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದು ಶಸ್ತ್ರ ಚಿಕಿತ್ಸೆ ಸೇರಿದಂತೆ ಯಾವುದೇ ಚಿಕಿತ್ಸೆ ಇದ್ದರೂ ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಕಣ್ಣಿನ ಖಾಸಗಿ ಆಸ್ಪತ್ರೆಗಳ ಸಹಯೋಗವೂ ಅಭಿಯಾನ ಕಾರ್ಯಕ್ರಮಕ್ಕೆ ಇದೆ’ ಎಂದು ಅಂಧತ್ವ ನಿಯಂತ್ರಣ ಜಿಲ್ಲಾ ಅಧಿಕಾರಿ ಡಾ.ಕೆ.ಎಸ್.ಕಿರಣ್ ಮಾಹಿತಿ ನೀಡಿದರು.
14 ಕಾಯಿಲೆಗಳಿಗೆ ಚಿಕಿತ್ಸೆ’
ಗೃಹ ಆರೋಗ್ಯ ಯೋಜನಾ ಕಾರ್ಯಕ್ರಮದಡಿ ಆಶಾ ಕಾರ್ಯಕರ್ತೆಯರ ನೆರವು ಪಡೆದು ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಸೇರಿ 14 ಅಸಾಂಕ್ರಾಮಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಅಡುಗೆ ಸಿಬ್ಬಂದಿ ಒತ್ತಡಕ್ಕೆ ಸಿಲುಕಿ ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಇದಕ್ಕೂ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯದ ಕಾಳಜಿ ಸರ್ಕಾರದ ಘನ ಉದ್ದೇಶ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಲ್. ನಾಗರಾಜ ನಾಯ್ಕ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.