ಸೊರಬ: ತಾಲ್ಲೂಕಿನ ಚಂದ್ರಗುತ್ತಿ ಸಮೀಪದ ಶಿವಪುರ ಗ್ರಾಮದಲ್ಲಿ ಮಂಗಳವಾರ ಬೀದಿ ನಾಯಿ ದಾಳಿಯಿಂದ ನಿತ್ರಾಣಗೊಂಡಿದ್ದ ಗಂಡು ಜಿಂಕೆ ಮೃತಪಟ್ಟಿದೆ.
ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದ ಜಿಂಕೆಯನ್ನು ಬೀದಿ ನಾಯಿಗಳು ಅಟ್ಟಾಡಿಸಿದ್ದವು. ಸ್ಥಳೀಯರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ಹಿಡಿದು ರಕ್ಷಿಸಿದ್ದರು. ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಅಧಿಕಾರಿಗಳು ಜಿಂಕೆಗೆ, ಪಶು ವೈದ್ಯರಿಂದ ಪ್ರಥಮ ಚಿಕಿತ್ಸೆ ನೀಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಜಿಂಕೆ ಕೊನೆಯುಸಿರೆಳೆದಿದೆ.
ನಾಯಿಗಳ ದಾಳಿಯಿಂದ ಗಾಬರಿಗೊಂಡಿದ್ದ ಜಿಂಕೆ ಆಘಾತಕ್ಕೆ ಒಳಗಾಗಿತ್ತು. ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನಡೆಸಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.