ಶಿಕಾರಿಪುರ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮತ್ತು ಅವರ ಪುತ್ರ ಕೆ.ಈ. ಕಾಂತೇಶ್ ಅವರು ಶಿಕಾರಿಪುರದಲ್ಲಿ ಬುಧವಾರ ನಡೆದ ಸಂಸದ ಬಿ.ವೈ.ರಾಘವೇಂದ್ರ ಅವರ ಪುತ್ರ ಸುಭಾಷ್ ಆರತಕ್ಷತೆಗೆ ಬಂದು ವಧು–ವರರನ್ನು ಹರಸಿ, ಕುಟುಂಬದ ಆತಿಥ್ಯ ಸ್ವೀಕರಿಸಿದರು. ಸರಿಸುಮಾರು ಒಂದು ವರ್ಷದ ನಂತರ ಜಿಲ್ಲೆಯ ಹಿರಿಯ ರಾಜಕಾರಣಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮಾತನಾಡಿದರು.
ಶಿವಮೊಗ್ಗದಲ್ಲಿ ಈಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ವೇದಿಕೆ ಹಂಚಿಕೊಂಡಿದ್ದರೂ ಪರಸ್ಪರ ಮಾತನಾಡಿರಲಿಲ್ಲ. ರಾಘವೇಂದ್ರ ಅವರ ಪುತ್ರನ ಆರತಕ್ಷತೆಯಲ್ಲಿ ಭಾಗಿಯಾಗಿ ಯಡಿಯೂರಪ್ಪ ಅವರೊಂದಿಗೆ ಕುಶಲೋಪರಿ ನಡೆಸಿದರು.
ಬಿ.ವೈ.ರಾಘವೇಂದ್ರ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬೆನ್ನುತಟ್ಟಿ ಮಾತನಾಡಿಸಿದರು. ಇದೇ ವೇಳೆ ವಿಜಯೇಂದ್ರ ಅವರು ಈಶ್ವರಪ್ಪ ಹಾಗೂ ಕಾಂತೇಶ್ ಅವರನ್ನು ಗೌರವಿಸಿದರು.
2024ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಹಾವೇರಿ–ಗದಗ ಕ್ಷೇತ್ರದಿಂದ ಮಗನಿಗೆ ಪಕ್ಷದ ಟಿಕೆಟ್ ಕೊಡಿಸುವಲ್ಲಿ ಸಹಕಾರ ನೀಡಲಿಲ್ಲ ಎಂಬ ಕಾರಣ ಮುಂದಿರಿಸಿ ಈಶ್ವರಪ್ಪ ಅವರು ಅತ್ಯಾಪ್ತ ಗೆಳೆಯ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದರು.
ನಂತರ ಪಕ್ಷದಿಂದಲೇ ಉಚ್ಚಾಟನೆಗೊಂಡು ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅಂದಿನಿಂದ ಯಡಿಯೂರಪ್ಪ ಕುಟುಂಬದ ವಿರುದ್ಧ ಹರಿಹಾಯುತ್ತಲೇ ಇದ್ದ ಈಶ್ವರಪ್ಪ ತಿಂಗಳುಗಳ ನಂತರ ಬಿಎಸ್‌ವೈ ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ, ಹಿರಿಯ ರಾಜಕಾರಣಿ ಡಿ.ಎಚ್. ಶಂಕರಮೂರ್ತಿ, ವಿಧಾನಪರಿಷತ್ ಸದಸ್ಯ ಧನಂಜಯ ಸರ್ಜಿ, ಕೆ.ಎಸ್. ಗುರುಮೂರ್ತಿ ಅವರೂ ಈ ವೇಳೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.