ADVERTISEMENT

ಮೆಗ್ಗಾನ್ ಆಸ್ಪತ್ರೆ ಶೌಚಾಲಯದಲ್ಲಿ ಹಸುಗೂಸಿನ ಶವ ಪತ್ತೆ; ಕೊಲೆ ಶಂಕೆ

-

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 6:20 IST
Last Updated 17 ಆಗಸ್ಟ್ 2025, 6:20 IST

ಶಿವಮೊಗ್ಗ: ಇಲ್ಲಿನ ಮೆಗ್ಗಾನ್ ಆಸ್ಪತ್ರೆಯ ಶರಾವತಿ ವಾರ್ಡ್ ನಲ್ಲಿರುವ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಶೌಚಾಲಯದಲ್ಲಿ ಶನಿವಾರ ಒಂದು ದಿನದ ಹಸುಳೆಯ ಮೃತದೇಹ ಪತ್ತೆಯಾಗಿದೆ. ಕತ್ತು ಸೀಳಿ ಸಾಯಿಸಿ ಮೃತದೇಹವನ್ನು ಶೌಚಾಲಯದಲ್ಲಿ ಬಿಸಾಕಲಾಗಿದೆ ಎಂದು ತಿಳಿದುಬಂದಿದೆ.

ಆಸ್ಪತ್ರೆಯ ಶೌಚಾಲಯಕ್ಕೆ ಹೋಗಿದ್ದ ಮಹಿಳೆಯೊಬ್ಬರು ಹಸುಳೆಯ ಮೃತದೇಹ ಕಂಡು ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿದ್ದಾರೆ. ನಂತರ ದೊಡ್ಡಪೇಟೆ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಬಾಬು ಆಂಜನಪ್ಪ ಮತ್ತು ದೊಡ್ಡಪೇಟೆ ಠಾಣೆ ಇನ್‌ಸ್ಪೆಕ್ಟರ್ ರವಿ ಸಂಗನಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೆಗ್ಗಾನ್‌ನಲ್ಲಿ ಹೆರಿಗೆ ಆದವರ ಹಸುಗೂಸುಗಳನ್ನು ತಪಾಸಣೆ ನಡೆಸಲಾಗಿದೆ. ಹೆರಿಗೆಯಾದ ಮಹಿಳೆಯರ ವಿವರವನ್ನು ಪರಿಶೀಲಿಸಲಾಗುತ್ತಿದೆ. ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. 

ADVERTISEMENT

‘ಮಗುವಿನ ಕತ್ತಿನ ಬಳಿ ಕೊಯ್ದಿರುವ ಗುರುತು ಇದೆ. ಮೆಗ್ಗಾನ್ ಆವರಣದಲ್ಲಿಯೇ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಈ ಹಂತದಲ್ಲಿ ಹೆಚ್ಚಿನ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ. ಶೀಘ್ರ ಆರೋಪಿಗಳನ್ನು ಪತ್ತೆ ಮಾಡಲಿದ್ದೇವೆ’ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.