ADVERTISEMENT

ಮೆಗ್ಗಾನ್ ಅವಘಡ: ತನಿಖೆಗೆ ನಾಲ್ವರ ಸಮಿತಿ ರಚನೆ

ಮೂರು ದಿನಗಳ ಒಳಗೆ ಮತ್ತೆ ಮಕ್ಕಳ ಘಟಕ ಪುನರಾರಂಭದ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 13:40 IST
Last Updated 6 ಏಪ್ರಿಲ್ 2020, 13:40 IST
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸರ್ಜಿ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಮೆಗ್ಗಾನ್‌ನಿಂದ ಸ್ಥಳಾಂತರಿಸಿದ ನವಜಾತ ಶಿಶುಗಳ ಆರೋಗ್ಯ ವಿಚಾರಿಸಿದರು.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸರ್ಜಿ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಮೆಗ್ಗಾನ್‌ನಿಂದ ಸ್ಥಳಾಂತರಿಸಿದ ನವಜಾತ ಶಿಶುಗಳ ಆರೋಗ್ಯ ವಿಚಾರಿಸಿದರು.   

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಮಕ್ಕಳ ವಿಭಾಗದಲ್ಲಿ ಭಾನುವಾರ ಸಂಜೆ ನಡೆದ ವಿದ್ಯುತ್ ಅವಘಡದ ತನಿಖೆನಡೆಸಲು ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ನೇತೃತ್ವದಲ್ಲಿ ನಾಲ್ವರ ಸಮಿತಿ ರಚಿಸಲಾಗಿದೆ.

ವಿದ್ಯುತ್ ಶಾರ್ಟ್‌ಸರ್ಕಿಟ್‌ನಿಂದ ಬೆಂಕಿ, ಹೊಗೆಹರಡಿದ ಪರಿಣಾಮ ನವಜಾತ ಶಿಶು ವಿಭಾಗದಲ್ಲಿದ್ದ 32 ಮಕ್ಕಳು ಅಪಾಯಕ್ಕೆ ಸಿಲುಕಿದ್ದವು. ತಕ್ಷಣ ಅಲ್ಲಿನ ಸಿಬ್ಬಂದಿ ರಕ್ಷಿಸಿ, ಜಿಲ್ಲಾಡಳಿತದ ನಿರ್ದೇಶನದ ಮೇಲೆ ಸರ್ಜಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಅವುಗಳಲ್ಲಿ 27 ಮಕ್ಕಳು ಒಂದು ತಿಂಗಳ ಒಳಗಿನವು. ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ದೊಡ್ಡ ದುರಂತ ಸಂಭಸುತ್ತಿತ್ತು. ಘಟನೆ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಸಮಿತಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್, ಎಲೆಕ್ಟ್ರಿಕಲ್‌ ಎಂಜಿನಿಯರ್ ಇರುತ್ತಾರೆ. ವರದಿ ಬಂದ ನಂತರ ನಿರ್ಕ್ಷಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಟ್ಟಡಕ್ಕೆ ಕಲ್ಪಿಸಿದ್ದ ವಿದ್ಯುತ್ ಜಾಲ ಹಾಗೂ ಮಳೆಗಾಲದಲ್ಲಿ ಹಲವು ಕೊಠಡಿ ಸೋರುತ್ತಿರುವ ಕುರಿತು ಹಿಂದೆಯೇ ಆಡಳಿತ ಮಂಡಳಿಗೆ ವರದಿ ನೀಡಲಾಗಿತ್ತು. ಆದರೂ, ನಿರ್ಲಕ್ಷ್ಯ ಮಾಡಲಾಗಿದೆ ಎಂಬ ದೂರುಗಳಿವೆ. ಮುಂದೆ ಇಂತಹ ಅವಘಡ ನಡೆಯದಂತೆ ನೋಡಿಕೊಳ್ಳಬೇಕಿದೆ. ಅದಕ್ಕಾಗಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ ಎಂದು ವಿವರ ನೀಡಿದರು.

ADVERTISEMENT

ಘಟನೆ ನಡೆದಾಗ ಸಮಯ ಪ್ರಜ್ಞೆ ಮೆರೆದ ಮೆಗ್ಗಾನ್ ವೈದ್ಯರು, ಸಿಬ್ಬಂದಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಆರ್.ರಘುನಂದನ್, ಡಾ.ಎಸ್.ಶ್ರೀಧರ್ ಅವರ ನೇತೃತ್ವದಲ್ಲಿ ಮಕ್ಕಳನ್ನು ರಕ್ಷಿಸಿದ್ದಾರೆ. ತಕ್ಷಣ ಆ ಮಕ್ಕಳಿಗೆ ಆಶ್ರಯ ಕಲ್ಪಿಸುವ ಮೂಲಕ ಸರ್ಜಿ ಆಸ್ಪತ್ರೆಯ ಡಾ.ಧನಂಜಯ ಸರ್ಜಿ ಹಾಗೂ ಸಿಬ್ಬಂದಿ ಮಾನವೀಯತೆ ಮರೆದಿದ್ದಾರೆ. ಪೋಷಕರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಜಿಲ್ಲಾಡಳಿತ ಇಡೀ ರಾತ್ರಿ ಶ್ರಮಿಸಿದೆ. ಸರ್ಕಾರದ ಪರವಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿ, ಮೆಗ್ಗಾನ್ ಆಸ್ಪತ್ರೆ ಮಕ್ಕಳ ಘಟಕ ಮೂರು ದಿನಗಳಲ್ಲಿ ಪುನರ್ ಆರಂಭವಾಗುವುದು. ಅಲ್ಲಿಯವರೆಗೂ ಸರ್ಜಿ ಆಸ್ಪತ್ರೆಯಲ್ಲೇ ದಾಖಲು ಮಾಡಲಾಗುವುದು. ಯುನಿಟಿ ಆಸ್ಪತ್ರೆ, ಏಂಜೆಲ್ ಆಸ್ಪತ್ರೆ, ಮ್ಯಾಕ್ಸ್ ಆಸ್ಪತ್ರೆ, ಸಿಟಿ ಆಸ್ಪತ್ರೆಗಳಲ್ಲೂ ದಾಖಲು ಮಾಡಿಕೊಳ್ಳುವ ಭರವಸೆ ದೊರೆತಿದೆ ಎಂದು ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ,ಆರ್‌ಎಸ್ಎಸ್ಮುಖಂಡ ಪಟ್ಟಾಭಿರಾಮ್, ಬಿಜೆಪಿ ಮುಖಂಡ ಎಸ್.ದತ್ತಾತ್ರಿ, ಜಿಲ್ಲಾ ಪಂಚಾಯಿತಿಸಿಒಇ ಎಂ.ಎಲ್.ವೈಶಾಲಿ,ಹೆಚ್ಚುವರಿಜಿಲ್ಲಾಧಿಕಾರಿ ಜಿ.ಅನುರಾಧ,ವೈದ್ಯಕೀಯ ಮಹಾ ವಿದ್ಯಾಲಯದನಿರ್ದೇಶಕ ಡಾ.ಲೇಫಾಕ್ಷಿ, ಡಾ.ಧನಂಜಯ ಸರ್ಜಿ ಉಪಸ್ಥಿತರಿದ್ದರು.

ಪತ್ರಿಕಾಗೋಷ್ಠಿಗೂ ಮೊದಲು ಸಚಿವರು ಸರ್ಜಿ ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.