ADVERTISEMENT

ಎಂಡಿಎಫ್ ಸಂಸ್ಥೆಯಲ್ಲಿ ಹಣಕಾಸು ದುರುಪಯೋಗ: ಲೋಕಾಯುಕ್ತರಿಗೆ ದೂರು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 5:19 IST
Last Updated 17 ಸೆಪ್ಟೆಂಬರ್ 2022, 5:19 IST

ಸಾಗರ: ಇಲ್ಲಿನ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಶಿಕ್ಷಣ ಸಂಸ್ಥೆಯ ಹಿಂದಿನ ಆಡಳಿತ ಮಂಡಳಿಯಲ್ಲಿ ಹಲವು ರೀತಿಯ ಹಣಕಾಸಿನ ದುರುಪಯೋಗವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಕೋರಿ ಸಂಸ್ಥೆಯ ಆಡಳಿತ ಮಂಡಳಿಯ ಖಜಾಂಚಿ ವೆಂಕಟೇಶ್ ಕವಲಕೋಡು ಅವರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

ಸಂಸ್ಥೆಯ ಬೈಲಾದ ಪ್ರಕಾರ ಹಣಕಾಸಿನ ವ್ಯವಹಾರ ಮತ್ತು ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಕೋಶಾಧ್ಯಕ್ಷರು ಅಧಿಕಾರ ಹೊಂದಿರುತ್ತಾರೆ. ಆದರೆ ಇದನ್ನು ಉಲ್ಲಂಘಿಸಿ ಹಿಂದಿನ ಕೋಶಾಧ್ಯಕ್ಷರಾದ ವಿದ್ಯಾಧರ ಅವರನ್ನು ಹೊರಗಿಟ್ಟು ಹಿಂದಿನ ಅಧ್ಯಕ್ಷ ಕೆ.ಎಚ್.ಶ್ರೀನಿವಾಸ್ ಮತ್ತು ಉಪಾಧ್ಯಕ್ಷ ಎನ್.ಎಚ್.ಶ್ರೀಪಾದ ರಾವ್ ಅವರು ಹಣಕಾಸಿನ ವ್ಯವಹಾರವನ್ನು ನಡೆಸಿರುವುದು ಕಾನೂನಿನ ನಿಯಮಗಳ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಕೋಶಾಧ್ಯಕ್ಷರನ್ನು ದೂರವಿಟ್ಟು ಸಂಸ್ಥೆಯ ಹಿಂದಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಣಕಾಸಿನ ವ್ಯವಹಾರ ನಡೆಸುತ್ತಿರುವ ವಿಚಾರ ಹಿಂದಿನ ಪ್ರಧಾನ ಕಾರ್ಯದರ್ಶಿ ಜಗದೀಶ ಎಂ. ಅವರಿಗೆ ತಿಳಿದಿದ್ದರೂ ಯಾವುದೆ ಆಕ್ಷೇಪ ವ್ಯಕ್ತಪಡಿಸದೆ ಅವ್ಯವಹಾರಗಳಲ್ಲಿ ಅವರೂ ಸಹ ಭಾಗಿಯಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ.

ADVERTISEMENT

ಎಂಡಿಎಫ್‌ನ ಅಂಗ ಸಂಸ್ಥೆಯಾದ ಎಲ್‌ಬಿ ಮತ್ತು ಎಸ್‌ಬಿಎಸ್ ಕಾಲೇಜಿನ ಒಳಾಂಗಣ ಕ್ರೀಡಾಂಗಣವನ್ನು ಯುಜಿಸಿಯಿಂದ ಧನ ಸಹಾಯ ಪಡೆದು ನಿರ್ಮಿಸಲಾಗಿದೆ. ಇನ್ನೊಂದು ಅಂಗ ಸಂಸ್ಥೆಯಾದ ಡಾ.ಜಿ.ಎ.ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯಕ್ಕೆ
ಕೂಡ ನೂತನ ಕಟ್ಟಡ ನಿರ್ಮಿಸಲಾಗಿದೆ. ಈ ಎರಡೂ
ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಗಂಭೀರ ಲೋಪದೋಷ ಎಸಗಿರುವುದು ಮೇಲ್ನೋಟಕ್ಕೆ ಎದ್ದುಕಾಣುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಒಳಾಂಗಣ ಕ್ರೀಡಾಂಗಣ ಹಾಗೂ ಶಿಕ್ಷಣ ಮಹಾವಿದ್ಯಾಲಯದ ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಹಲವು ಬಿಲ್‌ಗಳನ್ನು ಎನ್.ಎಚ್.ಶ್ರೀಪಾದ ರಾವ್ ಹಾಗೂ ಜಗದೀಶ ಎಂ. ಅವರು ಅಧಿಕೃತ ಎಂಜಿನಿಯರ್‌ರ ದೃಢೀಕರಣವಿಲ್ಲದೆ ಪಾವತಿ ಮಾಡಿದ್ದಾರೆ. ಕೆಲವು ಬಿಲ್‌ಗಳಿಗೆ ಸಂಸ್ಥೆಯ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ಶ್ರೀನಿವಾಸ್ ಎಂಬುವವರು ದೃಢೀಕರಣ ನೀಡಿದ್ದಾರೆ. ಇಂತಹ ಹಲವು ಲೋಪಗಳು ನಡೆದಿವೆ ಎಂದು ದೂರಿನಲ್ಲಿ ಹೇಳಲಾಗಿದೆ.

ಎಂಡಿಎಫ್‌ನ ಹಿಂದಿನ ಉಪಾಧ್ಯಕ್ಷರು ಕಳೆದ ಮಾರ್ಚ್ ತಿಂಗಳಲ್ಲಿ ತಾವು ಶಿವಮೊಗ್ಗದ ಶಿಮೂಲ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದ ಬಗ್ಗೆ ಪತ್ರಿಕೆಯೊಂದಕ್ಕೆ ಜಾಹೀರಾತು ನೀಡಿದ್ದಾರೆ. ಈ ಜಾಹೀರಾತಿನ ಶುಲ್ಕವನ್ನು ಎಂಡಿಎಫ್ ವತಿಯಿಂದ ಪಾವತಿಸಲಾಗಿದೆ
ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

2019–20ನೇ ಸಾಲಿನ ಆಡಿಟ್ ವರದಿಯಲ್ಲಿ ಲೆಕ್ಕಪರಿಶೋಧಕರು ಸುಮಾರು 290 ಲೋಪಗಳನ್ನು ನಮೂದಿಸಿದ್ದಾರೆ. ಆದರೆ ಆ ಸಾಲಿನ ವಾರ್ಷಿಕ ವರದಿಯಲ್ಲಿ ಗಂಭೀರವಲ್ಲದ 50 ಲೋಪಗಳನ್ನು ಮಾತ್ರ ಸದಸ್ಯರ ಗಮನಕ್ಕೆ ತಂದು ಉಳಿದ ಲೋಪಗಳನ್ನು ಮರೆಮಾಚಲಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನುಕ್ರಮ ಜರುಗಿಸುವಂತೆ ದೂರಿನಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.