ADVERTISEMENT

ಶಿವಮೊಗ್ಗ | ಇಳೆಯ ತಬ್ಬಿದ ಮಳೆ: ಎಲ್ಲೆಡೆ ಜೀವಕಳೆ

ಜಿಲ್ಲೆಯಲ್ಲಿ ವಾಡಿಕೆಯಷ್ಟು ಬಾರದ ಮಳೆ; ಮುಗಿಲಿನತ್ತ ರೈತರ ಚಿತ್ತ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 5:59 IST
Last Updated 26 ಜೂನ್ 2022, 5:59 IST
ಶಿವಮೊಗ್ಗದ ವಿನೋಬ ನಗರದ ಮುಖ್ಯರಸ್ತೆಯಲ್ಲಿ ಶನಿವಾರ ಮುಂಜಾನೆ ಮಳೆಯಲ್ಲಿಯೇ ಶಾಲೆಗೆ ಅಮ್ಮನ ಕೈಹಿಡಿದು ಹೊರಟ ಮಕ್ಕಳು ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ
ಶಿವಮೊಗ್ಗದ ವಿನೋಬ ನಗರದ ಮುಖ್ಯರಸ್ತೆಯಲ್ಲಿ ಶನಿವಾರ ಮುಂಜಾನೆ ಮಳೆಯಲ್ಲಿಯೇ ಶಾಲೆಗೆ ಅಮ್ಮನ ಕೈಹಿಡಿದು ಹೊರಟ ಮಕ್ಕಳು ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ   

ಶಿವಮೊಗ್ಗ: ಬಹುತೇಕ ಜೂನ್ ತಿಂಗಳು ಪೂರ್ತಿ ಮುನಿಸಿಕೊಂಡ ಮಳೆರಾಯ ವಾರಾಂತ್ಯದ ಶನಿವಾರ ಬೆಳಗಿನ ಜಾವ ಜಿಲ್ಲೆಯ ಹಲವು ಕಡೆ ಗಂಟೆಗಳ ಕಾಲ ಸದ್ದು ಮಾಡಿದ. ಮುನಿಸು ಮರೆತ ಗೆಳತಿಯಂತೆ ಇಳೆಯ ತಬ್ಬಿನಿಂತನು. ಹೀಗಾಗಿ ಬೆಳಿಗ್ಗೆಯಿಂದ ಎಲ್ಲೆಲ್ಲೂ ಮಳೆಯ ಸಿಂಚನ.

ಜೂನ್‌ನಲ್ಲಿ ಆಗೊಮ್ಮೆ, ಈಗೊಮ್ಮೆ ತುಂತುರು ಮಳೆ ಹೊರತುಪಡಿಸಿ ಜಿಲ್ಲೆಯಲ್ಲಿ ಬರೀ ಮೋಡ–ಗಾಳಿಯ ಜುಗಲ್‌ಬಂದಿಯೇ ಕಂಡಿತ್ತು. ಮೃಗಶಿರಾ ಸಿಂಚನವೂ ಕಾಣದಾಗಿತ್ತು. ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸಿದ್ದ ರೈತರು ಆಸೆ ಕಂಗಳ ಹೊತ್ತು ಮುಗಿಲತ್ತ ಮುಖ ಮಾಡಿದ್ದರು. ಅಡಿಕೆ ತೋಟಗಳದ್ದೂ ಅದೇ ಪರಿಸ್ಥಿತಿ. ಆದರೆ ಮೋಡ ಸಾಂದ್ರಗೊಂಡರೂ ನೆಲಕ್ಕೆ ಹನಿಯಲು ಮಳೆರಾಯ ಹೊಯ್ದಾಡುತ್ತಿದ್ದ. ಇದರಿಂದ ಕೃಷಿಕರ ಮೊಗದಲ್ಲಿ ಬಹುತೇಕ ನಿರಾಶೆಯ ಕಾರ್ಮೋಡವೇ ಆವರಿಸಿತ್ತು. ‘ಮಳೆ’ ನಾಡಿನಲ್ಲೂ ‘ಬರ’ ಒಡಮೂಡುವುದೇ ಎಂಬ ಚಿಂತೆಯ ಗೆರೆ ಮೂಡಿತ್ತು.

ಆದರೆ, ತುಸು ಬಿರುಸಾಗಿಯೇ ಸುರಿದ ಮಳೆರಾಯ ಇಳೆಯನ್ನು ತೋಯ್ದು, ಹಸಿರೋತ್ಸವಕ್ಕೆ ಮುನ್ನುಡಿ ಬರೆದ. ಹೀಗಾಗಿ ಮಲೆನಾಡು ಜೀವ ಪಡೆಯಿತು. ಮೋಡಗಳ ತಾಕಲಾಟ, ಮಳೆಯ ನಿರಂತರತೆ ಥಂಡಿ ವಾತಾವರಣ ಸೃಷ್ಟಿಸಿತ್ತು. ಆರಿದ್ರಾ ಮಳೆಯೊಂದಿಗೆ ಕುಳಿರ್ಗಾಳಿಯ ಬಿಸುಪುಮೈ–ಮನಗಳನ್ನು ಬಿಸಿಯಾಗಿಸಿತು.

ADVERTISEMENT

ಶಿವಮೊಗ್ಗ ನಗರದಲ್ಲಿ ರಸ್ತೆ, ಬಯಲು, ಗಿಡ–ಮರಗಳಿಗೂ ಮಜ್ಜನದ ಸಂಭ್ರಮ. ಡಾಂಬರೀಕರಣಗೊಂಡ ರಸ್ತೆಗಳ ಕಪ್ಪು, ನೀರ ಹಾದಿಯಲ್ಲಿ ಹೊಳಪು ಪಡೆದಿತ್ತು. ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿಕೊಂಡಿತು.

ನಸುಕಿನಲ್ಲಿ ವಾಕಿಂಗ್, ಜಾಗಿಂಗ್‌, ಕಸರತ್ತಿಗೆ ಹೊರಡುತ್ತಿದ್ದವರು ಮಳೆ ಮುಗಿದು ಸೂರ್ಯನ ದರ್ಶನದ ನಂತರ ಮನೆಯಿಂದ ಹೊರಬಿದ್ದರು. ಹಿರಿಯ ಜೀವಗಳು ಮನೆಯಿಂದ ಹೊರಗೆ ತೆರಳದೇ ನಿದ್ರೆಯ ಅವಧಿ ವಿಸ್ತರಿಸಿಕೊಂಡು ರಗ್ಗಿನ ಆಸರೆ ಪಡೆದರು.

ಸ್ವೆಟರ್, ಜರ್ಕಿನ್, ಟೋಪಿ, ಶಾಲು ಎಲ್ಲವೂ ಮತ್ತೆ ಜೀವ ಪಡೆದವು. ಜೊತೆಗೆ ಚಹಾ, ಕಾಫಿಯ ಸ್ವಾದಕ್ಕೆ ಮೊರೆ ಹೋದರು. ಮಕ್ಕಳು ಶಾಲೆಗೆ ಹೋಗುವ ಹೊತ್ತಿಗೆ ಮಳೆರಾಯ ಬಿಡುವು ನೀಡಿದ್ದ.

ಜಿಲ್ಲೆಯಲ್ಲಿ ಶೇ 75ರಷ್ಟು ಮಳೆ ಕೊರತೆ
ಜಿಲ್ಲೆಯಲ್ಲಿ ಜೂನ್ ತಿಂಗಳು ವಾಡಿಕೆಗಿಂತ ಮಳೆ ಕಡಿಮೆ ಆಗಿದ್ದು, ಮುಂಗಾರು ಹಂಗಾಮು ಆರಂಭದಲ್ಲಿ ನಿರಾಶೆ ಮೂಡಿಸಿದೆ. ಈ ಬಾರಿ ಮಳೆ ಶೇ 75ರಷ್ಟು ಕೊರತೆ ಆಗಿದೆ. ವಾಡಿಕೆಯಂತೆ ಜೂನ್ 1ರಿಂದ 23ರವರೆಗೆ 326 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 82 ಮಿ.ಮೀ. ಮಾತ್ರ ಸುರಿದಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮಳೆ ಮಾಹಿತಿ ವಿಭಾಗದ ದಿನೇಶ್ ಹೇಳುತ್ತಾರೆ.

ಯೆಲ್ಲೋ ಅಲರ್ಟ್: ಜಿಲ್ಲೆಯಲ್ಲಿ ಜೂನ್ 26ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 2.5 ಮಿ.ಮೀ.ನಿಂದ 65 ಮಿ.ಮೀವರೆಗೆ ಮಳೆ ಬೀಳಲಿದೆ. 2019ರಲ್ಲೂ ಜೂನ್–ಜುಲೈ ತಿಂಗಳಲ್ಲಿ ಮಳೆ ಆಗಿರಲಿಲ್ಲ. ಆದರೆ ಆಗಸ್ಟ್‌ನಲ್ಲಿ ಭರ್ಜರಿ ಮಳೆ ಸುರಿದಿತ್ತು ಎಂದು ಅವರು ತಿಳಿಸಿದರು.

ಆಗುಂಬೆಯಲ್ಲೂ ಮಳೆ ಕೊರತೆ
ಮಲೆನಾಡಿನ ಮಳೆ ಪ್ರದೇಶ ಆಗುಂಬೆಯಲ್ಲೂ ಈ ಬಾರಿ ಶೇ 84ರಷ್ಟು ಮಳೆಯ ಕೊರತೆ ಆಗಿದೆ. ವಾಡಿಕೆಯಂತೆ ಜೂನ್ 1ರಿಂದ 23ರವರೆಗೆ ಅಲ್ಲಿ 1,115 ಮಿ.ಮೀ, ಮಳೆ ಬೀಳಬೇಕಿತ್ತು. ಆದರೆ, 180 ಮಿ.ಮೀ, ಮಳೆ ಬಿದ್ದಿದೆ. ಅಗ್ರಹಾರದಲ್ಲಿ ಶೇ 86, ಮಂದಗದ್ದೆಯಲ್ಲಿ ಶೇ 79ರಷ್ಟು ಮಳೆ ಕಡಿಮೆ ಬಿದ್ದಿದೆ.

ಬಿತ್ತನೆ ಸ್ವಲ್ಪ ತಡ
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಪ್ರಮುಖವಾಗಿ ಮುಸುಕಿನ ಜೋಳ ಹಾಗೂ ಭತ್ತ ಬೆಳೆಯುತ್ತಾರೆ. ಈ ಬಾರಿ ಮಳೆ ಕೊರತೆಯಿಂದ ಬಿತ್ತನೆ ಸ್ವಲ್ಪ ತಡವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಿ.ಸಿ.ಪೂರ್ಣಿಮಾ ಹೇಳುತ್ತಾರೆ.

ಜಿಲ್ಲೆಯಲ್ಲಿ ಒಟ್ಟು 53 ಸಾವಿರ ಹೆಕ್ಟೇರ್ ಮುಸುಕಿನ ಜೋಳ ಬಿತ್ತನೆಯ ಗುರಿ ಇದೆ. ಇಲ್ಲಿಯವರೆಗೆ 22 ಸಾವಿರ ಹೆಕ್ಟೇರ್ ಪೂರ್ಣಗೊಂಡಿದೆ. ಜುಲೈ 15ರವರೆಗೂ ಇನ್ನೂ ಕಾಲಾವಕಾಶ ಇದೆ ಎನ್ನುತ್ತಾರೆ.

79,600 ಹೆಕ್ಟೇರ್ ಭತ್ತ ಬಿತ್ತನೆಯ ಗುರಿ ಇದೆ. ಇಲ್ಲಿಯವರೆಗೆ ನಾಲ್ಕು ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಭತ್ತದ ನಾಟಿಗೆ ಆಗಸ್ಟ್‌ ಕೊನೆಯವರೆಗೂ ಸಮಯವಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.