ADVERTISEMENT

ಸೊರಬ: ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ

ಒಟ್ಟಾಗಿ ನಿರ್ಣಯಕ್ಕೆ ಸಹಿ ಹಾಕಿದ ಸದಸ್ಯರು

ರಾಘವೇಂದ್ರ ಟಿ.
Published 28 ಸೆಪ್ಟೆಂಬರ್ 2021, 3:10 IST
Last Updated 28 ಸೆಪ್ಟೆಂಬರ್ 2021, 3:10 IST
ಸೊರಬದಲ್ಲಿ ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಪ್ರಕಟಿಸಿದ ಬಳಿಕ ಸದಸ್ಯರು ಕಾಂಗ್ರೆಸ್ ಮುಖಂಡರೊಂದಿಗೆ ಸಂಭ್ರಮಾಚರಣೆ ನಡೆಸಿದರು
ಸೊರಬದಲ್ಲಿ ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಪ್ರಕಟಿಸಿದ ಬಳಿಕ ಸದಸ್ಯರು ಕಾಂಗ್ರೆಸ್ ಮುಖಂಡರೊಂದಿಗೆ ಸಂಭ್ರಮಾಚರಣೆ ನಡೆಸಿದರು   

ಸೊರಬ: ಒಂದು ತಿಂಗಳ ಹಿಂದೆ ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್ ಅವರ ವಿರುದ್ಧ ಪಕ್ಷಾತೀತವಾಗಿ ಅವಿಶ್ವಾಸ ಗೊತ್ತುವಳಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸೋಮವಾರ ಉಪಾಧ್ಯಕ್ಷ ಮಧುರಾಯ್ ಶೇಟ್ ಅವರ ಅಧ್ಯಕ್ಷತೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿದರು.

ಒಟ್ಟು 12 ಸದಸ್ಯರ ಬಲದಲ್ಲಿ ಬಿಜೆಪಿಯ 5, ಕಾಂಗ್ರೆಸ್ 4, ಜೆಡಿಎಸ್ ಹಾಗೂ ಪಕ್ಷೇತರ ತಲಾ ಒಬ್ಬ ಸದಸ್ಯರು ಸೇರಿ ಒಟ್ಟು 11 ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಅಂಗೀಕರಿಸುವಂತೆ ಕೈಎತ್ತಿದರು.

ಶಾಸಕ ಕುಮಾರ್ ಬಂಗಾರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂ.ಡಿ. ಉಮೇಶ್ ಅವರು ಶಾಸಕರ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಸ್ವಾಮಿನಿಷ್ಠೆಗೆ ಪೂರಕವಾಗಿ ಸದಸ್ಯರ ವಿರೋಧದ ನಡುವೆಯೂ ಶಾಸಕರು ರೆಸಾರ್ಟ್ ರಾಜಕಾರಣ ನಡೆಸಿ ತಮ್ಮ ಬೆಂಬಲಿಗನಿಗೆ ಪಟ್ಟ ಕಟ್ಟುವಲ್ಲಿ ಯಶಸ್ವಿಯಾಗಿದ್ದರು.

ADVERTISEMENT

ಆದರೆ ಬದಲಾದ ಸನ್ನಿವೇಶದಲ್ಲಿ ಪುರಸಭೆ ಅಧ್ಯಕ್ಷರು ಶಾಸಕರ ಆಣತಿಯಂತೆ ನಡೆದುಕೊಳ್ಳುತ್ತಾರೆ. ಸದಸ್ಯರಿಗೆ ಅಗೌರವ ತೋರುತ್ತಾ ನಿರಂಕುಶ ಆಡಳಿತ ನಡೆಸುತ್ತಾರೆ ಎಂದು ಬಿಜೆಪಿ ಸದಸ್ಯರೇ ಅಧ್ಯಕ್ಷರ ವಿರುದ್ಧ ಬಂಡಾಯವೆದ್ದಿದ್ದರು. ಕಾಂಗ್ರೆಸ್ ಹಾಹಾಗೂ ಜೆಡಿಎಸ್ ಸದಸ್ಯರ ಜೊತೆಗೂಡಿ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿದ್ದರು.

ಒಂದು ತಿಂಗಳಿನಿಂದ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಧ್ಯಕ್ಷರು ವಿಶ್ವಾಸ ಗೊತ್ತುವಳಿಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಉಪಾಧ್ಯಕ್ಷ ಮಧುರಾಯ್ ಶೇಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿಯ ಈರೇಶಪ್ಪ, ಪ್ರಭು ಮೇಸ್ತ್ರಿ, ನಟರಾಜ, ಜಯಲಕ್ಷ್ಮೀ, ಕಾಂಗ್ರೆಸ್‍ನ ಪ್ರಸನ್ನಕುಮಾರ ದೊಡ್ಡಮನೆ, ಶ್ರೀರಂಜನಿ, ಆಫ್ರೀನ್ ಬಾನು, ಸುಲ್ತಾನಾ ಬೇಗಂ, ಜೆಡಿಎಸ್‍ನ ಪ್ರೇಮಾ ಟೋಕಪ್ಪ ಹಾಗೂ ಪಕ್ಷೇತರ ಸದಸ್ಯ ಅನ್ಸರ್ ಅವರು ಅಧ್ಯಕ್ಷರ ವಿರುದ್ಧವಾಗಿ ಕೈಎತ್ತಿದರೆ ಅಧ್ಯಕ್ಷರ ಪರವಾಗಿ ಯಾರೂ ಕೈಎತ್ತಲಿಲ್ಲ. ಇದರಿಂದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡಿತು.

ಅಧ್ಯಕ್ಷರ ಪದಚ್ಯುತಿಗೆ ಮುಂದಾದ ಕೂಡಲೇ ಶಾಸಕ ಕುಮಾರ್ ಬಂಗಾರಪ್ಪ ಜಾಗೃತಗೊಂಡು ತಮ್ಮ ಹಾಗೂ ಸದಸ್ಯರೊಂದಿಗಿರುವ ಭಿನ್ನಾಭಿಪ್ರಾಯವನ್ನು ಒಟ್ಟಾಗಿ ಚರ್ಚಿಸಿ ಸರಿಪಡಿಸಿಕೊಂಡಿದ್ದರೆ ಅವರ ಬೆಂಬಲಿಗ ಉಮೇಶ್ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿರಲಿಲ್ಲ ಎಂದು ಬಿಜೆಪಿ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.