ADVERTISEMENT

ಆಸ್ತಿ ವಿವಾದದಲ್ಲಿ ದಾಯಾದಿ ಕೊಲೆ: 8 ಮಂದಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 10:17 IST
Last Updated 28 ಮಾರ್ಚ್ 2020, 10:17 IST

ಸಾಗರ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ದಾಯಾದಿಯನ್ನೇ ಕೊಲೆ ಮಾಡಿದ ಅಪರಾಧಕ್ಕಾಗಿ ಇಲ್ಲಿಯ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 8 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದೆ.

ಸೊರಬ ತಾಲ್ಲೂಕಿನ ಶಕುನವಳ್ಳಿ ಗ್ರಾಮದ ಅಶೋಕ್, ಸುರೇಶ್, ಅಜ್ಜಪ್ಪ, ಶಿವಮೂರ್ತಿಯಪ್ಪ, ದೇವರಾಜ್, ಪ್ರಕಾಶ್, ಹಾನಗಲ್ ತಾಲ್ಲೂಕಿನ ಸೋಮಸಾಗರ ಗ್ರಾಮದ ಮಹಾಲಿಂಗಪ್ಪ, ವಿರೂಪಾಕ್ಷಪ್ಪ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಗಳು.

2012ನೇ ಸಾಲಿನ ಫೆ. 18ರಂದು ಶಕುನವಳ್ಳಿ ಗ್ರಾಮದಲ್ಲಿ ಜಮೀನಿಗೆ ನೀರು ಬಿಡುವ ವಿಚಾರದಲ್ಲಿ ತಕರಾರು ತೆಗೆದು ಅಶೋಕ್ ಮತ್ತು ಇತರ 7 ಮಂದಿ ತಮ್ಮ ದಾಯಾದಿ ರಾಮಚಂದ್ರಪ್ಪ ಅವರ ಮನೆಗೆ ನುಗ್ಗಿ ಮಾರಕ ಆಯುಧಗಳಿಂದ ಹಲ್ಲೆ ನಡೆಸಿ ಅವರನ್ನು ಕೊಲೆ ಮಾಡಿದ್ದರು.

ADVERTISEMENT

ಈ ಸಂಬಂಧ ಆನವಟ್ಟಿ ಠಾಣೆ ಪೊಲೀಸರು ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ಶೋಭಾ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಎಂ.ವಿ.ತಟಗಾರ್ ವಾದಿಸಿದ್ದರು.

ಶಿಕ್ಷೆಗೆ ಗುರಿಯಾಗಿರುವ ಅಶೋಕ್, ಸುರೇಶ್, ಅಜ್ಜಪ್ಪ, ಶಿವಮೂರ್ತಿಯಪ್ಪ ಇವರು ಕೊಲೆಯಾಗಿರುವ ರಾಮಚಂದ್ರಪ್ಪ ಅವರ ಪತ್ನಿ ಹಾಗೂ ಪುತ್ರಿಗೆ ₹ 5 ಲಕ್ಷ ಪರಿಹಾರ ನೀಡಬೇಕು ಎಂದು ತೀರ್ಪಿನಲ್ಲಿ ಆದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.