ADVERTISEMENT

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ: ಪರಿಸರ ಪ್ರೇಮಿಗಳ ಆಕ್ಷೇಪ

766 ‘ಸಿ’ ರಾಣೆಬೆನ್ನೂರು– ಬೈಂದೂರು ಮಾರ್ಗ; ಜಂಟಿ ಸರ್ವೆಗೆ ಪರಿಸರಾಸ್ತಕರ ಒತ್ತಾಯ; ಅಧಿಕಾರಿಗಳ ಸಮ್ಮತ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 5:46 IST
Last Updated 1 ಮಾರ್ಚ್ 2023, 5:46 IST
ಹೊಸನಗರ ಅರಣ್ಯ ಇಲಾಖೆ ಕಚೇರಿಯಲ್ಲಿ ನಡೆದ ಹೆದ್ದಾರಿ ವಿಸ್ತರಣೆ ಅಹವಾಲು ಸಭೆಯಲ್ಲಿ ಡಿಎಫ್ಎಫ್ ರಾಮಕೃಷ್ಣಪ್ಪ ಮಾತನಾಡಿದರು.
ಹೊಸನಗರ ಅರಣ್ಯ ಇಲಾಖೆ ಕಚೇರಿಯಲ್ಲಿ ನಡೆದ ಹೆದ್ದಾರಿ ವಿಸ್ತರಣೆ ಅಹವಾಲು ಸಭೆಯಲ್ಲಿ ಡಿಎಫ್ಎಫ್ ರಾಮಕೃಷ್ಣಪ್ಪ ಮಾತನಾಡಿದರು.   

ಹೊಸನಗರ: ರಾಣೆಬೆನ್ನೂರು– ಬೈಂದೂರು ರಾಷ್ಟ್ರೀಯ ಹೆದ್ದಾರಿ– 766 ‘ಸಿ’ ಮಾರ್ಗದ ಇರುವಕ್ಕಿ– ನಾಗೋಡಿ ರಸ್ತೆ ವಿಸ್ತರಣೆಗೆ ಪರಿಸರಾಸಕ್ತರಿಂದ ಭಾರಿ ಆಕ್ಷೇಪ ವ್ಯಕ್ತವಾಯಿತು.

ಇಲ್ಲಿನ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಂಬಂಧಿತ ಆಕ್ಷೇಪ– ಅಹವಾಲು ಸಲ್ಲಿಕೆ ಸಭೆಯಲ್ಲಿ ಹೆದ್ದಾರಿ ವಿಸ್ತರಣೆಗಾಗಿ ಬಲಿಯಾಗಲಿರುವ 854 ಮರಗಳ ಕುರಿತು ಜನರು ಆಕ್ಷೇಪಣೆ ಸಲ್ಲಿಸಿದರು.

ಮರಗಳ ಕಡಿತಲೆಗೆ ಅರಣ್ಯ ಇಲಾಖೆಯ ಅನುಮತಿ ಕೇಳಲಾಗಿದೆ. ಹೆದ್ದಾರಿ ಪ್ರಾಧಿಕಾರ ರಸ್ತೆ ವಿಸ್ತರಣೆ ವಿಚಾರದಲ್ಲಿ ಆತುರದ ಕ್ರಮ ಕೈಗೊಂಡಿದೆ. ಇರುವಕ್ಕಿಯಿಂದ ಬಟ್ಟೆಮಲ್ಲಪ್ಪ, ಜಯನಗರದಿಂದ ಹೊಸನಗರ, ನಾಗೋಡಿ ಭಾಗದಲ್ಲಿ ಕೆಲ ಕಿ.ಮೀ. ದೂರವನ್ನು ವಿಸ್ತರಣೆಗೆ ಒಳಪಡಿಸಲಾಗಿದೆ. ಹೆದ್ದಾರಿಯ 231 ಕಿ.ಮೀ. ಅಂತರವನ್ನು ವಿಸ್ತರಿಸದೇ ಇದಿಷ್ಟೇ ಮಾರ್ಗವನ್ನು ಆಯ್ದುಕೊಳ್ಳಲಾಗಿದೆ. ಇದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಪರಿಸರಾಸಕ್ತರು ದೂರಿದರು.

ADVERTISEMENT

‘ಹೆದ್ದಾರಿ ಪ್ರಾಧಿಕಾರ ಮರಗಳ ಕಡಿತಲೆಯಲ್ಲಿ ತೋರುವ ಉತ್ಸುಕತೆಯನ್ನು ಮರ ನೆಡುವಲ್ಲಿ ತೋರುವುದಿಲ್ಲ. ಮರ ಕಡಿತಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಅದರ ನಿರ್ದೇಶನವನ್ನು ಹೆದ್ದಾರಿ ಪ್ರಾಧಿಕಾರ ಅನುಸರಿಸಿದ ಉದಾಹರಣೆ ಇಲ್ಲ. ಸಾಗರದಲ್ಲಿ 8 ಕಿ.ಮೀ. ದೂರದ ಹೆದ್ದಾರಿ ವಿಸ್ತರಣೆ ಮಾಡುವಾಗ ನೀಡಿದ ಯಾವುದೇ ಭರವಸೆ ಈಡೇರಲಿಲ್ಲ. ಈವರೆಗೂ ಒಂದು ಮರ ನೆಟ್ಟಿಲ್ಲ. ಹಾಗಾಗಿ ಹೆದ್ದಾರಿ ಪಕ್ಕದ ಮರ ಉಳಿಸಿಕೊಳ್ಳಬೇಕಾಗಿದೆ. ಇರುವ ಸ್ಥಳದಲ್ಲಿ ಹೆದ್ದಾರಿ ನಿರ್ಮಾಣ ಮಾಡಬೇಕಾಗಿದೆ’ ಎಂದು ಪರಿಸರ ಹೋರಾಟಗಾರ ಅಖಿಲೇಶ ಚಿಪ್ಪಳ್ಳಿ ಆಗ್ರಹಿಸಿದರು.

‘ಹೆದ್ದಾರಿ ವಿಸ್ತರಣೆ ವಿಚಾರದಲ್ಲಿ ಕಾಟಾಚಾರದ ನಿಯಮ ಪಾಲನೆ ಆಗಿದೆ. ಕ್ರಮಬದ್ಧ ಕಾನೂನು ಪಾಲನೆ ಆಗಬೇಕಿದೆ. ಅಲ್ಲದೇ ಸರ್ವೆ ನಡೆಸಿದ ಕ್ರಮ ಸರಿ ಇಲ್ಲ. ಮತ್ತೆ ನಾಗರಿಕರನ್ನು ಒಳಗೊಂಡಂತೆ ಅರಣ್ಯ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ರಸ್ತೆಯ ಜಂಟಿ ಸರ್ವೆ ನಡೆಯಬೇಕಿದೆ. ಆಗ ಎಷ್ಟು ಮರಗಳನ್ನು ಉಳಿಸಬಹುದು ಎಂಬುದು ಸರಿಯಾಗಿ ಲೆಕ್ಕಕ್ಕೆ ಸಿಗುತ್ತದೆ’ ಎಂದು ಶಿವಮೊಗ್ಗದ ಶರಣ್ ಆಗ್ರಹಿಸಿದರು. ಇದಕ್ಕೆ ಸಭೆಯಲ್ಲಿದ್ದ ನಾಗರಿಕರು ಒಮ್ಮತ ಸೂಚಿಸಿದರು. ಅಧಿಕಾರಿಗಳು ಇದಕ್ಕೆ ಸಮ್ಮತಿ ತೋರಿದರು.

‘ಜಂಟಿ ಸರ್ವೆ ನಡೆಸಲು ದಿನಾಂಕ ನಿಗದಿ ಮಾಡಲಾಗುವುದು’ ಎಂದು ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭರವಸೆ ನೀಡಿದ ನಂತರ ಸಭೆ ಮುಕ್ತಾಯವಾಯಿತು. ಡಿಎಫ್ಒ ರಾಮಕೃಷ್ಣಪ್ಪ, ಎಸಿಎಫ್ ಪ್ರಕಾಶ್, ಆರ್‌ಎಫ್‌ಒ ರಾಘವೇಂದ್ರಪ್ಪ, ..... ನಗರ..... ಸಂಜಯ್, ಹೆದ್ದಾರಿ ಪ್ರಾಧಿಕಾರದ ಎಇಇ ಎನ್. ನಿಂಗಪ್ಪ, ಸಹಾಯಕ ಎಂಜಿನಿಯರ್ ಕೆ.ಎಸ್. ಶ್ರೀನಿವಾಸ್, ನಟ ಏಸುಪ್ರಕಾಶ್, ಸಾರ ಧನುಷ್, ಬಿ.ಎಸ್. ಸುರೇಶ್, ಸಾಗರ ಸುಬ್ಬಣ್ಣ, ವಕೀಲ ಗಿರೀಶ್, ಚಕ್ರವಾಕ ಸುಬ್ಬಣ್ಣ, ಕೆ.ಜಿ. ನಾಗೇಶ್, ವೆಂಕಟೇಶಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.