ADVERTISEMENT

ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲೂ ಪಕ್ಷಪಾತ

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್. ಸುಂದರೇಶ್ ಆರೋಪ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 12:46 IST
Last Updated 22 ನವೆಂಬರ್ 2019, 12:46 IST
ಎಚ್.ಎಸ್.ಸುಂದರೇಶ್
ಎಚ್.ಎಸ್.ಸುಂದರೇಶ್   

ಶಿವಮೊಗ್ಗ: ಬಿಜೆಪಿ ಮುಖಂಡರು, ಅಧಿಕಾರಿಗಳು ನೆರೆ ಪರಿಹಾರ ವಿತರಣೆಯಲ್ಲೂ ಪಕ್ಷಪಾತ ಮಾಡುತ್ತಿದ್ದಾರೆ. ಇಂತಹ ನಡೆಶೋಭೆ ತರುವುದಿಲ್ಲಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್.ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಎರಡು ತಿಂಗಳ ಹಿಂದೆ ತುಂಗಾ ಪ್ರವಾಹಕ್ಕೆ ಸಿಲುಕಿ ಹಲವು ಬಡಾವಣೆಗಳ ಸಾವಿರಾರು ಜನರು ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇಂದಿಗೂ ಹಲವು ಕುಟುಂಬಗಳು ಬಯಲಲ್ಲೇ ಜೀವನ ಸಾಗಿಸುತ್ತಿದ್ದಾರೆ. ಶೌಚಾಲಯಕ್ಕೂ ನಿತ್ಯ ಪರದಾಡುವ ಸ್ಥಿತಿ ಇದೆ. ಸಾಮಗ್ರಿ ಕಾಯುತ್ತಾ ಕೂಲಿ ಕೆಲಸಕ್ಕೂ ಹೋಗುತ್ತಿಲ್ಲ. ಇತ್ತ ಪರಿಹಾರವೂ ಬಾರದೆ ಪರದಾಡುತ್ತಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತರ ಬವಣೆ ಬಿಚ್ಚಿಟ್ಟರು.

ಪ್ರವಾಹದ ಸಮಯದಲ್ಲೇ ನಗರ ಪ್ರದಕ್ಷಿಣೆ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಕ್ಷಣ ₨ 50 ಕೋಟಿ ನೆರವುನೀಡುವುದಾಗಿ ಘೋಷಿಸಿದ್ದರು. ಕೆಲವರಿಗೆ ₨ 10 ಸಾವಿರ, ಕೆಲವರಿಗೆ ₨ 25 ಸಾವಿರ ನೀಡಿದ್ದಾರೆ. ಅವರ ಪಕ್ಷದ ಕಾರ್ಯಕರ್ತರಿಗೆ, ಹಿಂಬಾಲಕರಿಗೆ ₨ 35 ಸಾವಿರ ನೀಡಲಾಗಿದೆ. ನಿಜವಾದ ಎಷ್ಟೋ ಸಂತ್ರಸ್ತರಿಗೆ ಇದುವರೆಗೂ ಬಿಡಿಗಾಸು ಸಿಕ್ಕಿಲ್ಲ. ಕೆಲವು ಬಡಾವಣೆಗಳಲ್ಲಿ ಆಧಾರ್ ಲಿಂಕ್‌ ಮಾಡುವುದನ್ನೇ ತಪ್ಪು ಮಾಡಲಾಗಿದೆ. ಇದೂ ಉದ್ದೇಶಪೂರ್ವಕ ಎಂದು ದೂರಿದರು.

ADVERTISEMENT

ಕುಂಬಾರ ಗುಂಡಿ, ಇಮಾಂಬಾಡ, ಸೀಗೆಹಟ್ಟಿ, ಮಂಡಕ್ಕಿಭಟ್ಟಿ, ಬಿ.ಬಿ.ರಸ್ತೆ, ರಾಜೀವ್ ಗಾಂಧಿ ಬಡಾವಣೆ, ಚಿಕ್ಕಲ್, ಬಾಪೂಜಿ ನಗರ, ಶಾಂತಮ್ಮ ಬಡಾವಣೆ ಸೇರಿದಂತೆ ಹಲವು ಕುಟುಂಬಗಳಿಗೆ ಒಂದು ಪೈಸೆ ಪರಿಹಾರವೂ ಸಿಕ್ಕಿಲ್ಲ. ಈಗಲಾದರೂ ಜಿಲ್ಲಾಧಿಕಾರಿ, ಪಾಲಿಕೆ ಆಯಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಜನರ ಅಹವಾಲು ಆಲಿಸಬೇಕು. ಒಂದು ವಾರದ ಒಳಗೆ ಎಲ್ಲ ಸಂತ್ರಸ್ತರಿಗೂ ಪರಿಹಾರ ನೀಡಬೇಕು. ಇಲ್ಲದಿದ್ದರೆ ಪಕ್ಷ ಬೀದಿಗಿಳಿದು ಹೋರಾಟ ನಡೆಸುತ್ತದೆ ಎಂದು ಎಚ್ಚರಿಸಿದರು.

ಸ್ಮಾರ್ಟ್‌ಸಿಟಿ ಕಾಮಗಾರಿ ಅವ್ಯವಸ್ಥೆಯ ಆಗರವಾಗಿದೆ. ಹಣ ಖರ್ಚು ಮಾಡುವುದೇ ಸಾಧನೆ ಎನ್ನುವಂತಾಗಿದೆ. ವರ್ಷದ ಹಿಂದೆ ತುಂಗಾ ತೀರದಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ವಾಕ್‌ಪಾತ್ ಮಾಡಿದ್ದರು. ಈಗ ಅದನ್ನು ಕಿತ್ತು ಮತ್ತೆ ಮಾಡಲಾಗುತ್ತಿದೆ. ಸಾಗರ ರಸ್ತೆಯದ್ದೂ ಅದೇ ಕಥೆ. ಸಾರ್ವಜನಿಕರ ಸಾವಿರ ಕೋಟಿ ವ್ಯರ್ಥ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸಂಪುಟ ಸಭೆಯನ್ನು ಪಕ್ಷದ ವೇದಿಕೆ ಮಾಡಿಕೊಂಡಿದ್ದಾರೆ. ಕ್ರಮ ಕೈಗೊಳ್ಳಬೇಕಾದ ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ. ಮಲೆನಾಡಿನ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದರೂ ನೆರವಿಗೆ ಬಂದಿಲ್ಲ. ಪ್ರಶ್ನೆ ಮಾಡುವವರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಹರಿಹಾಯ್ದರು.

ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಸಮಯದಲ್ಲಿ ನಗರದ ಬಡವರಿಗೆ 4,836 ಮನೆಗಳನ್ನು ಮಂಜೂರು ಮಾಡಿದ್ದರು. ಜನರು ಠೇವಣಿ ಹಣವನ್ನೂ ಕಟ್ಟಿದ್ದಾರೆ. ಇದುವರೆಗೂ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಹಿಂದೆ ಕೊಳೆಗೇರಿ ನಿವಾಸಿಗಳಿಗೆ ನಕಲಿ ಹಕ್ಕು ಪತ್ರ ನೀಡಲಾಗಿತ್ತು. ಈಗಲೂ ಆ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರಿಗೆ ಹಕ್ಕುಪತ್ರ ನೀಡುವ ಜತೆಗೆ, ಮನೆ ಕಟ್ಟಿಕೊಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಹಿರಿಯ ಮುಖಂಡ ರಾಮೇಗೌಡ, ಪಾಲಿಕೆ ಸದಸ್ಯೆ ಯಮುನಾ, ಮಾಜಿ ಸದಸ್ಯ ಪಂಡಿತ್ ವಿ.ವಿಶ್ವನಾಥ್, ಸೌಗಂಧಿಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.