ADVERTISEMENT

ಹಾಸ್ಟೆಲ್‌ ಸೀಟು ಹಂಚಿಕೆ ಲೋಪ: ಎನ್‌ಎಸ್‌ಯುಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 11:25 IST
Last Updated 2 ಆಗಸ್ಟ್ 2019, 11:25 IST
ಶಿವಮೊಗ್ಗದಲ್ಲಿ ಶುಕ್ರವಾರ ಎನ್‌ಎಸ್‌ಯುಐ ಕಾರ್ಯಕರ್ತರು ಹಾಸ್ಟೆಲ್‌ ಸೀಟು ಹಂಚಿಕೆ ಲೋಪ ಖಂಡಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಎನ್‌ಎಸ್‌ಯುಐ ಕಾರ್ಯಕರ್ತರು ಹಾಸ್ಟೆಲ್‌ ಸೀಟು ಹಂಚಿಕೆ ಲೋಪ ಖಂಡಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಹಾಸ್ಟೆಲ್‌ಗಳಲ್ಲಿ ರೋಸ್ಟರ್ ಪದ್ಧತಿಯಂತೆ ಸೀಟು ಹಂಚಿಕೆ ಮಾಡದೆ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಎನ್ಎಸ್‌ಯುಐ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಮೂಲ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ನಡೆಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‌ಗಳ ಸೀಟು ಹಂಚಿಕೆಯಲ್ಲಿ ಅನ್ಯಾಯ ನಡೆದಿದೆ. ನಿಯಮದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೆಲ್‌ಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಪರಿಶಿಷ್ಟ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು. ಪ್ರತಿಭಾನ್ವಿತರಿಗೆ, ದೂರದ ಊರಿನ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಬೇಕು. ಈ ಯಾವ ನಿಯಮಗಳನ್ನೂ ಅನುಸರಿಸಿಲ್ಲ. ಮನಬಂದಂತೆ ಸೀಟು ಹಂಚಿಕೆ ಮಾಡಲಾಗಿದೆ ಎಂದು ದೂರಿದರು.

ADVERTISEMENT

ಹಾಸ್ಟೆಲ್‌ ಪ್ರವೇಶ ಬಯಸಿರುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸಂಖ್ಯೆ ಹೆಚ್ಚಿದಾಗ ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದು ಅವಕಾಶ ಮಾಡಿಕೊಡಬೇಕು. ಪ್ರವೇಶ ಸಿಗದವರಿಗೆ ಮಾಸಿಕ ₨ 1500 ವಸತಿ ಭತ್ಯೆ ನೀಡಬೇಕು. ಆದರೆ, ಈ ಯಾವುದೇ ಕ್ರಮ ಇಲಾಖೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ನಗರದ ಯಾವುದೇ ಹಾಸ್ಟೆಲ್‌ನಲ್ಲಿ ಮೂಲಸೌಕರ್ಯ ಇಲ್ಲ. ಸರ್ಕಾರ ಪ್ರತಿ ವಿದ್ಯಾರ್ಥಿಗೆ ಊಟಕ್ಕೆ ಹೆಚ್ಚುವರಿ ಹಣ ಬಿಡುಗಡೆ ಮಾಡಿದ್ದರೂ, ಗುಣಮಟ್ಟದ ಆಹಾರ ನೀಡುತ್ತಿಲ್ಲ. ಈ ಆವಾಂತರಗಳಿಗೆ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳೇ ನೇರ ಹೊಣೆ. ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿಗಳು ಅವ್ಯವಸ್ಥೆ ಸರಿಪಡಿಸಬೇಕು. ಪ್ರವೇಶಾತಿ ಪಟ್ಟಿ ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಎನ್ಎಸ್‌ಯುಐ ಪದಾಧಿಕಾರಿಗಳಾದ ಎಚ್.ಎಸ್.ಬಾಲಾಜಿ, ಕೆ.ಚೇತನ್, ವಿಜಯ್, ರಘು ಆರ್.ಗೌಡ, ರವಿಕುಮಾರ್ ಜಿ, ಪ್ರದೀಪ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.