ADVERTISEMENT

ರಾಜಕೀಯ ನಾಯಕರಿಗೆ ಸಾಮಾಜಿಕ ಬದ್ಧತೆ ಇಲ್ಲ: ಆರ್.ಕೆ.ಸಿದ್ರಾಮಣ್ಣ ಬೇಸರ

ವಿಧಾನ ಪರಿಷತ್‌ ಮಾಜಿ ಸದಸ್ಯ

​ಪ್ರಜಾವಾಣಿ ವಾರ್ತೆ
Published 3 ಮೇ 2025, 14:30 IST
Last Updated 3 ಮೇ 2025, 14:30 IST
ಆರ್.ಕೆ.ಸಿದ್ದರಾಣ್ಣ
ಆರ್.ಕೆ.ಸಿದ್ದರಾಣ್ಣ   

ಶಿವಮೊಗ್ಗ: ‘ಸಾಮಾಜಿಕ ನ್ಯಾಯದ ಬಗ್ಗೆ ರಾಜಕೀಯ ಪಕ್ಷಗಳು ಯೋಚಿಸುವುದಿಲ್ಲ. ಇಲ್ಲಿ ದುರುದ್ದೇಶಪೂರಿತ ಚಟುವಟಿಕೆಗೆ  ಬೇಕಾದ ತಂತ್ರಗಳ ಬಗ್ಗೆ ಮಾತ್ರವೇ ಪಕ್ಷಗಳು ಚಿಂತಿಸುತ್ತವೆ’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಆರ್.ಕೆ.ಸಿದ್ರಾಮಣ್ಣ ಹೇಳಿದರು.

‘ಯಾವುದೇ ರಾಜಕೀಯ ಪಕ್ಷವಿರಲಿ ಸಾಮಾಜಿಕ ನ್ಯಾಯದ ಪ್ರಶ್ನೆ ಬಂ‌ದಾಗ, ಪಕ್ಷದ ಗೆಲುವಿಗೆ ಬೇಕಾದ ತಂತ್ರಗಳನ್ನು ಮಾತ್ರ ಹೆಣೆಯುತ್ತವೆ. ಇದು ತಪ್ಪು ಎಂತಲೂ ಕೂಡ ಹೇಳುವುದಿಲ್ಲ. ಪಕ್ಷದ ಗೆಲುವಿಗೆ ಇದು ಅನಿವಾರ್ಯ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

‘ರಾಜಕೀಯ ಪಕ್ಷದ ನಾಯಕರು ಸಾಮಾಜಿಕ ನ್ಯಾಯಕ್ಕೆ ಪ್ರಾಮಾಣಿಕ ಬದ್ಧತೆ ತೋರುತ್ತಿಲ್ಲ. ಇದನ್ನು ದುಃಖದಿಂದ ಹೇಳಬೇಕಾಗುತ್ತದೆ. ಕೇಂದ್ರ ಸರ್ಕಾರ ಜನಗಣತಿಯ ಜೊತೆಗೆ ಜಾತಿಗಣತಿಯನ್ನೂ ಮಾಡುತ್ತೇವೆ ಎಂದಿರುವುದು ಸ್ವಾಗತಾರ್ಹ. ಸಾಮಾಜಿಕ ನ್ಯಾಯ ಕೊಡಲು ಕೇಂದ್ರ ದೊಡ್ಡ ಹೆಜ್ಜೆ ಇಟ್ಟಿದೆ. ಇದರ ಜತೆಗೆ ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನೂ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ರಾಜ್ಯ ಸರ್ಕಾರ ನಡೆಸಿರುವುದು ಸಮೀಕ್ಷೆಯೇ ವಿನಾ ಜಾತಿ ಗಣತಿ ಅಲ್ಲ. ಗಣತಿ ನಡೆಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ. ಇಲ್ಲಿ ಸಮೀಕ್ಷೆ ಹಾಗೂ ಸಮುದಾಯಗಳಿಂದ ಬಂದ ಶಿಫಾರಸುಗಳ ಆಧಾರದ ಮೇಲೆ ಸಾಮಾಜಿಕ ನ್ಯಾಯ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಹಿಂದುಳಿದ ಜಾತಿಗಳ ಒಕ್ಕೂಟ ಒತ್ತಾಯಿಸುತ್ತದೆ’ ಎಂದರು.

‘ರಾಜ್ಯ ಸರ್ಕಾರ ನಡೆಸಿರುವ ಗಣತಿ ಎನ್ನಲಾದ ವರದಿಯೇ ಅಧಿಕೃತವಲ್ಲ. ಇಲ್ಲಿ ಹಿಂದುಳಿದ ಸಮುದಾಯಗಳು ಸೇರಿದಂತೆ ವಿವಿಧ ಸಮಾಜದಿಂದ ಜಾತಿ ಜನಸಂಖ್ಯೆಯ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಬಲಿಷ್ಟ ಸಮುದಾಯಗಳೂ ಕೂಡ ಆಕ್ಷೇಪಿಸಿವೆ. ಆದ್ದರಿಂದ, ರಾಜ್ಯ ಸರ್ಕಾರದ ಸಮೀಕ್ಷಾ ವರದಿಯನ್ನು ಗಣತಿ ಎಂದು ಬಿಂಬಿಸಿದರೂ ಕೂಡ ಅದಕ್ಕೆ ಶಾಸನ ಬದ್ಧವಾದ ಮಾನ್ಯತೆ ಲಭಿಸುವುದಿಲ್ಲ’ ಎಂದರು.

ಹಿಂದುಳಿದ ಜಾತಿಗಳ ಒಕ್ಕೂಟ ಅಧ್ಯಕ್ಷ ಬಿ.ರಾಜು, ‘ಎಲ್ಲ ವರ್ಗಗಳಿಗೂ ಸಾಮಾಜಿಕ, ಸಮಾನತೆಯ ಪರಿಕಲ್ಪನೆ ಸೇರಿದಂತೆ ರಾಜಕೀಯ ಸ್ಥಾನಮಾನ ನೀಡಲೂ ಕಾಂತರಾಜ ಆಯೋಗದ ಜಾತಿ ಗಣತಿಯ ಅಂಕಿ ಅಂಶ ಸಾಕ್ಷಿಯಾಗಲಿದೆ. ಆದ್ದರಿಂದ, ಸಿದ್ದರಾಮಯ್ಯ ಅವರು ಜಾತಿಗಣತಿ ವರದಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟದ ಪ್ರಮುಖರಾದ ಎಸ್.ಬಿ. ಅಶೋಕ್ ಕುಮಾರ್, ಇಕ್ಕೇರಿ ರಮೇಶ್, ಸುಮಿತ್ರಾ ರಂಗನಾಥ, ಮಣಿ, ಎನ್. ಉಮಾಪತಿ, ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.