ADVERTISEMENT

15ರಂದು ಶಾಸಕರಿಗೆ ಉಗಿಯುವ ವಿಶೇಷ ಚಳವಳಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 12:13 IST
Last Updated 12 ಜುಲೈ 2019, 12:13 IST

ಶಿವಮೊಗ್ಗ:ಆಪರೇಷನ್, ಪ್ರತಿ ಆಪರೇಷನ್ ಮಾಡುತ್ತಾ ರೆಸಾರ್ಟ್‌ ರಾಜಕಾರಣಕ್ಕೆ ಮೊರೆ ಹೋದ, ಜನಹಿತ ಮರೆತ ಶಾಸಕರಿಗೆ ರಾಜ್ಯ ರೈತ ಸಂಘ ‘ಉಗಿಯುವ ವಿಶೇಷ ಚಳವಳಿ’ ಹಮ್ಮಿಕೊಂಡಿದೆ.

ರಾಜ್ಯದ ರಾಜಕಾರಣ ದಿಕ್ಕು ತಪ್ಪಿದೆ. ಸಚಿವರು, ಶಾಸಕರಿಗೆ ಹಣ ಮಾಡುವುದೇ ಗುರಿಯಾಗಿದೆ. ರಾಜ್ಯದ ಎಲ್ಲೆಡೆ ಬರಗಾಲ ತಾಂಡವವಾಡುತ್ತಿದ್ದರೂ ಅತ್ತ ಗಮನ ಹರಿಸದ ಶಾಸಕರು ರಾಜೀನಾಮೆ ನಾಟಕ ಆಡುತ್ತಾ ಕಾಲ ಕಳೆಯುತ್ತಿದ್ದಾರೆ. ಶಾಸಕರ ಇಂತಹ ಧೋರಣೆ ಖಂಡಿಸಿ ರೈತ ಸಂಘ ಜುಲೈ 15ರಂದು ಬೆಳಿಗ್ಗೆ 10ಕ್ಕೆ ಶಿವಪ್ಪನಾಯಕ ಸರ್ಕಲ್‌ನಲ್ಲಿ ಉಗಿಯುವ ಚಳವಳಿ ಹಮ್ಮಿಕೊಂಡಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್‌.ಆರ್.ಬಸವರಾಜಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪಕ್ಷಗಳ ವರಿಷ್ಠರಲ್ಲೂ ನೀತಿ ಇಲ್ಲ. ಎಲ್ಲ ಪಕ್ಷಗಳೂ ಸಿದ್ಧಾಂತ ಗಾಳಿಗೆ ತೂರಿವೆ. ಅವರು ನಡೆಸುವ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಅಧಿಕಾರ ಬೇಕಿದೆ. ತಮ್ಮ ಪಕ್ಷದ ಶಾಸಕರನ್ನು ನಿಯಂತ್ರಿಸುವ ಯೋಗ್ಯತೆಯೂ ಆಯಾ ಪಕ್ಷದ ವರಿಷ್ಠರಿಗೆ ಇಲ್ಲವಾಗಿದೆ. ಇಂತಹ ರಾಜಕಾರಣಿಗಳಿಗೆ ಮತದಾರರು ಬುದ್ಧಿ ಕಲಿಸಬೇಕು. ಅನೈತಿಕ ರಾಜಕಾರಣ ಖಂಡಿಸಬೇಕು. ಈ ಕುರಿತು ಜನಜಾಗೃತಿ ಮೂಡಿಸಲು ಚಳವಳಿ ರೂಪಿಸಲಾಗಿದೆ ಎಂದರು.

ADVERTISEMENT

ಎರಡನೇ ಅಭ್ಯರ್ಥಿಗೆ ಶಾಸಕ ಸ್ಥಾನ:

ಜನರಿಂದ ಆಯ್ಕೆಯಾದ ಶಾಸಕ ರಾಜೀನಾಮೆ ನೀಡಿದರೆ ಮತ್ತೆ ಉಪ ಚುನಾವಣೆ ನಡೆಯುತ್ತದೆ. ಜನರ ಹಣ ಖರ್ಚಾಗುತ್ತದೆ. ಅದರ ಬದಲು ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದ ಅಭ್ಯರ್ಥಿಯನ್ನೇ ಶಾಸಕ ಎಂದು ಘೋಷಿಸುವ ಪದ್ಧತಿ ಜಾರಿಗೆ ತರಬೇಕು. ಆಗ ಯಾವ ಶಾಸಕರೂ ಅನಗತ್ಯವಾಗಿ ರಾಜೀನಾಮೆ ನೀಡುವುದಿಲ್ಲ. ಹಾಗೆ ಪಕ್ಷಾಂತರ ನಿಷೇಧ ಕಾಯ್ದೆಗೂ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಂ.ಬುದ್ಧಿವಂತರ ಚಂದ್ರಪ್ಪ, ಮುಖಂಡರಾದ ಬಿ.ಎಂ. ಚಿಕ್ಕಸ್ವಾಮಿ, ಕೆ. ರಾಘವೇಂದ್ರ, ಹಿಟ್ಟೂರು ರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.