ADVERTISEMENT

ಶಿವಕುಮಾರ್ ಜಾದು ಶಿವಮೊಗ್ಗದಲ್ಲಿ ನಡೆಯಲ್ಲ!

ಮೋದಿ ಅಲೆ ಈಗಲೂ ಇದೆ: ಸೊರಬ ಶಾಸಕ ಕುಮಾರ್ ಬಂಗಾರಪ್ಪ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 15:17 IST
Last Updated 19 ಮಾರ್ಚ್ 2019, 15:17 IST
ಕುಮಾರ್ ಬಂಗಾರಪ್ಪ
ಕುಮಾರ್ ಬಂಗಾರಪ್ಪ   

ಶಿವಮೊಗ್ಗ: ಕಾಂಗ್ರೆಸ್‌–ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರ ಸಚಿವ ಡಿ.ಕೆ. ಶಿವಕುಮಾರ್ ಉಸ್ತುವಾರಿ ವಹಿಸಿಕೊಂಡರೂ ಶಿವಮೊಗ್ಗ ಕ್ಷೇತ್ರದಲ್ಲಿ ಗೆಲ್ಲುವುದು ಬಿಜೆಪಿ. ಬಳ್ಳಾರಿ ಜಾದೂ ಇಲ್ಲಿ ನಡೆಯುವುದಿಲ್ಲ ಎಂದು ಸೊರಬ ಶಾಸಕ ಕುಮಾರ್ ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಸಾಧನೆಗಳು. ಮೋದಿ ಅವರ ಅಲೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳು. ಜಾರಿಗೆ ತಂದ ಜನರಪರ ಯೋಜನೆಗಳು, ನೀರಾವರಿ ಸೇರಿದಂತೆ ಜಿಲ್ಲೆಗೆ ನೀಡಿದ ಕೊಡುಗೆಗಳು. ನಿರಂತರ ಜನಸಂಪರ್ಕ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪ್ರಮುಖ ಅಂಶಗಳು. ದೇಶಕ್ಕೆ ಭ್ರಷ್ಟಾಚಾರ ರಹಿತ ಸರ್ಕಾರದ ಅಗತ್ಯವಿದೆ. ಕಾರ್ಯಕರ್ತರ ಪರಿಶ್ರಮ, ರಾಷ್ಟ್ರದ ಭದ್ರತೆ ವಿಷಯಗಳ ಪರಿಣಾಮ ಮತ್ತೊಮ್ಮೆ ಮೋದಿ ಪ್ರಧಾನಿಯಾಗುತ್ತಾರೆ. ಇಲ್ಲೂ ರಾಘವೇಂದ್ರ ಗೆಲ್ಲುತ್ತಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಭವಿಷ್ಯ ನುಡಿದರು.

ಭ್ರಷ್ಟಾಚಾರ ನಿರ್ಮೂಲನೆ, ಹಿರಿಯರ ಸಲಹೆ, ವರಿಷ್ಠರ ಸಹಕಾರ, ಒಳ್ಳೆಯ ಸಮಾಜ ಕಟ್ಟುವ ಗುರಿ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿರುವ ಕಾರಣ ರಾಜ್ಯದಲ್ಲಿ 22 ಕ್ಷೇತ್ರಗಳನ್ನು ಗೆಲ್ಲುವುದು ನಿಶ್ಚಿತ. ಶಿವಮೊಗ್ಗ ಕ್ಷೇತ್ರದಲ್ಲೂ ಕಳೆದ ಬಾರಿಗಿಂತ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಪಡೆಯುತ್ತೇವೆ. ಸಂಸದರಾಗಿ ರಾಘವೇಂದ್ರ ಅವರು ರೈಲ್ವೆ, ನೀರಾವರಿ, ರಸ್ತೆ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು.

ಮಧುಬಂಗಾರಪ್ಪ ಶಾಸಕರಾಗಿದ್ದ 5 ವರ್ಷಗಳ ಅವಧಿಯಲ್ಲಿ ಸೊರಬ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕಾರ್ಯಗಳೂ ಆಗಿಲ್ಲ. ಮರಳಿನ ಸಮಸ್ಯೆ ಬಗೆಹರಿಯಲಿಲ್ಲ. ಬಗರ್‌ಹುಕುಂ ಸಾಗುವಳಿ ಕೊಡಿಸುವಲ್ಲೂ ಭ್ರಷ್ಟಾಚಾರ ನಡೆದಿತ್ತು. ರಸ್ತೆ ವಿಸ್ತರಣೆ ನನೆಗುದಿಗೆ ಬಿದ್ದಿತ್ತು. ಅಂಥವರು ಈಗ ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಜನರು ಒಪ್ಪುವುದಿಲ್ಲ ಎಂದು ಟೀಕಿಸಿದರು.

ADVERTISEMENT

ತಂದೆ ಎಸ್.ಬಂಗಾರಪ್ಪ ಅವರ ಹೆಸರನ್ನು ಮಧುಬಂಗಾರಪ್ಪ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆಗಾಗಿ ಅವರ ಹೆಸರು, ಅವರ ಸಾಧನೆ ಚುನಾವಣಾ ಅಸ್ತ್ರವಾಗಿ ಬಳಸುತ್ತಿದ್ದಾರೆ. ಅವರ ಪುತ್ಥಳಿ ನಿರ್ಮಾಣದಲ್ಲೂ ಗೊಮದಲ ಸೃಷ್ಟಿಸುತ್ತಿದ್ದಾರೆ. ಭಿಕ್ಷೆ ಬೇಡಿ, ಕಳ್ಳತನ ಮಾಡಿ ಪುತ್ಥಳಿ ನಿರ್ಮಿಸುವೆ ಎನ್ನುವ ಮೂಲಕ ರಾಜಕೀಯ ನೇತಾರ ಬಂಗಾರಪ್ಪ ಅವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಂಡ್ಯ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಗೆಲುವು ನಿಶ್ಚಿತ. ಕುಟುಂಬ ರಾಜಕಾರಣಕ್ಕೆ ಅಲ್ಲಿನ ಜನ ಇತಿಶ್ರೀ ಹಾಡುತ್ತಾರೆ. ಪಕ್ಷ ಬಯಸಿದರೆ ಅವರ ಪರ ಮತ ಕೇಳಲೂ ಸಿದ್ಧ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಬಿಜೆಪಿ ಮುಖಂಡರಾದ ಮಧುಸೂದನ್, ಹಿರಣ್ಣಯ್ಯ, ಅಣ್ಣಪ್ಪ, ರತ್ನಾಕರ ಶೆಣೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.