ADVERTISEMENT

ಮುಸ್ಲಿಂ ವಿದ್ಯಾರ್ಥಿಗಳ ಸೌಲಭ್ಯಕ್ಕೆ ಕತ್ತರಿ: ಸಿಎಫ್‌ಐ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 11:05 IST
Last Updated 18 ನವೆಂಬರ್ 2020, 11:05 IST

ಶಿವಮೊಗ್ಗ: ವಿದ್ಯಾರ್ಥಿ ವೇತನ ಮಂಜೂರಾತಿಯಲ್ಲಿ ವಿಳಂಬ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುವ ಪಿಎಚ್‌.ಡಿ, ಎಂ.ಫಿಲ್ ಫೆಲೋಶಿಪ್ ಕಡಿತ ವಿರೋಧಿಸಿ ನ.24ರಂದು ರಾಜ್ಯದಾದ್ಯಂತ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿಯ ಕಾರ್ಯದರ್ಶಿ ಅಶ್ವಾನ್‌ ಸಾಧಿಕ್‌ ಹೇಳಿದರು.

ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ, ಕಾಲೇಜುಗಳು ಆರಂಭಗೊಳ್ಳಲಿವೆ. ಕೊರೊನಾ ಪರಿಣಾಮ ಜನರ ಆರ್ಥಿಕ ಸ್ಥಿತಿಗತಿ ತೀರಾ ಹದಗೆಟ್ಟಿದೆ. ಪೋಷಕರು ತಮ್ಮ ಮಕ್ಕಳ ಪ್ರವೇಶ ಶುಲ್ಕ ಕಟ್ಟಲೂ ಪರದಾಡುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳು ಸಹ ಪ್ರವೇಶ ಶುಲ್ಕ ಹೆಚ್ಚಿಸಿವೆ. ಒಂದೇ ಕಂತಿನಲ್ಲಿ ಎಲ್ಲ ಶುಲ್ಕ ಪಾವತಿಸಲು ಒತ್ತಾಯಿಸುವ ಮೂಲಕ ಪೋಷಕರಿಗೆ ಗಾಯದ ಮೇಲೆ ಬರೆ ಎಳೆದಿವೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಸರ್ಕಾರ ಮಾರ್ಗಸೂಚಿ ಹೊರಡಿಸಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸಲು ವಿದ್ಯಾರ್ಥಿವೇತನದ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ವಿದ್ಯಾರ್ಥಿವೇತನ ಅವ್ಯವಸ್ಥೆಯಿಂದ ಹಲವು ವಿದ್ಯಾರ್ಥಿಗಳು ಆಂತಕಕ್ಕೊಳಗಾಗಿದ್ದಾರೆ.
ಪ್ರತಿ ಬಾರಿ ಸರ್ಕಾರ ಅಲ್ಪಸಂಖ್ಯಾತ ಇಲಾಖೆಯ ಸ್ಕಾಲರ್‌ಶಿಪ್ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.

ADVERTISEMENT

ಅಲ್ಪ ಸಂಖ್ಯಾತರ ಇಲಾಖೆ ಮೂರು ವರ್ಷಗಳಿಂದ ಅರ್ಜಿ ಹಾಕಿರುವ ವಿದ್ಯಾರ್ಥಿಗಳ ಅರ್ಜಿಗಳನ್ನು ವಿಲೇವಾರಿ ಮಾಡದೇ ಬಾಕಿ ಇಟ್ಟುಕೊಂಡಿದೆ. ಸ್ಕಾಲರ್‌ಶಿಪ್ ಮಂಜೂರಾದವರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಲ್ಲ. ಅರ್ಜಿ ಹಾಕುವಾಗ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿಲ್ಲ. ಇದರಿಂದ ಪ್ರತಿ ವರ್ಷ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ ಎಂದು ದೂರಿದರು.

ಅಲ್ಪಸಂಖ್ಯಾತ ಇಲಾಖೆ ಪಿಎಚ್‌.ಡಿ ಮತ್ತು ಎಂ.ಫಿಲ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾಸಿಕ ₹ 25 ಸಾವಿರ ಪ್ರೋತ್ಸಾಹ ಧನ ಹಾಗೂ ₹ 10 ಸಾವಿರ ನಿರ್ವಹಣಾ ವೆಚ್ಚ ನೀಡುತ್ತಿತ್ತು. ಆದರೆ, ಸರ್ಕಾರ ಪ್ರೋತ್ಸಾಹಧನವನ್ನು ₹ 10 ಸಾವಿರಕ್ಕೆ ಇಳಿಸಿದೆ. ವಾರ್ಷಿಕ ನಿರ್ವಹಣಾ ವೆಚ್ಚ ರದ್ದು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಶ್ರಫ್ ದಾವಣಗೆರೆ, ಮುಜಾವಿದ್ ಪಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.