ADVERTISEMENT

‘ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ’

ಸಮುದಾಯ ಭವನ ಭೂಮಿಪೂಜೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 4:30 IST
Last Updated 5 ಜುಲೈ 2021, 4:30 IST
ಶಿಕಾರಿಪುರ ಸಮೀಪದ ಕಾನುಹಕ್ಕಲು ಪ್ರದೇಶದಲ್ಲಿ ಭಾನುವಾರ ಗಿಡ್ಡೇಶ್ವರ ದೇವರ ಸಮುದಾಯ ಭವನ ನಿರ್ಮಾಣ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು
ಶಿಕಾರಿಪುರ ಸಮೀಪದ ಕಾನುಹಕ್ಕಲು ಪ್ರದೇಶದಲ್ಲಿ ಭಾನುವಾರ ಗಿಡ್ಡೇಶ್ವರ ದೇವರ ಸಮುದಾಯ ಭವನ ನಿರ್ಮಾಣ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು   

ಶಿಕಾರಿಪುರ: ‘ಶಿವಮೊಗ್ಗ ಜಿಲ್ಲೆ ಹಾಗೂ ಶಿಕಾರಿಪುರ ತಾಲ್ಲೂಕಿನಲ್ಲಿ ಸಮಗ್ರ ನೀರಾವರಿ ಯೋಜನೆ ಅನುಷ್ಠಾನ ಹಾಗೂ ವಿವಿಧ ಅಭಿವೃದ್ಧಿಗೆ ಕಾರ್ಯಗಳಿಗೆ ಆದ್ಯತೆ ನೀಡಿದ್ದೇನೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣ ಸಮೀಪದ ಕಾನುಹಕ್ಕಲು ಪ್ರದೇಶದಲ್ಲಿ ಭಾನುವಾರ ಗಿಡ್ಡೇಶ್ವರ ದೇವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸೇತುವೆಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತರುತ್ತಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಸಹಕಾರದಿಂದ ತಾಲ್ಲೂಕಿನ ಜನರ ಹಾಗೂ ರೈತರ ಅನುಕೂಲಕ್ಕಾಗಿ ತುಂಗಭದ್ರಾ ನದಿಯಿಂದಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನೀರು ತಂದು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದೆ. ಕೊನೆಯ ಹಂತದಲ್ಲಿರುವ ಕಾಮಗಾರಿ
ಯನ್ನು ವೀಕ್ಷಿಸಲು ಪಕ್ಷ ಭೇದ ಮರೆತು ಸ್ಥಳಕ್ಕೆ ಭೇಟಿ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಸಮುದಾಯ ಭವನ ನಿರ್ಮಾಣ
ವಾಗುತ್ತಿರುವ 6 ಎಕರೆ ಭೂಮಿಯನ್ನು ಗಿಡ್ಡೇಶ್ವರ ದೇವಸ್ಥಾನ ಹೆಸರಿಗೆ ಮಾಡಿಸಲು ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ. ಯಡಿಯೂರಪ್ಪ ಎಲ್ಲಾ ವರ್ಗದ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ.
ಕನಕ ಜಯಂತಿ ಆಚರಣೆ, ಕುರುಬ ಸಮಾಜದ ನಾಲ್ಕು ಶಾಖಾ ಮಠಗಳ ಅಭಿವೃದ್ಧಿಗೆ ತಲಾ ₹ 1 ಕೋಟಿ ಅನುದಾನ ನೀಡಿದ್ದಾರೆ. ಈ ಪ್ರದೇಶದಲ್ಲಿರುವ ಸಂಚಾರಿ ಕುರಿಗಾರರ ಮಕ್ಕಳಿಗಾಗಿ ಶಾಲೆ ನಿರ್ಮಾಣಕ್ಕಾಗಿ ₹ 1 ಕೋಟಿ ಅನುದಾನ ನೀಡಿದ್ದಾರೆ’ ಎಂದರು.

ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ರೈಲ್ವೆ ಮಾರ್ಗ ನಿರ್ಮಾಣ ಯೋಜನೆ ಕಾಮಗಾರಿಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ರೈಲ್ವೆ ಮಾರ್ಗನಿರ್ಮಾಣದಿಂದ ತಾಲ್ಲೂಕು ಅಭಿವೃದ್ಧಿಯಾಗಲಿದೆ. ತಾಲ್ಲೂಕಿನ ಅಕ್ಕಮಹಾದೇವಿ ಜನ್ಮಸ್ಥಳ ಪ್ರವಾಸಿ ಕ್ಷೇತ್ರವಾಗಲಿದೆ. ಜೋಗ ಜಲಪಾತವನ್ನು ವರ್ಷಪೂರ್ತಿ ವೀಕ್ಷಿಸಲು ಯೋಜನೆ ಸಿದ್ಧವಾಗುತ್ತಿದೆ ಎಂದರು.

ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ‘ಕುರುಬ ಸಮಾಜದಲ್ಲಿ ಬಹುತೇಕ ಜನರು ಗಿಡ್ಡೇಶ್ವರ ದೇವರ ಆರಾಧಕರಾಗಿದ್ದಾರೆ. ಉತ್ತಮ ರೀತಿಯಲ್ಲಿ ಸಮುದಾಯ ಭವನ ನಿರ್ಮಾಣವಾಗಬೇಕು. ಸಮುದಾಯ ಭವನ ನಿರ್ಮಾಣವಾಗುತ್ತಿರುವ ಭೂಮಿ ಹಸಿರು ವಲಯದಲ್ಲಿದ್ದು, ಪಟ್ಟಣ ಬೆಳೆಯುತ್ತಿರುವುದರಿಂದ ಹಸಿರು ವಲಯ ಬದಲಾವಣೆ ಮಾಡಬೇಕು’ ಎಂದು ಮನವಿ ಮಾಡಿದರು.

ಗಿಡ್ಡೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸಂಕ್ರಿ ಸೋಮಪ್ಪ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿರ್ದೇಶಕ ಭದ್ರಾಪುರ ಹಾಲಪ್ಪ, ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ನಿರ್ದೇಶಕ ಜೆ.ಸುಕೇಂದ್ರಪ್ಪ, ತಾಲ್ಲೂಕು ಕುರುಬ ಸಮಾಜ ಅಧ್ಯಕ್ಷ ಕಬಾಡಿ ರಾಜಪ್ಪ, ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಟಿ.ಎಸ್.ಮೋಹನ್, ಗೋಣಿ ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.