ADVERTISEMENT

ರಾಜ್ಯದ ಸಮಗ್ರ ಅಭಿವೃದ್ಧಿಗೆ ಆದ್ಯತೆ

ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಆರ್. ಶಂಕರ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 7:05 IST
Last Updated 15 ಫೆಬ್ರುವರಿ 2021, 7:05 IST
ಹೊಳೆಹೊನ್ನೂರು ಪಟ್ಟಣದ ಕರಿಯಮ್ಮ ದೇವಿ ದೇವಸ್ಥಾನ ಸಮಿತಿಯಿಂದ ಹಮ್ಮಿಕೊಂಡಿದ್ದ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಆರ್. ಶಂಕರ್ ಮಾತನಾಡಿದರು. ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕೆ.ಬಿ. ಅಶೋಕ ನಾಯ್ಕ ಇದ್ದರು.
ಹೊಳೆಹೊನ್ನೂರು ಪಟ್ಟಣದ ಕರಿಯಮ್ಮ ದೇವಿ ದೇವಸ್ಥಾನ ಸಮಿತಿಯಿಂದ ಹಮ್ಮಿಕೊಂಡಿದ್ದ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಆರ್. ಶಂಕರ್ ಮಾತನಾಡಿದರು. ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕೆ.ಬಿ. ಅಶೋಕ ನಾಯ್ಕ ಇದ್ದರು.   

ಹೊಳೆಹೊನ್ನೂರು: ‘ನಾಡಿನ ಹಿತಕ್ಕಾಗಿ, ರೈತ ಪರ ಕಾಳಜಿ ಇರುವ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ಕೈ ಬಲ ಪಡಿಸುವ ಸಲುವಾಗಿ ಸಮ್ಮಿಶ್ರ ಸರ್ಕಾರ ತೊರೆದು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದೇನೆ. ಮುಖ್ಯಮಂತ್ರಿ ನೇತೃತ್ವದಲ್ಲಿ ನಾಡಿನ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸುತ್ತೇನೆ’ ಎಂದು ತೋಟಗಾರಿಕಾ ಸಚಿವ ಆರ್. ಶಂಕರ್ ಹೇಳಿದರು.

ಪಟ್ಟಣದ ಕರಿಯಮ್ಮ ದೇವಿ ದೇವಸ್ಥಾನ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ನೂತನ ಕರಿಯಮ್ಮ ದೇವಿ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಶಿವಮೊಗ್ಗ ಜಿಲ್ಲೆ ಮುಖ್ಯಮಂತ್ರಿ ತವರೂರಾಗಿದ್ದು, ಅಭಿವೃದ್ಧಿ ವಿಚಾರದಲ್ಲಿ ಹೆಚ್ಚಿನ ನಿರೀಕ್ಷೆಗಳಿವೆ. ಸಂಸದ ರಾಘವೇಂದ್ರ ಕೂಡ ಅವರೊಂದಿಗೆ ಕೈಜೋಡಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೊಡುಗೆ ನೀಡುತ್ತಿದ್ದಾರೆ. ರಾಘವೇಂದ್ರ ಅವರು ಮುಂದೆ ಕೇಂದ್ರ ಸಚಿವರಾಗಲಿ ಎಂದು ಹೇಳಿದರು.

ADVERTISEMENT

ದೇವಾಲಯಗಳಿಂದಾಗಿ ಮನುಷ್ಯ ಆರೋಗ್ಯ, ಶಾಂತಿ ಹೆಚ್ಚುತ್ತದೆ.ಹಿಂದೂ ಧರ್ಮದಲ್ಲಿ ದೇವಾಲಯಗಳಿಗೆ ಹೆಚ್ಚಿನ ಆದ್ಯತೆ ಇದೆ. ಕೋವಿಡ್‌ನಿಂದ ದೇವಾಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲು ಆಗಿಲ್ಲ. ಮುಂದಿನ ದಿನಗಳಲ್ಲಿ ದೇವಾಲಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

ಸಂಸದ ಬಿ.ವೈ. ರಾಘವೇಂದ್ರ, ‘ಹಾಲುಮತ ಸಮಾಜ ಹಾಲಿನಷ್ಟೇ ಶುದ್ಧವಾಗಿದ್ದು, ನಾಡು ಕಂಡ ಅಪ್ರತಿಮ ವೀರ ಸಂಗೊಳ್ಳಿ ರಾಯಣ್ಣ, ಕನಕದಾಸರು ಜನಿಸಿದ ಸಮಾಜ ಇತರ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ರಾಜ್ಯಕ್ಕೆ ತನ್ನದೇ ಆದ ಕೊಡುಗೆ’ ನೀಡಿದೆ ಎಂದರು.

ಕನಕದಾಸರು ಹುಟ್ಟಿದ ಬಾಡಾ ಹಾಗೂ ಕಾಗಿನೆಲೆ ಕ್ಷೇತ್ರವನ್ನು ₹ 45 ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅವರ ಜನ್ಮದಿನಾಚರಣೆಯ ಅಂಗವಾಗಿ ಪ್ರತಿ ವರ್ಷ ಸರ್ಕಾರಿ ರಜೆಯನ್ನು ಘೋಷಿಸಿದ್ದು, ಅದರ ಶ್ರೇಯ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಇದುವರೆಗೂ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕನಾಯ್ಕ, ಮುಖಂಡರಾದ ಜ್ಯೋತಿ ಪ್ರಕಾಶ್, ಗಿರೀಶ್ ಪಟೇಲ್, ವಸಂತ ಕುಮಾರ್, ಎಪಿಎಂಸಿ ಸದಸ್ಯ ಶ್ರೀನಿವಾಸ್, ಮಂಡಲ ಅಧ್ಯಕ್ಷ ಕಲ್ಲಜ್ಜನಾಳ್ ಮಂಜುನಾಥ, ಉಪಾಧ್ಯಕ್ಷ ಸುಬ್ರಮಣಿ, ಭೂ ನ್ಯಾಯ ಮಂಡಳಿ ಸದಸ್ಯರಾದ ಕಿರಣ್ ಕುಮಾರ್, ಚಂದ್ರು, ರವಿಕುಮಾರ್, ಚೌಡಪ್ಪ, ಸಿದ್ದಪ್ಪ, ಶಾಂತಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.