ADVERTISEMENT

ಸಾಗರ ನಗರಸಭೆ ಆವರಣದಲ್ಲಿ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 4:14 IST
Last Updated 1 ಡಿಸೆಂಬರ್ 2022, 4:14 IST
ಸಾಗರದ ಚಾಮರಾಜ ಪೇಟೆ ಬಡಾವಣೆಯ ಕೆನರಾ ಬ್ಯಾಂಕ್ ಶಾಖೆ ಎದುರು ಇದ್ದ ಬೀದಿ ಬದಿಯ ಹಣ್ಣಿನ ಅಂಗಡಿಯನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿರುವುದನ್ನು ಖಂಡಿಸಿ ಬುಧವಾರ ಕಾಂಗ್ರೆಸ್ ಪಕ್ಷದ ಪ್ರಮುಖರು ನಗರಸಭೆ ಕಚೇರಿ ಎದುರು ಪ್ರತಿಭಟಿಸಿದರು.
ಸಾಗರದ ಚಾಮರಾಜ ಪೇಟೆ ಬಡಾವಣೆಯ ಕೆನರಾ ಬ್ಯಾಂಕ್ ಶಾಖೆ ಎದುರು ಇದ್ದ ಬೀದಿ ಬದಿಯ ಹಣ್ಣಿನ ಅಂಗಡಿಯನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿರುವುದನ್ನು ಖಂಡಿಸಿ ಬುಧವಾರ ಕಾಂಗ್ರೆಸ್ ಪಕ್ಷದ ಪ್ರಮುಖರು ನಗರಸಭೆ ಕಚೇರಿ ಎದುರು ಪ್ರತಿಭಟಿಸಿದರು.   

ಸಾಗರ: ನಗರದ ಚಾಮರಾಜ ಪೇಟೆ ಬಡಾವಣೆಯ ಕೆನರಾ ಬ್ಯಾಂಕ್ ಶಾಖೆ ಎದುರು ಇದ್ದ ಬೀದಿ ಬದಿಯ ಹಣ್ಣಿನ ಅಂಗಡಿಯನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿರುವುದನ್ನು ಖಂಡಿಸಿ ಬುಧವಾರ ಕಾಂಗ್ರೆಸ್ ಪಕ್ಷದ ಪ್ರಮುಖರು ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೆನರಾ ಬ್ಯಾಂಕ್ ಎದುರು ಶಾಬಾಜ್ ಎಂಬುವವರು ರಸ್ತೆ ಬದಿ ಹಣ್ಣಿನ ಅಂಗಡಿ ಇಟ್ಟುಕೊಂಡಿದ್ದು, ನಗರಸಭೆ ಅಧಿಕಾರಿಗಳು ಬುಧವಾರ ಬೆಳಗಿನಜಾವ ಪೌರಕಾರ್ಮಿಕರ ನೆರವಿನಿಂದ ಏಕಾಏಕಿ ಅಂಗಡಿಯನ್ನು ತೆರವುಗೊಳಿಸಿದ್ದಾರೆ. ‘ಈ ವೇಳೆ ಅಂಗಡಿಯ ಹಣ್ಣುಗಳನ್ನು ರಸ್ತೆಯ ಮೇಲೆ ಚೆಲ್ಲುವ ಮೂಲಕ ದೌರ್ಜನ್ಯ ಎಸೆಗಲಾಗಿದೆ. ಅಂಗಡಿಯಲ್ಲಿದ್ದ ₹ 74,000ದಲ್ಲಿ ಕೆಲವೇ ಮೊತ್ತದ ಹಣವನ್ನು ಅಂಗಡಿ ಮಾಲೀಕರಿಗೆ ಮರಳಿಸಲಾಗಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಕೇಂದ್ರ ಸರ್ಕಾರವೇ ಕಾನೂನು ರೂಪಿಸಿದೆ. ದೀರ್ಘಕಾಲದಿಂದ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುತ್ತಿರುವವರಿಗೆ ವ್ಯಾಪಾರ ನಡೆಸಲು ಸ್ಥಳೀಯ ಆಡಳಿತ ಸೂಕ್ತ ಸ್ಥಳಾವಕಾಶ ಕಲ್ಪಿಸಿ ನಂತರ ಅವರನ್ನು ಈಗ ವ್ಯಾಪಾರ ನಡೆಸುತ್ತಿರುವ ಜಾಗದಿಂದ ತೆರವುಗೊಳಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

‘ನಗರಸಭೆ ಆಡಳಿತ ಜನವಿರೋಧಿ ನೀತಿ ತೋರುತ್ತಿದೆ. ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ನಗರಸಭೆ ಅಧಿಕಾರಿಗಳು ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡರಾದ ಬಿ.ಆರ್.ಜಯಂತ್, ತೀ.ನ.ಶ್ರೀನಿವಾಸ್, ಡಾ.ರಾಜನಂದಿನಿ ಕಾಗೋಡು, ತಶ್ರೀಫ್ ಇಬ್ರಾಹಿಂ, ಎನ್.ಲಲಿತಮ್ಮ, ಮಧು ಮಾಲತಿ ಆಕ್ರೋಶ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಪೌರಾಯುಕ್ತ ಎಚ್.ಕೆ.ನಾಗಪ್ಪ ಅವರು ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಹಾಗೂ ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ‘ನಗರಸಭೆ ಸದಸ್ಯ ತಶ್ರೀಫ್ ಅವರು ನನ್ನನ್ನು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ’ ಎಂದು ನಾಗಪ್ಪ ಅವರು ದೂರಿದರು. ಈ ಸಂಬಂಧ ಪೌರ ಸೇವಾ ನೌಕರರ ಸಂಘದಿಂದ ಪೊಲೀಸರಿಗೆ ದೂರು ನೀಡಲಾಗಿದೆ.

ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ‘ನಗರಸಭೆ ಆಡಳಿತದಿಂದ ಏನಾದರೂ ತೊಂದರೆಯಾದರೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಆದರೆ, ಬೀದಿ ಬದಿ ವ್ಯಾಪಾರಸ್ಥರ ವಿಷಯವನ್ನು ಕಾಂಗ್ರೆಸ್ ಮುಖಂಡರು ರಾಜಕೀಕರಣಗೊಳಿಸಿದ್ದಾರೆ. ಅಲ್ಲದೆ ಪೌರಾಯುಕ್ತರ ಮೇಲೆ ಹಲ್ಲೆಗೆ ಮುಂದಾಗಿ ಅವರ ಕರ್ತವ್ಯಕ್ಕೆ
ಅಡ್ಡಿಪಡಿಸಿರುವುದು ಖಂಡಿನೀಯ’ ಎಂದರು.

ಪೌರಾಯುಕ್ತ ಎಚ್.ಕೆ.ನಾಗಪ್ಪ, ‘ನಗರಸಭೆ ಸಿಬ್ಬಂದಿ ಹಣ್ಣಿನ ಅಂಗಡಿ ತೆರವುಗೊಳಿಸುವಾಗ ಹಣ್ಣುಗಳನ್ನು ರಸ್ತೆಗೆ ಚೆಲ್ಲಿಲ್ಲ. ಅಂಗಡಿಯವರೆ ಆ ರೀತಿ ಮಾಡಿ ಸಿಬ್ಬಂದಿ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಮೊದಲು ಒಂದು ಅಂಗಡಿ ಮಾಡಿ ನಂತರ ಅದೇ ಸ್ಥಳದಲ್ಲಿ ಅದನ್ನು ನಾಲ್ಕು ಅಂಗಡಿಗೆ ವಿಸ್ತರಿಸಿ ಜನರ, ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದರಿಂದ ಹಣ್ಣಿನ ಅಂಗಡಿಯನ್ನು ತೆರವುಗೊಳಿಸುವುದು ಅನಿವಾರ್ಯವಾಯಿತು’ ಎಂದು ಅವರು
ಸ್ಪಷ್ಟಪಡಿಸಿದರು.

ನಂತರದ ಬೆಳವಣಿಗೆಯಲ್ಲಿ ಎಚ್.ಕೆ.ನಾಗಪ್ಪ ಅವರ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಪೌರಸೇವಾ ನೌಕರರ ಸಂಘದ ಪ್ರಮುಖರು ನಗರ ಪೊಲೀಸ್ ಠಾಣೆ ಪ್ರತಿಭಟನೆ ನಡೆಸಿದ್ದಾರೆ.

***

ಪೌರಾಯುಕ್ತರ ಮೇಲೆ ಹಲ್ಲೆಗೆ ಯತ್ನ: ಕ್ರಮಕ್ಕೆ ಒತ್ತಾಯ

ಸಾಗರ: ‘ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ ಅವರ ಮೇಲೆ ಹಲ್ಲೆಗೆ ಯತ್ನ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಈಡಿಗ ಸಮಾಜದ ಮುಖಂಡರು ನಗರ ಪೊಲೀಸ್
ಠಾಣೆ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.

‘ಬೀದಿ ಬದಿ ಹಣ್ಣಿನ ಅಂಗಡಿ ತೆರವುಗೊಳಿಸುವ ಸಂಬಂಧ ನಾಗಪ್ಪ ಅವರು ಅಧಿಕಾರಿಯಾಗಿ ಕಾನೂನಿನ ಚೌಕಟ್ಟಿನಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಆದರೆ, ಅದರ ವಿರುದ್ಧ ಪ್ರತಿಭಟನೆ ನೆಪದಲ್ಲಿ ನಗರಸಭೆ ಕಚೇರಿಗೆ ಬಂದು ನಗರಸಭೆ ಸದಸ್ಯ ತಶ್ರೀಫ್ ಇಬ್ರಾಹಿಂ, ಮಾಜಿ ಸದಸ್ಯ ಪ್ರಾನ್ಸೀಸ್ ಗೋಮ್ಸ್, ರಷೀದ್, ಶಾಬಾಜ್, ವಸೀಂ ಮೊದಲಾದವರು ನಾಗಪ್ಪ ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ’ ಎಂದು ಪ್ರತಿಭಟನಕಾರರು ದೂರಿದರು.

ಇದಕ್ಕೂ ಮುನ್ನ ಸಾಗರ ಹೋಟೆಲ್ ವೃತ್ತದಿಂದ ನಗರಸಭೆ ಕಚೇರಿವರೆಗೆ ಪ್ರತಿಭಟನಕಾರರು ಮೆರವಣಿಗೆ ನಡೆಸಿದರು. ಪ್ರಮುಖರಾದ ಕಲಸೆ ಚಂದ್ರಪ್ಪ, ದೇವೇಂದ್ರಪ್ಪ ಯಲಕುಂದ್ಲಿ, ಅರುಣ್ ಕುಗ್ವೆ, ಮೂಡಳ್ಳಿ ಹರೀಶ್, ಸುಧಾಕರ ಕುಗ್ವೆ, ಕೆರಿಯಪ್ಪ, ಪರಶು ರಾಮ್, ವೀರೇಶ್, ಧನರಾಜ್ ಇದ್ದರು.

***

ಪ್ರತಿಭಟನೆ ವೇಳೆ ಕುಸಿದು ಬಿದ್ದು ಸಾವು

ಈ ಪ್ರತಿಭಟನಾ ಸಭೆಯಲ್ಲಿ ನಾಗಪ್ಪ ಅವರ ಸಹೋದರ ಗಣಪತಿ (44) ಅವರೂ
ಭಾಗವಹಿಸಿದ್ದರು. ಸಭೆ
ನಡೆಯುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದರು.

ತಕ್ಷಣ ಅವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರಿಗೆ ಪುತ್ರ, ಪುತ್ರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.