ADVERTISEMENT

ಮಳೆ ಹಾನಿ: ಸಂತ್ರಸ್ತರಿಗೆ ಪರಿಹಾರ ನೀಡಿ- ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು

​ಪ್ರಜಾವಾಣಿ ವಾರ್ತೆ
Published 1 ಮೇ 2022, 6:15 IST
Last Updated 1 ಮೇ 2022, 6:15 IST
ಬೇಳೂರು ಗೋಪಾಲಕೃಷ್ಣ
ಬೇಳೂರು ಗೋಪಾಲಕೃಷ್ಣ   

ಸಾಗರ: ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಕಾಲಿಕ ಗಾಳಿ–ಮಳೆಯಿಂದ ನಷ್ಟ ಅನುಭವಿಸಿದವರಿಗೆ ಕಂದಾಯ ಇಲಾಖೆ ಕೂಡಲೇ ಪರಿಹಾರ ವಿತರಿಸಬೇಕು ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗಾಳಿ ಮಳೆಯ ಕಾರಣ ವಿವಿಧೆಡೆ ಮನೆ, ಕೊಟ್ಟಿಗೆಗೆ ಹಾನಿ ಸಂಭವಿಸಿದೆ. ಮನೆಗಳ ಹೆಂಚು, ಶೀಟ್‌ಗಳು ಹಾರಿ ಹೋಗಿವೆ. ನಷ್ಟದ ಕುರಿತು ಅಧಿಕಾರಿಗಳು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಆದರೆ, ಶಾಸಕ ಹಾಲಪ್ಪ ಅವರು ಮೌನ ವಹಿಸಿದ್ದಾರೆ’ ಎಂದು ಟೀಕಿಸಿದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ವ್ಯವಸ್ಥೆ ಇಲ್ಲದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿನ ಜನರ ಸಂಕಷ್ಟವನ್ನು ಕೇಳುವವರಿಲ್ಲದಂತಾಗಿದೆ. ಗ್ರಾಮ ಪಂಚಾಯಿತಿಗಳು ಅನುದಾನದ ಕೊರತೆಯಿಂದ ಬಳಲುತ್ತಿವೆ. ಶಾಸಕ ಹಾಲಪ್ಪ ಅವರಿಗೆ ಅಭಿವೃದ್ಧಿ ಎಂದರೆ ಗಣಪತಿ ಕೆರೆ ಮಾತ್ರ ಕಾಣುತ್ತಿದೆ. ಕೆರೆಯ ದಂಡೆಯ ಮೇಲೆ ಅವರು ಆಸ್ತಿ ಖರೀದಿಸಿರುವುದರಿಂದ ಕೆರೆ ಎನ್ನುತ್ತಾರೆ ಎಂದು ಆರೋಪಿಸಿದರು.

ADVERTISEMENT

ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಆಶ್ರಯ ಮನೆಗಳನ್ನು ವಿತರಿಸಲಾಗಿದೆ. ಶಾಸಕರು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವಲ್ಲಿ ತೋರುತ್ತಿರುವ ಆಸಕ್ತಿಯನ್ನು ಬಡವರಿಗೆ ಮನೆಗಳನ್ನು ಹಂಚುವ ವಿಷಯದಲ್ಲಿ ತೋರಿಸುತ್ತಿಲ್ಲ ಎಂದು ದೂರಿದರು.

‘ನಾನು ಶಾಸಕರ ಪಿಂಚಣಿ ಹಣದಲ್ಲಿ ಬದುಕುತ್ತಿದ್ದೇನೆ ಎಂದು ಹಾಲಪ್ಪ ಅವರು ಹೇಳಿದ್ದಾರೆ. ಅವರ ಈ ಮಾತು ನಿಜವಾಗಿದೆ. ನಾನು ಪಿಂಚಣಿ ಹಣದಲ್ಲಿ ಬದುಕುತ್ತಿದ್ದೇನೆ ಹೊರತು ಹಾಲಪ್ಪ ಅವರ ರೀತಿ ಭ್ರಷ್ಟಾಚಾರದ ಹಣದಿಂದ ಬದುಕುತ್ತಿಲ್ಲ. ಪಿಂಚಣಿ ಹಣದಲ್ಲಿ ಬದುಕುತ್ತಿರುವ ಬಗ್ಗೆ ನನಗೆ ತೃಪ್ತಿ ಇದೆ’ ಎಂದರು.

‘ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸದಸ್ಯರ ಸಭೆಯ ಹಲ್ಲೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎನ್ನುವ ಹಾಲಪ್ಪ, ಹಲ್ಲೆ ನಡೆಸಿರುವ ಗೂಂಡಾಗಳನ್ನೇ ತಮ್ಮ ವಾಹನದಲ್ಲಿ ಪ್ರತಿದಿನವೂ ಕೂರಿಸಿ‌ಕೊಂಡು ತಿರುಗುತ್ತಿರುವುದಕ್ಕೆ ಅವರುಏನು ಹೇಳುತ್ತಾರೆ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪ್ರಮುಖರಾದ ಐ.ಎನ್. ಸುರೇಶ್ ಬಾಬು, ಅಶೋಕ್ ಬೇಳೂರು, ಸೋಮಶೇಖರ ಲ್ಯಾವಿಗೆರೆ, ತಾರಾಮೂರ್ತಿ, ಗಣಪತಿ ಮಂಡಗಳಲೆ, ಅನ್ವರ್ ಭಾಷಾ, ಡಿ.ದಿನೇಶ್, ಗಣಾಧೀಶ್, ಸಂತೋಷ್ ಸದ್ಗುರು, ಯಶವಂತ ಫಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.