ADVERTISEMENT

ಮಾಯದಂತ ಮಳೆ; ತತ್ತರಿಸಿದ ಸಿಹಿಮೊಗ್ಗೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 2:20 IST
Last Updated 5 ಆಗಸ್ಟ್ 2022, 2:20 IST
ಶಿವಮೊಗ್ಗ ಹೊರವಲಯದ ಬೈಪಾಸ್ ರಸ್ತೆಯ ನಿಸರ್ಗ ಲೇಔಟ್‌ ಮಳೆ ನೀರಿನಲ್ಲಿ ಅಕ್ಷರಶಃ ಮುಳುಗಿತ್ತು
ಶಿವಮೊಗ್ಗ ಹೊರವಲಯದ ಬೈಪಾಸ್ ರಸ್ತೆಯ ನಿಸರ್ಗ ಲೇಔಟ್‌ ಮಳೆ ನೀರಿನಲ್ಲಿ ಅಕ್ಷರಶಃ ಮುಳುಗಿತ್ತು   

ಶಿವಮೊಗ್ಗ: ಮಾಯದಂತಹ ಮಳೆಗೆ ಶಿವಮೊಗ್ಗ ನಗರ ಗುರುವಾರ ಸಂಜೆ ಬೆಚ್ಚಿಬಿದ್ದಿತು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಶಿವಮೊಗ್ಗ–ಭದ್ರಾವತಿ ರಸ್ತೆ ಆಸುಪಾಸಿನ ವಸತಿ ಬಡಾವಣೆಗಳನ್ನು ಮುಕ್ಕಾಲು ಪಾಲು ಮುಳುಗಿಸಿತ್ತು.

ಮಳೆಯ ರೌದ್ರವತೆಗೆ ಜನರು ತತ್ತರಿಸಿದರು. ಕಣ್ಣುಹಾಯಿಸಿದಷ್ಟೂ ದೂರ ಕಾಣ್ಣುತ್ತಿದ್ದ ನೀರಿನ ಹರಿವು ನದಿಯ ಸಮೃದ್ಧಿಯನ್ನು ನೆನಪಿಸಿತು. ಸ್ಥಳೀಯರಲ್ಲಿ ತುಂಗೆ ಪಥ ಬದಲಿಸಿದಳೇ ಎಂಬ ಆತಂಕವನ್ನು ಸೃಷ್ಟಿಸಿತ್ತು.

ರಸ್ತೆಗಳಲ್ಲಿ ಮೊಣಕಾಲುವರೆಗೂ ನೀರು ನಿಂತು ವಾಹನ ಸವಾರರು ಮುಂದೆ ಸಾಗಲು ಸಾಧ್ಯವಾಗದೇ ಪರದಾಡುವಂತಾಯಿತು. ಮಳೆ ನೀರು ಒಡಲು ಸೇರಿದ್ದರಿಂದ ನಗರವನ್ನು ಬಳಸಿಕೊಂಡು ಸಾಗಿರುವ ಚಾನೆಲ್ ತುಂಬಿ ಹೊರಗೆ ನೀರು ಹರಿಯಿತು. ಸಂಜೆ ಶಾಲೆಗಳು ಬಿಟ್ಟಿದ್ದು, ಮಕ್ಕಳನ್ನು ಕರೆತರಲು ಹೋದವರು, ಕಚೇರಿಯಿಂದ ಮನೆಗೆ ಹೊರಟವರು ಮಳೆಯಲ್ಲಿ ಸಿಲುಕಿಕೊಂಡರು. ವಾಹನ ಸಂಚಾರವೂ ಅಸ್ತವ್ಯಸ್ತಗೊಂಡಿತು.

ADVERTISEMENT

ಶಿವಮೊಗ್ಗದ ಬೈಪಾಸ್ ರಸ್ತೆಯ ಕಿಯಾ ಷೋ ರೂಮ್ ಮುಂಭಾಗ ಅರ್ಧ ಭಾಗಕ್ಕಿಂತ ಜಾಸ್ತಿ ಮುಳುಗಡೆ ಆಗಿದೆ. ಚಾನೆಲ್‌ನಿಂದ ನೀರು ಸತತವಾಗಿ ಹರಿದು ಮನೆಗಳಿಗೂ ನೀರು ನುಗ್ಗಿದೆ. 25ಕ್ಕೂ ಹೆಚ್ಚು ಮನೆಗಳಲ್ಲಿ ನೀರು ಹೊಕ್ಕಿತ್ತು. ಎನ್.ಟಿ.ರಸ್ತೆ, ಆರ್‌ಎಂಎಲ್ ನಗರದಲ್ಲಿನ ಕೆಲ ಅಂಗಡಿಗಳಿಗೂ ನೀರು ನುಗ್ಗಿದೆ.

ರಸ್ತೆಯ ಎರಡೂ ಬದಿಯಲ್ಲಿ ದಿಢೀರ್ ಹಳ್ಳಗಳು ಸೃಷ್ಟಿಯಾಗಿದ್ದವು. ಮನೆಗಳಿಗೆ ನೀರು ನುಗ್ಗಿದ್ದು, ಮಳೆಯ ಆಟಾಟೋಪಕ್ಕೆ ನಗರದ ಹೊರವಲಯದ ವಸತಿ ಪ್ರದೇಶಗಳು ದ್ವೀಪಗಳಾಗಿ ಬದಲಾಗಿದ್ದವು. ನಿವಾಸಿಗಳು ಮನೆ ಬಾಗಿಲು ಭದ್ರಪಡಿಸಿಕೊಂಡು ನೀರು ಒಳಗೆ ದಾಂಗುಡಿ ಇಡದಂತೆ ನೋಡಿಕೊಳ್ಳಲು ಹರಸಾಹಸಪಟ್ಟರು. ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳ ಮೇಲಿನ ಶೀಟ್ ಮಾತ್ರ ಕಾಣುತ್ತಿತ್ತು. ವಡ್ಡಿನಕೊಪ್ಪದಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ರಾಮಪ್ಪ ಲೇಔಟ್ ಜಲದಿಗ್ಬಂಧನಕ್ಕೆ ಒಳಗಾಗಿತ್ತು.

ವರುಣನ ಆರ್ಭಟ; ಸಂಚಾರ ಅಸ್ತವ್ಯಸ್ತ

ಭದ್ರಾವತಿ: ಗುರುವಾರ ನಗರದಲ್ಲಿ ಬೆಳಗಿನಿಂದ ಬಿಸಿಲು, ಮೋಡ ಕವಿದ ವಾತಾವರಣ ಇದ್ದು, ಸಂಜೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು.

ಸುಮಾರು ಎರಡು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಬಿಎಚ್ ರಸ್ತೆಯ ಬಿಳಿಕಿ ವೃತ್ತ ಸಂಪೂರ್ಣ ಜಲಾವೃತವಾಗಿತ್ತು. ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಖಾಸಗಿ ಶಾಲಾ ಬಸ್, ಟ್ಯಾಕ್ಸಿಗಳು ನೀರಿನ ಹರಿಯುವಿಕೆಯಿಂದ ರಸ್ತೆ ದಾಟಲು ಸಾಧ್ಯವಾಗದೆ ರಸ್ತೆಯಲ್ಲೇ ನಿಂತಿದ್ದವು. ಇದರಿಂದ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಜನರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗಿತ್ತು.

ದ್ವಿಚಕ್ರ ವಾಹನ ಚಾಲಕರು ನೀರಿನ ರಭಸದ ನಡುವೆಯೂ
ರಸ್ತೆ ದಾಟುತ್ತಿದ್ದ ದೃಶ್ಯ
ಕಂಡುಬಂತು. ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲೂ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಸಂಚಾರ ಅಸ್ಯವ್ಯಸ್ತವಾಗಿ ನಾಗರಿಕರು, ವಿದ್ಯಾರ್ಥಿಗಳು ಪರದಾಡಿದರು.

ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಸಿದ್ಧತೆಗೆ ಹೂವು, ಹಣ್ಣು, ತರಕಾರಿ ಕೊಳ್ಳುವವರು ಹಾಗೂ ವ್ಯಾಪಾರಿಗಳು ಸಂಕಷ್ಟ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.