ADVERTISEMENT

ಒಳಮೀಸಲಾತಿ ಸಮೀಕ್ಷೆ, ಯಶಸ್ವಿಗೆ ಕೈಜೋಡಿಸಿ: ಡಿಸಿ

-

​ಪ್ರಜಾವಾಣಿ ವಾರ್ತೆ
Published 9 ಮೇ 2025, 15:33 IST
Last Updated 9 ಮೇ 2025, 15:33 IST
ಗುರುದತ್ತ ಹೆಗಡೆ
ಗುರುದತ್ತ ಹೆಗಡೆ   

ಶಿವಮೊಗ್ಗ: ಪರಿಶಿಷ್ಟ ಜಾತಿ ಒಳಮೀಸಲಾತಿ ಕುರಿತಂತೆ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್ ದಾಸ್‌ ಅವರ ಏಕಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ (ಶೈಕ್ಷಣಿಕ, ಆರ್ಥಿಕ) ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ಮೇ 5ರಿಂದ ಆರಂಭವಾಗಿರುವ ಸಮೀಕ್ಷೆಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜಿಲ್ಲೆಯ ಜನರಿಗೆ ಮನವಿ ಮಾಡಿದ್ದಾರೆ.

ಗಣತಿದಾರರು ಮೇ 17 ರವರೆಗೆ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಮೊಬೈಲ್ ಫೋನ್‌ ಆಪ್ ಮೂಲಕ ದಾಖಲಿಸಿಕೊಳ್ಳಲ್ಲಿದ್ದಾರೆ. ನಂತರ ಮೇ.19 ರಿಂದ 21 ರವರೆಗೆ ಮತಗಟ್ಟೆಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ. ಮೇ.19 ರಿಂದ 23 ರವರೆಗೆ ಪರಿಶಿಷ್ಟ ಜಾತಿಯ ಕುಟುಂಬಗಳು ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ.

ADVERTISEMENT

ಸಮೀಕ್ಷಾ ಕಾರ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಮತಗಟ್ಟೆಯಲ್ಲಿ 200 ಕ್ಕಿಂತ ಹೆಚ್ಚಿನ ಕುಟುಂಬಗಳು ಇದ್ದಲ್ಲಿ ಹೆಚ್ಚುವರಿ ಗಣತಿದಾರರನ್ನು ನಿಯೋಜನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಸಮೀಕ್ಷೆ ಸಮಯದಲ್ಲಿ ಗಣತಿದಾರರು ಪರಿಶಿಷ್ಟ ಜಾತಿ ಅಲ್ಲದವರ ಮನೆಗೂ ಕೂಡ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಮನೆಯ ಮುಖ್ಯಸ್ಥರು ತಾವು ಯಾವ ಜಾತಿಗೆ ಸೇರಿರುತ್ತಾರೆ ಎಂಬುದರ ಬಗ್ಗೆ ಮಾಹಿತಿ ನೀಡಿದರೆ ಸಾಕು, ಆದರೆ ಪರಿಶಿಷ್ಟ ಜಾತಿಯವರಾಗಿದ್ದಲ್ಲಿ ಪೂರ್ಣ ಪ್ರಮಾಣದ ಮಾಹಿತಿ ನೀಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.