ಶಿಕಾರಿಪುರ: ಹಲವಾರು ವರ್ಷದಿಂದ ತಾವು ವಾಸಿಸುವ ಸೂರಿಗೆ ದಾಖಲೆ ಸಿಗದೇ ಪರಿತಪಿಸುತ್ತಿದ್ದ ನೂರಾರು ಜನರಿಗೆ ತಾಲ್ಲೂಕು ಆಡಳಿತ ಹಕ್ಕುಪತ್ರ ಕಲ್ಪಿಸಿ ಆಡಳಿತದ ಮೇಲೆ ನಂಬಿಕೆ ಹೆಚ್ಚುವಂತ ಕಾರ್ಯ ಮಾಡಿದೆ.
ತಾಲ್ಲೂಕಿನ ರಾಗಿಕೊಪ್ಪ ತಾಂಡಾದ 65, ಚಿಕ್ಕಮಾಗಡಿ ಗ್ರಾಮದ 110 ಕುಟುಂಬಗಳು ಗೋಮಾಳ, ಖಾಸಗಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಹತ್ತಾರು ವರ್ಷದಿಂದ ವಾಸಿಸುತ್ತಿದ್ದವು. ವಾಸಿಸುವ ಮನೆಗೆ ಹಕ್ಕುಪತ್ರ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಆಡಳಿತ, ತಾಲ್ಲೂಕು ಆಡಳಿತ, ರಾಜಕಾರಣಿಗಳಿಗೆ ಹಲವು ಬಾರಿ ಮನವಿ ನೀಡಿದರೂ, ಕಾನೂನು ಜಾರಿಗೊಳಿಸಿದರೂ ತಮ್ಮದೇ ಸೂರಿಗೆ ದಾಖಲೆ ಪಡೆಯಲು ಪ್ರಯಾಸಪಟ್ಟಿದ್ದರು.
ಸಂಕಷ್ಟ ಪರಿಹಾರ:
ಸೂರಿಗೆ ದಾಖಲೆ ಕಲ್ಪಿಸಬೇಕು ಎನ್ನುವ ಗ್ರಾಮದ ಹಲವು ಜನರ ಮನವಿ ಗಮನಿಸಿದ ತಹಶೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಅವರು ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಅಲ್ಲದೆ, ಉಪ ವಿಭಾಗಾಧಿಕಾರಿಗಳೊಂದಿಗೆ ಸ್ಥಳಕ್ಕೆ ಸ್ವತಃ ಭೇಟಿ ನೀಡಿ ಜನರೊಂದಿಗೆ ಸಭೆ, ಮುಖಂಡರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ ಎಲ್ಲ ಕುಟುಂಬದಿಂದ ನಿಗದಿತ ಅವಧಿಯಲ್ಲಿ ಅಗತ್ಯ ದಾಖಲೆ ಸಂಗ್ರಹಿಸಿದರು. ಈಗ ಹಲವರಿಗೆ ಹಕ್ಕುಪತ್ರ ವಿತರಿಸುವ ಕಾರ್ಯವೂ ಆಗಿದೆ.
ಕಂದಾಯ ಗ್ರಾಮ ಸೃಜನೆ:
ಕಂದಾಯ ಗ್ರಾಮ ಸೃಜನೆ ಮಾಡುವ ಸರ್ಕಾರದ ಯೋಜನೆಯಂತೆ ಗ್ರಾಮದ ಹೊರಭಾಗದಲ್ಲಿ ಮನೆಗಳಿದ್ದ ಜಾಗ ಸರ್ವೆ ಮಾಡಿ ಅದಕ್ಕೆ ಪ್ರತ್ಯೇಕ ಸರ್ವೆ ನಂಬರ್ ನೀಡಿ ಪ್ರಾಥಮಿಕ ಹಂತಕ್ಕೆ ಸರ್ಕಾರದ ಅನುಮೋದನೆ ಪಡೆಯಲಾಗಿದೆ. ನಂತರ ಪ್ರತಿ ಮನೆಯ ವಾಸಸ್ಥಳ ಪ್ರದೇಶ, ಕೊಟ್ಟಿಗೆ, ಬಣವೆ ಜಾಗ ಸೇರಿ ಎಲ್ಲವನ್ನೂ ಅಳೆದು 4,000 ಚದರ ಅಡಿ ಮೀರದಂತೆ ಸೀಮಿತಗೊಳಿಸಿ ಮಾಲೀಕರ ಭಾವಚಿತ್ರದೊಂದಿಗೆ ಅಂತಿಮ ಹಂತದ ಅನುಮೋದನೆಯನ್ನು ಪಡೆಯಲಾಗಿದೆ. ಎರಡೂ ಗ್ರಾಮದ ವಸತಿ ಪ್ರದೇಶಕ್ಕೆ ಪ್ರತ್ಯೇಕ ಕಂದಾಯ ಗ್ರಾಮ ಸ್ಥಾನಮಾನ ಕಲ್ಪಿಸಲಾಗಿದೆ. 14 ಮನೆಗಳು ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಇದ್ದ ಕಾರಣಕ್ಕೆ ಅವರಿಗೆ ಪರಿಹಾರ ನೀಡಿ ಸರ್ಕಾರಕ್ಕೆ ಪಡೆಯುವ ಕೆಲಸವೂ ಪೂರ್ಣಗೊಳಿಸಲಾಗಿದೆ.
24 ಗಂಟೆ ಕಾರ್ಯಾಚರಣೆ:
ಸರ್ಕಾರದ ಹೆಸರಿನಲ್ಲಿದ್ದ ಜಾಗವನ್ನು ಕಾವೇರಿ ತಂತ್ರಾಂಶದ ಸಹಾಯದಿಂದ ಫಲಾನುಭವಿಗಳಿಗೆ ಮಾರಾಟ ನೋಂದಣಿ ಪತ್ರ ಮಾಡಿಸುವ ಕಾರ್ಯಕ್ಕೆ ವಿಶೇಷ ಅನುಮೋದನೆ ಪಡೆದು ತಹಶೀಲ್ದಾರ್ ಕಚೇರಿಗೆ ಎಲ್ಲ ಫಲಾನುಭವಿಗಳನ್ನು ಕರೆಯಿಸಿ ರಾತ್ರಿ 1 ಗಂಟೆವರೆಗೂ ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ. ಫಲಾನುಭವಿಗೆ ನೀಡುವ ಹಕ್ಕುಪತ್ರದಲ್ಲಿ ಸಮಯವೂ ನಿಗದಿಯಾಗಿದ್ದು ಸಿಬ್ಬಂದಿ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.
ಉಪನೋಂದಣಿ ಇಲಾಖೆ ಮೂಲಕ ಗ್ರಾಮ ಪಂಚಾಯಿತಿಗೆ ಎಲ್ಲ ಪತ್ರಗಳೂ ಹೋಗಿದ್ದು ನೋಟಿಸ್ ಅವಧಿ ನಂತರ ಎಲ್ಲ ಫಲಾನುಭವಿಗಳ ಹೆಸರಿಗೆ ಇ-ಸ್ವತ್ತು ಸೃಜನೆಯಾಗಲಿದೆ. ಇದೀಗ ನೋಂದಣಿ ಪತ್ರ, ಹಕ್ಕುಪತ್ರ, ಇ–ಸ್ವತ್ತು ವಿತರಣೆಗೆ ಸಿದ್ಧಗೊಂಡಿವೆ. ಸೂರಿನ ದಾಖಲೆಗಾಗಿ ಕಾಯುತ್ತಿದ್ದ ಜನರ ಮನದಲ್ಲಿ ಈಗ ನೆಮ್ಮದಿ ಭಾವ ಮೂಡಿದೆ.
ತಾಲ್ಲೂಕಿನ 70ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಹಕ್ಕುಪತ್ರ ಸಮಸ್ಯೆ ಇದ್ದು ಮೊದಲ ಹಂತವಾಗಿ 29 ಗ್ರಾಮದಲ್ಲಿ ಪ್ರಾಥಮಿಕ ಹಂತದ ಸರ್ವೆ ನಡೆಸಿ ಅನುಮೋದನೆಗೆ ಸಿದ್ಧತೆ ಕೈಗೊಳ್ಳಲಾಗಿದೆ
- ಮಲ್ಲೇಶ್ ಬೀರಪ್ಪ ಪೂಜಾರ್ ತಹಶೀಲ್ದಾರ್ ಶಿಕಾರಿಪುರ
ಕಂದಾಯ ಗ್ರಾಮ ಸ್ಥಾನಮಾನ ನೀಡುವ ಯೋಜನೆ ಮೂಲಕ ಸರ್ಕಾರ ಜನರ ಸೂರಿಗೊಂದು ಮೌಲ್ಯ ತಂದುಕೊಟ್ಟಿದೆ ಅದಕ್ಕಾಗಿ ಅಧಿಕಾರಿಗಳಿಗೆ ಧನ್ಯವಾದಗಳು
-ಉಮೇಶ್ ಮಾರವಳ್ಳಿ ಮುಖಂಡ
ಹಕ್ಕುಪತ್ರಕ್ಕಾಗಿ ಹತ್ತು ವರ್ಷದಿಂದ ಅಲೆದಾಡಿದ್ದೇವೆ. ತಹಶೀಲ್ದಾರ್ ನಮ್ಮ ಕಷ್ಟಕ್ಕೆ ಅಂತ್ಯ ಹಾಡಿದ್ದಾರೆ. ಗ್ರಾಮದ ಎಲ್ಲರಲ್ಲೂ ಖುಷಿ ವಾತಾವರಣ
-ಮೂಡಿದೆ ಜಾನಕಿಬಾಯಿ ಚಿಕ್ಕಮಾಗಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.