ADVERTISEMENT

ಆನ್‌ಲೈನ್‌ ಅವ್ಯವಸ್ಥೆ: ಪಡಿತರ ಚೀಟಿಗೆ ಕೆವೈಸಿ ಸಮಸ್ಯೆ

ರಿಪ್ಪನ್‌ಪೇಟೆಗೆ ನಿತ್ಯವೂ ಹತ್ತಾರು ಕಿ.ಮೀ ನಡೆದು ಬರುವ ನಾಗರಿಕರು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 3:51 IST
Last Updated 10 ಆಗಸ್ಟ್ 2021, 3:51 IST
ನ್ಯಾಯಬೆಲೆ ಅಂಗಡಿ ಮುಂದೆ ಬೆಳಿಗ್ಗೆ 6 ರಿಂದಲೇ ಸರತಿ ಸಾಲಿನಲ್ಲಿ ನಿಂತು ಹೊತ್ತು ಮುಳುಗುವ ವರೆಗೂ ಅನ್ನ ನೀರಿಲ್ಲದೆ ಹೆಂಗಸರು , ಮಕ್ಕಳು, ಸೇರಿ ಅಂಗಡಿ ಮುಂಗಟ್ಟು ಕಾಯುವಂತಾಗಿದೆ. 
ನ್ಯಾಯಬೆಲೆ ಅಂಗಡಿ ಮುಂದೆ ಬೆಳಿಗ್ಗೆ 6 ರಿಂದಲೇ ಸರತಿ ಸಾಲಿನಲ್ಲಿ ನಿಂತು ಹೊತ್ತು ಮುಳುಗುವ ವರೆಗೂ ಅನ್ನ ನೀರಿಲ್ಲದೆ ಹೆಂಗಸರು , ಮಕ್ಕಳು, ಸೇರಿ ಅಂಗಡಿ ಮುಂಗಟ್ಟು ಕಾಯುವಂತಾಗಿದೆ.    

ರಿಪ್ಪನ್‌ಪೇಟೆ: ಗ್ರಾಮೀಣ ಭಾಗದ ಗ್ರಾಹಕರು ತಮ್ಮ ಕುಟುಂಬದ ಪಡಿತರ ಚೀಟಿ ನವೀಕರಿಸಲು ಆಗಸ್ಟ್‌ 10 ಕೊನೆ ದಿನ. ಕುಟುಂಬದ ಪ್ರತಿ ಸದಸ್ಯರು ತಾವು ಪಡಿತರ ಖರೀದಿಸುವ ಅಂಗಡಿಗೆ ತೆರಳಿ ಹೆಬ್ಬೆಟ್ಟಿನ ದೃಢೀಕರಣ ನೀಡಬೇಕು. ಹಾಗಾಗಿ, ಪಡಿತರ ಅಂಗಡಿಗಳ ಮುಂದೆ ನೂಕುನುಗ್ಗಲಾಗಿದೆ.

ಒಂದು ವಾರದಿಂದ ಅಪಾರ ಪ್ರಮಾಣದ ಮಳೆ ಹಾನಿಯಿಂದ ಗ್ರಾಮೀಣ ಭಾಗದಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆ ತಲೆದೋರಿದೆ. ಗಣಕಯಂತ್ರದಲ್ಲಿ ಹೆಬ್ಬೆಟ್ಟು ಗುರುತು ಮೂಡದ ಕಾರಣ ಹತ್ತಾರು ಕಿ.ಮೀ ದೂರದಿಂದ ಪ್ರತಿನಿತ್ಯ ನಡೆದು ಬಂದ ನಾಗರಿಕರು ಬಂದ ದಾರಿಗೆ ಸುಂಕ ಇಲ್ಲದೆ ಬರಿಗೈಯಲ್ಲಿ ತೆರಳುತ್ತಿದ್ದಾರೆ.

ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರೆ ಹೆಚ್ಚಾಗಿರುವ ಇಲ್ಲಿ ತಮ್ಮ ನಿತ್ಯದ ಕಾಯಕ ಬಿಟ್ಟು ನ್ಯಾಯಬೆಲೆ ಅಂಗಡಿ ಮುಂದೆ ಬೆಳಿಗ್ಗೆ 6ರಿಂದಲೇ ಸರದಿ ಸಾಲಿನಲ್ಲಿ ನಿಂತು ಹೊತ್ತು ಮುಳುಗುವವರೆಗೂ ಅನ್ನ ನೀರಿಲ್ಲದೆ ಹೆಂಗಸರು, ಮಕ್ಕಳು, ಸೇರಿ ಪಡಿತರ ಅಂಗಡಿ ಬಾಗಿಲು ಕಾಯುತ್ತಿದ್ದಾರೆ. ಹೆಬ್ಬೆಟ್ಟು ನೀಡಲು ಬಂದರೆ ನೆಟ್‌ವರ್ಕ್‌ ಸಮಸ್ಯೆ ಎಂದು ಹೇಳುತ್ತಾರೆ. ಸರ್ಕಾರದ ಈ ಅವೈಜ್ಞಾನಿಕ ನೀತಿ ಕೈಬಿಡಬೇಕು ಎನ್ನುತ್ತಾರೆ ಸ್ಥಳಿಯ ನಿವಾಸಿ ಸಿ. ಮಂಜುನಾಥ್‌ ಭಟ್‌.

ADVERTISEMENT

ಅವಧಿ ವಿಸ್ತರಣೆಗೆ ಒತ್ತಾಯ: ಗ್ರಾಮ ಪಂಚಾಯಿತಿ ಆ.10 ಕಡೆ ದಿನ. ನೆಟ್‌ವರ್ಕ್‌, ಸರ್ವರ್ ಸಮಸ್ಯೆಯ ಕಾರಣ ಜನರಿಗೆ ಸಮಯಕ್ಕೆ ಸರಿಯಾಗಿ ದಾಖಲಾತಿ ನೀಡಲು ಸಾಧ್ಯವಾಗುತ್ತಿಲ್ಲ. ಅವಧಿ ಮುಗಿದರೆ ಕಾರ್ಡ್‌ ರದ್ದಾಗುವ ಭೀತಿಯಲ್ಲಿದ್ದಾರೆ. ಸರ್ಕಾರದ ಲೋಪದೋಷಕ್ಕೆ ಹೊಣೆ ಯಾರು. ಹೆಚ್ಚುವರಿ 2 ತಿಂಗಳ ಕಾಲಾವಕಾಶ ನೀಡಬೇಕು ಎನ್ನುತ್ತಾರೆ ಜೇನಿ ಎಂ. ಶಂಕರಪ್ಪ.

ಕೋವಿಡ್‌ ನಿಯಮ ಪಾಲನೆ: ಬಿಎಸ್‌ ಎನ್‌ಎಲ್‌ ನೆಟ್‌ವರ್ಕ್‌ ಇಲ್ಲದೆ ಸರ್ವರ್‌ ದೋಷದಿಂದ ದಿನದಲ್ಲಿ 20–30 ಕಾರ್ಡ್‌ದಾರ ಮಾಹಿತಿ ದಾಖಲಾಗುತ್ತದೆ. ಕೋಟೆ ತಾರಿಗಾ ವ್ಯಾಪ್ತಿಯಲ್ಲಿ 600ಕ್ಕೂ ಅಧಿಕ ಕಾರ್ಡುದಾರರಿದ್ದಾರೆ. ಇದುವರೆಗೆ ಶೇ 50ರಷ್ಟು ದಾಖಲೆ ಸಲ್ಲಿಕೆಯಾಗಿವೆ ಎನ್ನುತ್ತಾರೆ ನ್ಯಾಯಬೆಲೆ ಅಂಗಡಿ ಮಾಲೀಕ ಲೋಹಿತ್‌.

‘ವಿದ್ಯುತ್‌ ಸಮಸ್ಯೆಯೂ ಕಾಡುತ್ತಿದೆ. ಬೆಳಿಗ್ಗೆ 8ರಿಂದ ಸರದಿಯಲ್ಲಿ ನಿಂತಿದ್ದೇನೆ. ಸಂಜೆ 5 ಆದರೂ ನನ್ನ ಸರದಿ ಬಂದಿಲ್ಲ ಎಂದು ರಾಜು ಶೆಟ್ಟಿ ಅಕ್ರೋಶ ವ್ಯಕ್ತಪಡಿಸಿದರು. ಕೂಲಿ ಮಾಡಿ ಜೀವನ ಸಾಗಿಸುವ ನಮಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.