ರಿಪ್ಪನ್‌ಪೇಟೆ: ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತದ ನಿರ್ವಹಣೆಯಲ್ಲಿರುವ ಇಲ್ಲಿನ ವಾರದ ಸಂತೆ ಮಾರುಕಟ್ಟೆಯು ಅವ್ಯವಸ್ಥೆಯ ಆಗರವಾಗಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ.
ವಾರದ ಸಂತೆಗಾಗಿ ಎಪಿಎಂಸಿಯಿಂದ ಮೂರು ಹಂತದಲ್ಲಿ ಕಾಮಗಾರಿ ನಡೆದಿತ್ತು. ₹ 2 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಮಾರುಕಟ್ಟೆ ಪ್ರಾಂಗಣ, ಹೈಟೆಕ್ ಶೌಚಾಲಯ, ಕಾಂಕ್ರೀಟ್ ರಸ್ತೆ ನಿರ್ಮಿಸಿ ಗ್ರಾಮಾಡಳಿತದ ಸುಪರ್ದಿಗೆ ಒಪ್ಪಿಸಲಾಗಿತ್ತು. ಪ್ರತಿ ಸೋಮವಾರ ನಡೆಯುವ ಸಂತೆಯಲ್ಲಿ ಅಂಗಡಿಗಳಿಂದ ಕರ ವಸೂಲಿಯ ಗುತ್ತಿಗೆ ಹಿಡಿದಿದ್ದ ವ್ಯಕ್ತಿಯು ಸ್ವಚ್ಛತೆಗೆ ಗಮನ ಕೊಡದ್ದರಿಂದ, ಪಂಚಾಯಿತಿಯೇ ಅದರ ಜವಾಬ್ದಾರಿ ವಹಿಸಿಕೊಂಡಿತ್ತು.
ವರ್ತಕರಿಂದ ವಾರ್ಷಿಕ ₹ 2 ಲಕ್ಷಕ್ಕೂ ಅಧಿಕ ಸುಂಕ ಸಂಗ್ರಹಿಸುತ್ತಿರುವ ಗ್ರಾಮಾಡಳಿತವು ಮಾರುಕಟ್ಟೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಸ್ವಚ್ಛತೆ ಹಾಗೂ ಕೋಳಿ ಮಾಂಸ, ಹಸಿ ಮೀನು ಮತ್ತು ತರಕಾರಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ದೂರು.
ಚರಂಡಿಯು ಪ್ಲಾಸ್ಟಿಕ್, ಕೊಳೆತ ತರಕಾರಿಯಿಂದ ತುಂಬಿಕೊಂಡಿರುವ ಕಾರಣ ಮಳೆ ನೀರು ಹರಿಯಲಾಗದೇ ಕ್ರಿಮಿ ಕೀಟಗಳು ಉತ್ಪತ್ತಿಯಾಗಿವೆ. ಇದರಿಂದಾಗಿ ಮಾರುಕಟ್ಟೆ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಈ ಬಗ್ಗೆ ಗಮನಕ್ಕೆ ತಂದರೂ ಪಿಡಿಒ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.
ಕೇಂದ್ರ ಸರ್ಕಾರದ ಅನುದಾನವಿದ್ದರೂ ಶೌಚಾಲಯಕ್ಕೆ ನೀರಿನ ಸಂಪರ್ಕವಿಲ್ಲ. ಕುಡಿಯುವ ನೀರಿನ ಪೂರೈಕೆ ಇಲ್ಲ. ನಿರ್ವಹಣೆ ಇಲ್ಲದ ಕಾರಣ ಮಾರುಕಟ್ಟೆ ಪ್ರಾಂಗಣವು ಚಿಂದಿ ಆಯುವ, ವಲಸೆ ಕೂಲಿ ಕಾರ್ಮಿಕರ ಕುಟುಂಬಗಳು ಮತ್ತು ಬಿಡಾಡಿ ದನಗಳ ತಾಣವಾಗಿದೆ ಎಂದು ಹೇಳುತ್ತಾರೆ.
ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಹಣಕಾಸು ಯೋಜನೆ ಮೇಲ್ವಿಚಾರಣೆ ಮತ್ತು ನೀತಿ ಅನುಷ್ಠಾನಕ್ಕೆ ಆಡಳಿತ ವರ್ಗ ಹಿಂದೇಟು ಹಾಕುತ್ತಿರುವುದು ದುರದೃಷ್ಟಕರರಾಜೇಂದ್ರ ಗೌಡ ಸ್ಥಳೀಯ ನಿವಾಸಿ
ಮಾರುಕಟ್ಟೆಯ ಸ್ವಚ್ಛ ಆರೋಗ್ಯಕರ ಪರಿಸರ ಕಾಳಜಿಗೆ ಸ್ಥಳೀಯ ಆಡಳಿತ ವರ್ಗ ತುರ್ತು ಗಮನಹರಿಸಲಿಆರ್.ಎಚ್. ಶ್ರೀನಿವಾಸ್ ಸ್ಥಳೀಯ ನಿವಾಸಿ
ಸ್ವಚ್ಛತೆ ಕೊರತೆ ಕುರಿತು ದೂರುಗಳು ಬಂದಿದ್ದು ಈ ಬಗ್ಗೆ ಕಾರ್ಮಿಕರಿಗೆ ನೋಟಿಸ್ ನೀಡಲಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಇರುವ ಅಂಗಡಿ ತೆರೆವುಗೊಳಿಸಿ ಪ್ರಾಂಗಣದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದುನಾಗರಾಜ್ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.