ADVERTISEMENT

6 ವರ್ಷ ಕಳೆದರೂ ಶೇ 50ರಷ್ಟು ಕೆಲಸ ಬಾಕಿ 

ಭದ್ರಾವತಿ: ಮುಗಿಯದ ಚತುಷ್ಪಥ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 5:33 IST
Last Updated 27 ಜೂನ್ 2025, 5:33 IST
ಶಿವಮೊಗ್ಗ - ಭದ್ರಾವತಿ ನಡುವೆ ನಡೆಯುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿ ಪರಿಣಾಮ ಡೇರಿ ಬಳಿ ನಿರ್ಮಿಸಲಾಗಿರುವ ಕಿರಿದಾದ ಸರ್ವೀಸ್ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದು
ಶಿವಮೊಗ್ಗ - ಭದ್ರಾವತಿ ನಡುವೆ ನಡೆಯುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿ ಪರಿಣಾಮ ಡೇರಿ ಬಳಿ ನಿರ್ಮಿಸಲಾಗಿರುವ ಕಿರಿದಾದ ಸರ್ವೀಸ್ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದು   

ಭದ್ರಾವತಿ: ಶಿವಮೊಗ್ಗ- ಭದ್ರಾವತಿ ನಡುವೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯು 6 ವರ್ಷ ಕಳೆದರೂ ಮುಗಿಯುತ್ತಿಲ್ಲ. ಅದರಲ್ಲೂ ಶೇ 50ರಷ್ಟು ಮಾತ್ರ ಕಾಮಗಾರಿ ಮುಗಿದಿದ್ದು, ಇನ್ನೂ ಅರ್ಧ ಕೆಲಸ ಬಾಕಿ ಇದೆ.

ಶಿಮುಲ್ ಡೈರಿ ಬಳಿ ಇರುವ ಕಲ್ಲಿನ ಬೆಟ್ಟವನ್ನು ಸಮತಟ್ಟು ಮಾಡಿ ರಸ್ತೆ ನಿರ್ಮಿಸಲು ನಾಲ್ಕು ವರ್ಷ ತೆಗೆದುಕೊಳ್ಳಲಾಗಿದೆ. ಸುತ್ತಮುತ್ತ ಕೈಗಾರಿಕಾ ಪ್ರದೇಶ ಇರುವುದರಿಂದ ಸ್ಫೋಟಕಗಳನ್ನು ಬಳಸುವಂತಿಲ್ಲ. ಡ್ರಿಲ್ ಮಾಡಿ ಕಲ್ಲನ್ನು ಪುಡಿ ಮಾಡಬೇಕಿದೆ. ಗುತ್ತಿಗೆದಾರ ಇದಕ್ಕೆ ಹೆಚ್ಚಿನ ಆದ್ಯತೆ ಕೊಡದ ಪರಿಣಾಮ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.

ಕಿರಿದಾದ ಸರ್ವೀಸ್ ರಸ್ತೆ:

ADVERTISEMENT

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮಾಚೇನಹಳ್ಳಿ ಡೇರಿ ಬಳಿಯ ಕಲ್ಲು ಬಂಡೆ ಕರಗಿಸಲು ಸಾಹಸ ಪಡುತ್ತಿದೆ. ಸದಾ ಜನ ಜಂಗುಳಿಯಿಂದ ಕೂಡಿರುವ ಈ ಭಾಗದಲ್ಲಿ ಕಿರಿದಾದ ಸರ್ವೀಸ್ ರಸ್ತೆಗೆ ಅನುವು ಮಾಡಿದೆ. ಇಲ್ಲಿ ಮದ್ಯದ ಅಂಗಡಿ, ಕ್ಯಾಂಟೀನ್, ಗ್ಯಾರೇಜ್‌ಗಳು ಇರುವುದರಿಂದ ಸದಾ ಜನದಟ್ಟಣೆ ಇರುತ್ತದೆ. ತುಮಕೂರು- ಶಿವಮೊಗ್ಗ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿ 10 ವರ್ಷ ದಾಟಿದೆ. 4 ಪ್ಯಾಕೇಜ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ತುಮಕೂರಿನಿಂದ ತರೀಕೆರೆವರೆಗೆ 3ನೇ ಪ್ಯಾಕೇಜ್ ಮುಕ್ತಾಯ ಹಂತಕ್ಕೆ ತಲುಪಿದೆ.

ಫ್ಲೈ ಓವರ್:

ಭದ್ರಾವತಿ - ಬೈಪಾಸ್, ಮಾಚೇನಹಳ್ಳಿ ಡೇರಿ, ಗ್ಲಾಸ್ ಹೌಸ್ ನಡುವೆ ಫ್ಲೈ ಓವರ್ ಹಾಗೂ ಅಂಡರ್ ಪಾಸ್ ಕಾಮಗಾರಿ ಸಹ ನಿಧಾನಗತಿಯಲ್ಲಿ ನಡೆಯುತ್ತಿದೆ. ಕಾಮಗಾರಿಗೆ ಹೈ ಟೆನ್ಷನ್ ವಿದ್ಯುತ್ ಲೈನ್‌ಗಳು ಅಡ್ಡಿಯಾಗಿದ್ದವು. ಲೈನ್ ಎತ್ತರಿಸಿ ಕಾಮಗಾರಿಗೆ ಅನುವು ಮಾಡಿಕೊಳ್ಳಲು ಎರಡು ವರ್ಷ ತೆಗೆದುಕೊಳ್ಳಲಾಯಿತು. ಈಗ ಲೈನ್ ಎತ್ತರಿಸಲಾಗಿದ್ದರೂ ಕೆಲಸ ಮಾತ್ರ ವೇಗ ಪಡೆಯುತ್ತಿಲ್ಲ.

ಗ್ಲಾಸ್ ಹೌಸ್ ಬಳಿ ನಿರ್ಮಾಣ ಆಗುತ್ತಿರುವ ಫ್ಲೈ ಓವರ್ ಕೆಲಸವೂ ಇದೇ ವರ್ಷ ಪೂರ್ಣಗೊಳ್ಳುವ ಅನುಮಾನವಿದೆ. ಕಳೆದ ಮಳೆಗಾಲದಲ್ಲಿ ಅಂಡರ್ ಪಾಸ್ ಕೆಲಸ ಮುಗಿದಿದೆ. ಫ್ಲೈ ಓವರ್ ಮತ್ತೊಂದು ಮಳೆಗಾಲ ಬಂದರೂ ಪೂರ್ಣಗೊಂಡಿಲ್ಲ. ಅಲ್ಲದೆ, ಪರ್ಯಾಯವಾಗಿ ಒಂದು ಬದಿಯಲ್ಲಿ ಮಾತ್ರ ಸರ್ವಿಸ್ ರಸ್ತೆ ನಿರ್ಮಿಸಲಾಗಿದೆ.

‘ಸುತ್ತಮುತ್ತ ಕೈಗಾರಿಕಾ ಪ್ರದೇಶ ಇಲ್ಲದಿದ್ದರೆ ಸ್ಫೋಟಕಗಳನ್ನು ಬಳಸಿ, ಕಾಮಗಾರಿ ಮುಗಿಯುವ ಹಂತ ತಲುಪುತ್ತಿತ್ತು. ಈಗ ಡ್ರಿಲ್ ಮಾಡಿ ಕಲ್ಲನ್ನು ಪುಡಿ ಮಾಡಿ ಸಮತಟ್ಟು ಮಾಡಬೇಕಿದೆ. ಇದಕ್ಕೆ ಹೆಚ್ಚು ಸಮಯ ಹಿಡಿಯುತ್ತಿದೆ’ ಎಂದು ಕಾಮಗಾರಿ ಉಸ್ತುವಾರಿವಹಿಸಿದವರು  ಹೇಳುತ್ತಾರೆ.

ಡೇರಿ ಬಳಿ ತಾತ್ಕಾಲಿಕವಾಗಿ ಅಳವಡಿಸಿರುವ ಕೃತಕ ತಡೆಗೋಡೆ ಸ್ಥಳದಲ್ಲಿ ಕುಸಿಯುವ ಹಂತ ತಲುಪಿರುವ ಸರ್ವೀಸ್ ರಸ್ತೆ
ಡೇರಿ ಬಳಿ ಕಳೆದ ಮಳೆಗಾಲದಲ್ಲಿ ಕುಸಿತಗೊಂಡಿದ್ದ ಸರ್ವೀಸ್ ರಸ್ತೆ ಇದುವರೆಗೂ ದುರಸ್ತಿ ಕಾಣದಿರುವುದು
ಸಂಚರಿಸಲು ಸ್ಥಳಾವಕಾಶವಿಲ್ಲದೇ ಸಂಚರಿಸಲು ಪರದಾಡುತ್ತಿರುವ ಬೈಕ್ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.