ADVERTISEMENT

ಅಧ್ಯಯನಶೀಲ ಸಂಸದೀಯ ಪಟುವಾಗಿದ್ದ ಕೆ.ಎಚ್.ಶ್ರೀನಿವಾಸ್

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 3:01 IST
Last Updated 24 ಜುಲೈ 2025, 3:01 IST
ಸಾಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ್ ಅವರು ಸದನದಲ್ಲಿ ಮಾಡಿದ ಭಾಷಣಗಳ ಸಂಗ್ರಹ ಕೃತಿ ‘ಮಲೆನಾಡ ಮಾತುಗಾರ’ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದರು
ಸಾಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ್ ಅವರು ಸದನದಲ್ಲಿ ಮಾಡಿದ ಭಾಷಣಗಳ ಸಂಗ್ರಹ ಕೃತಿ ‘ಮಲೆನಾಡ ಮಾತುಗಾರ’ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದರು   

ಸಾಗರ: ಅಧ್ಯಯನಶೀಲ ಸಂಸದೀಯ ಪಟು ಆಗಿದ್ದ ಕೆ.ಎಚ್.ಶ್ರೀನಿವಾಸ್ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಮಾಡಿರುವ ಭಾಷಣಗಳಲ್ಲಿ ಸತ್ವಪೂರ್ಣ ಸಂಗತಿಗಳಿವೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಇಲ್ಲಿನ ಎಲ್‌ಬಿ ಮತ್ತು ಎಸ್‌ಬಿಎಸ್ ಕಾಲೇಜಿನಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಬುಧವಾರ ಏರ್ಪಡಿಸಿದ್ದ ಕೆ.ಎಚ್.ಶ್ರೀನಿವಾಸ್ ಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ್ ಅವರು ಸದನದಲ್ಲಿ ಮಾಡಿದ ಭಾಷಣಗಳ ಸಂಗ್ರಹ ಕೃತಿ ‘ಮಲೆನಾಡ ಮಾತುಗಾರ’ ಬಿಡುಗಡೆ ಮಾಡಿ ಮಾತನಾಡಿದರು.

ಸದನದಲ್ಲಿ ಯಾವುದೇ ವಿಷಯದ ಬಗ್ಗೆ ಮಾತನಾಡುವಾಗ ಸಾಕಷ್ಟು ಸಿದ್ಧತೆಗಳೊಂದಿಗೆ ಶ್ರೀನಿವಾಸ್ ಬರುತ್ತಿದ್ದರು. ಹೀಗಾಗಿ ಅವರ ಮಾತುಗಳಿಗೆ ಅಧಿಕೃತತೆ ಇರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಶಾಸಕರಲ್ಲಿ ಅಧ್ಯಯನದ ಕೊರತೆಯ ಕಾರಣ ಸದನದಲ್ಲಿನ ಚರ್ಚೆಗಳ ಗುಣಮಟ್ಟ ಕುಸಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಗ್ರಾಮೀಣ ಪರಿಸರದ ಹಿನ್ನೆಲೆಯ ಶ್ರೀನಿವಾಸ್ ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದು ಸಾಮಾನ್ಯ ಸಂಗತಿಯಲ್ಲ. ಈ ಭಾಗದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಅಡಿಕೆ ಬೆಳೆಗಾರರು ಬಳಸುವ ನೀರಿನ ಮೇಲೆ ಸರ್ಕಾರ ತೆರಿಗೆ ಹೇರಿದಾಗ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಎದುರು ಕೆ.ಎಚ್.ಶ್ರೀನಿವಾಸ್ ಸಮರ್ಥವಾಗಿ ವಾದ ಮಂಡಿಸಿ ಅವೈಜ್ಞಾನಿಕ ತೆರಿಗೆ ರದ್ದಾಗುವಂತೆ ಮಾಡಿದ್ದನ್ನು ಮರೆಯುವಂತಿಲ್ಲ ಎಂದು ಹಿರಿಯ ಸಹಕಾರಿ ಮುಖಂಡ ಎಂ.ಹರನಾಥರಾವ್ ತಿಳಿಸಿದರು.

ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವ ಗುಣವಿರುವ ಕೆ.ಎಚ್.ಶ್ರೀನಿವಾಸ್ ಅವರ ಕಾವ್ಯದಲ್ಲಿ ಭಾರತೀಯ ತತ್ವಶಾಸ್ತ್ರ, ಪುರಾಣ ಕಾವ್ಯ ಪರಂಪರೆಯ ನೆನಪುಗಳನ್ನು ಜಾಗೃತಗೊಳಿಸುವ ಅಂಶಗಳು ದಟ್ಟವಾಗಿವೆ ಎಂದು ವಿಮರ್ಶಕ ಟಿ.ಪಿ.ಅಶೋಕ್ ವಿಶ್ಲೇಷಿಸಿದರು.

ಮಲೆನಾಡಿನ ಜೀವನಕ್ರಮ ಹೇಗೆ ವಿಘಟಿತವಾಗುತ್ತಿದೆ ಎಂಬುದನ್ನು ತಮ್ಮ ಕಾವ್ಯದಲ್ಲಿ ಕೆ.ಎಚ್.ಕಟ್ಟಿಕೊಟ್ಟಿದ್ದಾರೆ. ರಾಜಕಾರಣವೇ ಅಪ್ರಸ್ತುತವಾಗುತ್ತಿರುವ ವಿದ್ಯಮಾನಗಳಿಗೂ ಅವರ ಕಾವ್ಯ ಕನ್ನಡಿ ಹಿಡಿದಿದೆ ಎಂದು ವಿವರಿಸಿದರು.

ಕೇವಲ ಮಾತುಗಾರ ಮಾತ್ರವಲ್ಲದೆ ಕನಸುಗಾರ ಕೂಡ ಆಗಿದ್ದದ್ದು ಕೆ.ಎಚ್.ಶ್ರೀನಿವಾಸ್ ವ್ಯಕ್ತಿತ್ವದ ವಿಶಿಷ್ಟತೆಯಾಗಿದೆ. ಈ ಕಾರಣಕ್ಕಾಗಿಯೆ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದಂತಹ ಶಿಕ್ಷಣ ಸಂಸ್ಥೆಯನ್ನು ಅನೇಕರೊಂದಿಗೆ ಕಟ್ಟಲು ಅವರಿಗೆ ಸಾಧ್ಯವಾಯಿತು ಎಂದು ರಂಗಕರ್ಮಿ ಕೆ.ವಿ.ಅಕ್ಷರ ಹೇಳಿದರು.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಂ.ಶಿವಕುಮಾರ್ ಸ್ವಾಗತಿಸಿದರು. ಕೆ.ಎಸ್.ವೈಶಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಟಿ.ಸ್ವಾಮಿ ನಿರೂಪಿಸಿದರು.

ಲಂಚ

- ಪಿಂಚಣಿ ನೀಡಲು ₹25000 ಲಂಚ ಕೇಳಿದ ವಿಧಾನಸಭೆ ಸಿಬ್ಬಂದಿ ಕೆ.ಎಚ್.ಶ್ರೀನಿವಾಸ್ ಅವರ ಪಿಂಚಣಿ ಹಣವನ್ನು ಅವರ ಪತ್ನಿಗೆ ನೀಡಲು ವಿಧಾನಸಭೆಯ ಮಹಿಳಾ ಸಿಬ್ಬಂದಿಯೊಬ್ಬರು ₹25000 ಸಾವಿರ ಲಂಚಕ್ಕಾಗಿ ಬೇಡಿಕೆ ಇಟ್ಟ ಪ್ರಸಂಗವನ್ನು ಬಸವರಾಜ ಹೊರಟ್ಟಿ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಮಟ್ಟಿಗೆ ನಮ್ಮ ವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದ ಅವರು ಲಂಚ ಕೇಳಿದ ಸಿಬ್ಬಂದಿಯನ್ನು ಕೂಡಲೆ ಅಮಾನತುಗೊಳಿಸಿ ಒಂದು ದಿನದೊಳಗೆ ಪಿಂಚಣಿ ಕೊಡಿಸುವ ವ್ಯವಸ್ಥೆ ಮಾಡಿದ್ದನ್ನು ಅವರು ಉಲ್ಲೇಖಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.