ADVERTISEMENT

ಪಕ್ಷಾತೀತ ಹೋರಾಟಕ್ಕೆ ವೇದಿಕೆ ಸಜ್ಜು

ಸಾಗರಕ್ಕೆ ಜಿಲ್ಲಾ ಕೇಂದ್ರದ ಮಾನ್ಯತೆ ನೀಡಲು ತೀವ್ರಗೊಳ್ಳುತ್ತಿರುವ ಜನಾಂದೋಲನ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 5:24 IST
Last Updated 18 ಸೆಪ್ಟೆಂಬರ್ 2025, 5:24 IST
ಸಾಗರದ ಭೂಪಟ
ಸಾಗರದ ಭೂಪಟ   

ಸಾಗರ: ಜಿಲ್ಲಾ ಕೇಂದ್ರದ ಮಾನ್ಯತೆಯ ಬೇಡಿಕೆಯ ಕೂಗು ಪ್ರಬಲವಾಗುತ್ತಿದ್ದು, ಈ ಸಂಬಂಧ ಜನಾಂದೋಲನಕ್ಕೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗುತ್ತಿದೆ. ಇಲ್ಲಿನ ಬಹುತೇಕ ಸಂಘ–ಸಂಸ್ಥೆಗಳು ಕೂಡ ಸಾಗರ ಜಿಲ್ಲಾ ಕೇಂದ್ರವಾಗಬೇಕು ಎಂಬ ಕೂಗಿಗೆ ಸಹಮತ ಸೂಚಿಸಿರುವುದು ಹೋರಾಟದ ಕಾವು ಹೆಚ್ಚಲು ಕಾರಣವಾಗಿದೆ.

ಈ ಹಿಂದೆ ಶಿವಮೊಗ್ಗ ಜಿಲ್ಲೆಯನ್ನು ವಿಭಜಿಸಿ ಶಿಕಾರಿಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂಬ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿತ್ತು. 2021ನೇ ಸಾಲಿನಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಇನ್ನೇನು ಜಿಲ್ಲೆ ವಿಭಜನೆಯಾಗಿ ಶಿಕಾರಿಪುರ ನೂತನ ಜಿಲ್ಲೆಯಾಗುತ್ತದೆ ಎಂಬ ಕೂಗು ಕೇಳಿ ಬಂದಿತ್ತು.

ಆ ಸಂದರ್ಭದಲ್ಲಿ ಸಾಗರದಲ್ಲಿ ವಿವಿಧ ಸಂಘ–ಸಂಸ್ಥೆಗಳು, ರಾಜಕೀಯ ಪಕ್ಷಗಳ ಪ್ರಮುಖರು ಒಗ್ಗಟ್ಟಾಗಿ ಸಾಹಿತಿ ನಾ. ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ಯಾವುದೇ ಕಾರಣಕ್ಕೂ ಶಿವಮೊಗ್ಗ ಜಿಲ್ಲೆಯನ್ನು ವಿಭಜನೆ ಮಾಡಬಾರದು, ಒಂದು ವೇಳೆ ವಿಭಜನೆ ಮಾಡುವುದಾದರೆ ಸಾಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ, ಮೆರವಣಿಗೆ ನಡೆದಿತ್ತು.

ADVERTISEMENT

ಸಾಗರದ ಕೆಲವು ಸರ್ಕಾರಿ ಕಚೇರಿಗಳು ಶಿಕಾರಿಪುರಕ್ಕೆ ವರ್ಗಾವಣೆಯಾಗಿದ್ದು, ಶಿಕಾರಿಪುರದಲ್ಲಿ ಜಿಲ್ಲಾಸ್ಪತ್ರೆ ಆರಂಭಗೊಳ್ಳುವ ತಯಾರಿ ನಡೆದದ್ದು ಜಿಲ್ಲೆ ವಿಭಜನೆಯ ಸುದ್ದಿಗೆ ಪುಷ್ಠಿ ನೀಡಿತ್ತು. ಹಾಗಾಗಿ ಸಾಗರ ತಾಲ್ಲೂಕಿನಲ್ಲಿ ಇದನ್ನು ವಿರೋಧಿಸಿ ಪ್ರತಿಭಟನೆಯ ಕಾವು ಜೋರಾಗಿತ್ತು.

2021ನೇ ಸಾಲಿನ ಜುಲೈನಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಸ್ಥಾನದಲ್ಲಿ ಎಸ್.ಆರ್. ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗುತ್ತಿದ್ದಂತೆ ಜಿಲ್ಲೆ ವಿಭಜನೆ ಪ್ರಸ್ತಾಪ ಹಿಂದಕ್ಕೆ ಹೋಗಿತ್ತು.

ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ನೂತನ ಜಿಲ್ಲೆಗಳ ರಚನೆ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ವೇಳೆ ಶಿವಮೊಗ್ಗದ ಹೆಸರನ್ನು ಕೂಡ ಹೇಳಿರುವುದರಿಂದ ವಿಭಜನೆ ವಿಷಯ ಮುನ್ನೆಲೆಗೆ ಬರಲು ವೇದಿಕೆ ಸೃಷ್ಟಿಸಿದಂತಾಗಿದೆ.

‘ಕೇಂದ್ರ ಸರ್ಕಾರ 2026ನೇ ಸಾಲಿನ ಏಪ್ರಿಲ್ ತಿಂಗಳಿನಿಂದ ಜನಗಣತಿಯನ್ನು ಆರಂಭಿಸಲಿದೆ. ಈ ಹಿನ್ನಲೆಯಲ್ಲಿ ನೂತನ ಜಿಲ್ಲೆಗಳನ್ನು ರಚಿಸುವುದಾದರೆ ಈ ಪ್ರಕ್ರಿಯೆಯನ್ನು ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಪೂರೈಸಿ ಎನ್ನುವ ಸೂಚನೆಯನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಿದೆ. ಆದ್ದರಿಂದಲೇ ರಾಜ್ಯ ಸರ್ಕಾರ ನೂತನ ಜಿಲ್ಲೆಗಳ ರಚನೆ ವಿಷಯವನ್ನು ಪ್ರಸ್ತಾಪಿಸಿದೆ’ ಎನ್ನುತ್ತಾರೆ ಶಿವಮೊಗ್ಗ ಜಿಲ್ಲಾ ಭೂ ಹಕ್ಕು ಹೋರಾಟ ಸಮಿತಿ ಸಂಚಾಲಕ ತೀ.ನ. ಶ್ರೀನಿವಾಸ್.

‘ಸಾಗರ ಮಲೆನಾಡಿನ ಹೆಬ್ಬಾಗಿಲು ಇದ್ದಂತೆ. ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆ, ಗ್ರಾಮಗಳ ಸಂಖ್ಯೆ ಹೀಗೆ ಯಾವುದೇ ಮಾನದಂಡವನ್ನು ಪರಿಗಣಿಸಿದರೂ ಉಪವಿಭಾಗೀಯ ಕೇಂದ್ರವಾಗಿರುವ ಸಾಗರವೇ ಜಿಲ್ಲೆಯಾಗುವ ಅರ್ಹತೆ ಪಡೆದಿದೆ’ ಎನ್ನುತ್ತಾರೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್. ಜಯಂತ್.

‘ಸಿಗಂದೂರು, ಜೋಗ ಜಲಪಾತ, ಇಕ್ಕೇರಿ, ಕೆಳದಿ, ಹೊನ್ನೇಮರಡು ಸೇರಿದಂತೆ ವಿವಿಧ ಪ್ರವಾಸಿ ತಾಣಗಳು ಸಾಗರ ತಾಲ್ಲೂಕಿನಲ್ಲಿರುವುದರಿಂದ ಪ್ರವಾಸೋದ್ಯಮದ ಬೆಳವಣಿಗೆಯ ದೃಷ್ಟಿಯಿಂದಲೂ ಸಾಗರ ಜಿಲ್ಲಾ ಕೇಂದ್ರವಾಗುವುದು ಸೂಕ್ತ’ ಎನ್ನುತ್ತಾರೆ ಬಿಜೆಪಿ ಮುಖಂಡ ಟಿ.ಡಿ. ಮೇಘರಾಜ್.

ಸಾಗರ ಜಿಲ್ಲಾ ಕೇಂದ್ರವಾಗಬೇಕು ಎಂಬ ಬೇಡಿಕೆಗೆ ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಚ್. ಹಾಲಪ್ಪ ಹರತಾಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಈಗಾಗಲೇ ಬೆಂಬಲ ಸೂಚಿಸಿದ್ದಾರೆ. ರಾಜ್ಯ ಸರ್ಕಾರ ಈ ಭಾಗದ ಜನರ ಬೇಡಿಕೆಗೆ ಯಾವ ರೀತಿ ಸ್ಪಂದಿಸುತ್ತದೆ ಎಂದು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.