ಸಾಗರ: ನಗರದ ಹೊರ ವಲಯದ ಸಂಗಳ ಗ್ರಾಮದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದ ಅಸಮರ್ಪಕ ನಿರ್ವಹಣೆಯಿಂದ ತೊರಗೋಡು, ಹುಲ್ಲತ್ತಿ, ಕೆಳದಿ, ಅಕ್ಕಿಮನೆ, ಶಿರವಾಳ, ಹಳ್ಳಿಬೈಲು, ನೇರಲಗಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತಿದ್ದು, ನಗರಸಭೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ಸರಿಯಾಗಿ ಆಗದೆ ಇರುವುದರಿಂದ ಘಟಕದ ರಾಸಾಯನಿಕಯುಕ್ತ ಕೊಳಚೆ ನೀರು ಗ್ರಾಮಗಳ ಕೃಷಿಭೂಮಿಗೆ ಸೇರುತ್ತಿದೆ. ಇದರಿಂದ ಕೃಷಿ ಕಾರ್ಯಕ್ಕೆ ತೊಂದರೆ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ತ್ಯಾಜ್ಯ ವಿಲೇವಾರಿ ಘಟಕದ ಕಲುಷಿತ ನೀರು ಗ್ರಾಮಗಳ ಕುಡಿಯುವ ನೀರಿನ ಬಾವಿಗೆ ಸೇರುತ್ತಿದೆ. ಇದರಿಂದ ಇಲ್ಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ತ್ಯಾಜ್ಯಗಳಿಂದ ಸೊಳ್ಳೆ, ನೊಣಗಳ ಕಾಟ ವಿಪರೀತವಾಗಿದ್ದು, ಸಾಂಕ್ರಾಮಿಕ ರೋಗ ಹಬ್ಬುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಗಳದ ಘನ ತ್ಯಾಜ್ಯ ವಿಲೇವಾರಿ ಘಟಕ ಸಮರ್ಪಕ ನಿರ್ವಹಣೆ ಮಾಡಬೇಕು. ಅವ್ಯವಸ್ಥೆ ಮುಂದುವರೆದರೆ ಘಟಕದ ಸ್ಥಳಾಂತರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಎನ್.ಡಿ. ಹರೀಶ್, ಬಿ.ಎಚ್. ಮೋಹನ್, ಎನ್. ಗುರುಮೂರ್ತಿ, ಟಿ.ಎಚ್. ರವಿ, ಎಚ್. ರಾಘು, ಹುಲ್ಲತ್ತಿ, ಬೀರಪ್ಪ ಕೆಳದಿ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.