ADVERTISEMENT

ಸಹ್ಯಾದ್ರಿ ನಾರಾಯಣ ಆಸ್ಪತ್ರೆ: ಅಪರೂಪದ ಮೆದುಳಿನ ಗೆಡ್ಡೆ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 14:09 IST
Last Updated 7 ಜೂನ್ 2025, 14:09 IST
ಡಾ.ಅನಿಲ್‌ಕುಮಾರ್
ಡಾ.ಅನಿಲ್‌ಕುಮಾರ್   

ಶಿವಮೊಗ್ಗ: ಮಹಿಳೆಯೊಬ್ಬರು ಕೆಲವೇ ದಿನಗಳಲ್ಲಿ ತಮ್ಮ ಬಲಗಣ್ಣಿನ ದೃಷ್ಟಿ ಕಳೆದುಕೊಂಡು ಮತ್ತೆ ದೃಷ್ಟಿ ಪಡೆದ ವೈದ್ಯಕೀಯ ಅಚ್ಚರಿಯೊಂದು ನಡೆದಿದೆ. 

47 ವರ್ಷದ ಮಹಿಳೆಯೊಬ್ಬರಿಗೆ ಆರಂಭದಲ್ಲಿ ಬಲಗಣ್ಣಿನಲ್ಲಿ ಸ್ವಲ್ಪ ಮಸುಕಾದ ದೃಷ್ಟಿ ಕಾಣಿಸಿತ್ತು. ಆದರೆ ಅದು ನಿಧಾನವಾಗಿ ಬೆಳಕನ್ನೂ ಕಾಣದಷ್ಟು ಕಗ್ಗತ್ತಲಾಗಿ ಮಾರ್ಪಟ್ಟಿತ್ತು. ಮೊದಲಿಗೆ ಕಣ್ಣಿನ ಸಮಸ್ಯೆಯಷ್ಟೇ ಅಂದುಕೊಂಡಿದ್ದ ಅವರಿಗೆ, ಇದು ಮೆದುಳಿನಲ್ಲಿ ಬೆಳೆಯುತ್ತಿದ್ದ ಅಪಾಯಕಾರಿ ಟ್ಯೂಮರ್ (ಗೆಡ್ಡೆ) ನ ಪರಿಣಾಮ ಎಂದು ತಿಳಿಯುವ ಹೊತ್ತಿಗಾಗಲೇ ತಡವಾಗಿತ್ತು. 

ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ನ್ಯೂರೋಸರ್ಜನ್ ಡಾ. ಎಂ.ಎಸ್. ಅನಿಲ್‌ಕುಮಾರ್ ಅವರನ್ನು ಭೇಟಿಯಾದರು. ತೀವ್ರ ಪರೀಕ್ಷೆಯ ಬಳಿಕ, ಆಕೆಯ ಮೆದುಳಿನಲ್ಲಿ ಮೆನಿಂಜಿಯೋಮಾ ಎಂಬ ಮೆದುಳಿನ ಗೆಡ್ಡೆ ಕಂಡುಬಂತು. ಇದು ಕಣ್ಣುಗಳಿಗೆ ಸಂಬಂಧಿಸಿದ ‘ಆಪ್ಟಿಕ್ ನರ್ವ್’ ಮೇಲೆ ಒತ್ತಡ ಹಾಕುತ್ತಿದ್ದು, ಮೆದುಳಿನ ಮುಖ್ಯ ರಕ್ತನಾಳವಾದ ಮಿಡಲ್ ಸೆರಿಬ್ರಲ್ ಆರ್ಟರಿಗೂ ಕೂಡಾ ತುಂಬಾ ಹತ್ತಿರದಲ್ಲಿತ್ತು. 

ADVERTISEMENT

ಇದನ್ನು ಹಾಗೆಯೇ ಬಿಟ್ಟಿದ್ದರೆ, ಟ್ಯೂಮರ್ ಮುಂದುವರಿದು ಮೆದುಳಿನ ‘ಹೈಪೊಥಾಲಮಸ್‘ ಭಾಗಕ್ಕೆ ಒತ್ತಿ, ನೆನಪಿನ ಶಕ್ತಿ ಕಳೆದುಕೊಳ್ಳುವುದಲ್ಲದೆ, ಅವರ ಹಾರ್ಮೋನ್ ವ್ಯವಸ್ಥೆ ಏರುಪೇರಾಗಿ ಕೋಮಾಗೆ ಜಾರುವ ಸಾಧ್ಯತೆಗಳೂ ಇದ್ದವು ಎಂದು ಚಿಕಿತ್ಸೆ ನೀಡಿದ ಡಾ. ಅನಿಲ್‌ಕುಮಾರ್‌ ಹೇಳುತ್ತಾರೆ. 

ಇದೊಂದು ಜಟಿಲ ಹಾಗೂ ಸೂಕ್ಷ್ಮ ಶಸ್ತ್ರಚಿಕಿತ್ಸೆ. ಈ ಭಾಗಗಳು ದೃಷ್ಟಿ, ನೆನಪು ಮತ್ತು ದೇಹದ ಚೈತನ್ಯಕ್ಕೆ ಸಂಬಂಧಿಸಿದ್ದಾಗಿದೆ. ಚಿಕ್ಕ ತಪ್ಪು ಆಕೆಯಲ್ಲಿ ಶಾಶ್ವತವಾದ ದೃಷ್ಟಿ ದೋಷಕ್ಕೆ ಕಾರಣವಾಗುತ್ತಿತ್ತು. ಡಾ. ಅನಿಲ್‌ಕುಮಾರ್ ಅವರ ನೇತೃತ್ವದಲ್ಲಿ 12 ಗಂಟೆಗಳ ಕಾಲ ನಡೆದ ಸೂಕ್ಷ್ಮ ಶಸ್ತ್ರಚಿಕಿತ್ಸೆಯಲ್ಲಿ, ಮೈಕ್ರೋಸ್ಕೋಪ್ ಮತ್ತು ನ್ಯೂರೋ ನ್ಯಾವಿಗೇಶನ್ ತಂತ್ರಜ್ಞಾನ ಬಳಸಿಕೊಂಡು ಟ್ಯೂಮರ್ ತೆಗೆದುಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.