ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿ – 169ರ ಮಾರ್ಗ ಮಧ್ಯೆ ನೆಲ್ಲಿಸರ– ತೀರ್ಥಹಳ್ಳಿ ಚತುಷ್ಪತ ರಸ್ತೆ ಮೇಲ್ದರ್ಜೆಗೆ ಏರುತ್ತಿದೆ. ಈ ರಸ್ತೆ ವಿಸ್ತರಣೆ ಕಾಮಗಾರಿಗೆ ಬೇಗುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ನೆಲಸಮಗೊಳ್ಳುತ್ತಿದ್ದು, 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುಳುವಾಗಲಿದೆ.
1943ರಲ್ಲಿ ವೈ.ಎ.ಪ್ರಭಾಕರ್ ದಾನ ನೀಡಿದ್ದ ಸ್ಥಳದಲ್ಲಿ ಶಾಲೆ ಇದೆ. ಪ್ರಸ್ತುತ ಅತ್ಯುತ್ತಮ ಕನ್ನಡ, ಇಂಗ್ಲಿಷ್ ಮಾಧ್ಯಮ ಸರ್ಕಾರಿ ಶಾಲೆಯಾಗಿ ಸುತ್ತಮುತ್ತಲ ಗ್ರಾಮಗಳಲ್ಲಿ ಗುರುತಿಸಿಕೊಂಡಿದೆ. ಶೈಕ್ಷಣಿಕ ಸಾಧನೆಯಿಂದಾಗಿ 15 ಕಿ.ಮೀ. ದೂರದ ನೆಲ್ಲಿಸರ ಸೇರಿದಂತೆ ಮಂಡಗದ್ದೆ, ಮಲ್ಲಂದೂರು, ಮುಡುಬ, ಕನ್ನಂಗಿ, ಉಬ್ಬೂರು, ಬಿದರಹಳ್ಳಿ ಗ್ರಾಮಗಳ ಮಕ್ಕಳು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಮಂಡಗದ್ದೆ ಹೋಬಳಿ ಮಟ್ಟದ ಅತ್ಯುತ್ತಮ ಶಾಲೆ ಎಂಬ ಹಿರಿಮೆ ಸೇರಿದಂತೆ ಕಂಪ್ಯೂಟರ್ ಶಿಕ್ಷಣ, ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಪ್ರಯೋಗಾಲಯ ಸೌಲಭ್ಯಗಳಿವೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಪಾಲಕರು ತಮ್ಮ ಮಕ್ಕಳನ್ನು ಈ ಶಾಲೆಗೆ ದಾಖಲಿಸುತ್ತಿದ್ದಾರೆ. ವಿದ್ಯಾರ್ಥಿಗಳ ಓಡಾಟಕ್ಕೆ ಶಾಲೆಯ ಎಸ್‌ಡಿಎಂಸಿಯಿಂದ ವಾಹನ ಸೌಲಭ್ಯ ಕಲ್ಪಿಸಿದ್ದು ಅವರನ್ನು ಆಕರ್ಷಿಸುತ್ತಿದೆ.
10 ವರ್ಷಗಳ ಹಿಂದೆ 40 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಈಚೆಗೆ ದಾಖಲಾತಿ ಪ್ರಮಾಣ ಹೆಚ್ಚುತ್ತಿದೆ. ಸುತ್ತಮುತ್ತಲ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಇಲ್ಲದ ಕಾರಣದಿಂದಲೂ ಬೇಗುವಳ್ಳಿ ಸರ್ಕಾರಿ ಶಾಲೆ ಅತ್ಯುತ್ತಮ ಹೆಸರು ಪಡೆದುಕೊಂಡಿದೆ.
ನೆಲ್ಲಿಸರ– ತೀರ್ಥಹಳ್ಳಿ ಮಾರ್ಗ ಮಧ್ಯೆಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಈಗಾಗಲೇ ತೆರವಾಗುವ ಸ್ಥಳಗಳ ಕುರಿತು ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಆದರೆ ಶಾಲಾ ಆಡಳಿತಕ್ಕೆ ಈವರೆಗೂ ನೋಟಿಸ್ ಲಭ್ಯವಾಗಿಲ್ಲ. ಅಲ್ಲದೇ ಹೆದ್ದಾರಿ ಪ್ರಾಧಿಕಾರದಿಂದ ಶಾಲೆಯ ತೆರವಾಗುವ ಸ್ಥಳವನ್ನು ಕೆಂಪು ಬಣ್ಣದಿಂದ ಗುರುತು ಹಾಕಿದ್ದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ದಾನ ಪತ್ರ ನೋಂದಣಿಯಾಗಿಲ್ಲ?: ಗ್ರಾಮಸ್ಥರ ಕೋರಿಕೆ ಮೇರೆಗೆ 1943ರಲ್ಲಿ ರಾಮೇಗೌಡರ ಸ್ಮರಣಾರ್ಥ ವೈ.ಎ.ಪ್ರಭಾಕರ್ ಅವರು ಶಾಲೆಗೆ ಜಮೀನು ದಾನ ನೀಡಿದ್ದರು. ಅಂದಿನಿಂದ ಇಂದಿನವೆರೆಗೂ ದಾನಪತ್ರದ ನೋಂದಣಿ ಆಗಿಲ್ಲ. ಶಿಕ್ಷಣ ಇಲಾಖೆ ಹೆಸರಿಗೆ ಜಾಗ ನೋಂದಣಿ ಆಗದ ಕಾರಣ ಜಮೀನು ಖಾಸಗಿ ಮಾಲೀತ್ವದಲ್ಲಿ ಇದೆ. ಶಾಲೆಯ ಪ್ರದೇಶದ ತೆರವಾಗುವ ಸ್ಥಳಕ್ಕೆ ಹೆದ್ದಾರಿ ಇಲಾಖೆ ₹ 40 ಲಕ್ಷ ಪರಿಹಾರ ಮೊತ್ತ ಘೋಷಿಸಿದ್ದರೂ ಖಾಸಗಿಯವರ ಪಾಲಾಗುವ ಸಾಧ್ಯತೆ ದಟ್ಟವಾಗಿದೆ.
ಅರಣ್ಯ ಇಲಾಖೆ ಅನುಮತಿ ಬೇಕಿದೆ: ಸುದೀರ್ಘ 80 ವರ್ಷಗಳ ಕಾಲ ಶಾಲೆ ಬೇಗುವಳ್ಳಿ ಪ್ರದೇಶದಲ್ಲಿ ಇದೆ. ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಾಗಿ ಸಮೀಪದ ಕ್ರೀಡಾಂಗಣ ಬಳಸಿಕೊಳ್ಳಲಾಗುತ್ತಿದೆ. ತೆರವಾಗುವ ಶಾಲೆಯ ಬದಲಿಗೆ ಆ ಸ್ಥಳದಲ್ಲಿ 2 ಎಕರೆ ಪ್ರದೇಶದಲ್ಲಿ ನೂತನ ಶಾಲೆ ನಿರ್ಮಾಣಕ್ಕೆ ಸ್ಥಳೀಯರು, ಹಳೆಯ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು ಕೋರಿದ್ದಾರೆ. ಈ ಮಧ್ಯೆ ಅರಣ್ಯ ಇಲಾಖೆಯು ಆ ಸ್ಥಳವು ಅಧಿಸೂಚಿತ ಅರಣ್ಯ ಪ್ರದೇಶಕ್ಕೆ ಸೇರಿದೆ ಎಂಬ ಕಾರಣ ನೀಡಿದೆ. ಅಲ್ಲದೇ ಹಾಲಿ ದಾನ ನೀಡಿದ ಪ್ರದೇಶವು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಪರಿಹಾರ ಇಲಾಖೆಗೆ ಸಿಗಬೇಕು ಎಂಬ ಅರಣ್ಯ ಇಲಾಖೆಯ ವಾದ ಹಲವು ಆಡಳಿತಾತ್ಮಕ ಸಮಸ್ಯೆಯನ್ನು ಮುನ್ನೆಲೆಗೆ ತಂದಿದೆ.
ದಾನಿಗಳ ಕುಟುಂಬ ಶಾಲೆಯ ಜಮೀನನ್ನು ವಾಪಸ್ ಪಡೆಯಬಾರದು. ಶಾಲೆಯ ಉಳಿವಿಗಾಗಿ ಪರಿಹಾರದ ಮೊತ್ತ ಶಾಲೆಯ ಅಭಿವೃದ್ಧಿಗೆ ಮೀಸಲಿಡಬೇಕು. ನೂತನ ಶಾಲೆ ನಿರ್ಮಾಣಕ್ಕೆ ಸಹಕರಿಸಿ
-ಸುಬ್ರಹ್ಮಣ್ಯ ಬೇಗುವಳ್ಳಿ ಎಸ್‌ಡಿಎಂಸಿ ಅಧ್ಯಕ್ಷ
ಅರಣ್ಯ ಹಕ್ಕು ಕಾಯ್ದೆಯಡಿ ಶಾಲೆಗೆ 2 ಎಕರೆ ಜಾಗ ಮಂಜೂರಾಗಿದ್ದು ಹಕ್ಕುಪತ್ರ ವಿತರಣೆ ಬಾಕಿ ಇದೆ. ಜಿಲ್ಲಾ ಉಸ್ತುವಾರಿ ಸಚಿವರು ಶಾಲೆ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ
-ಮುಡುಬ ರಾಘವೇಂದ್ರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬೇಗುವಳ್ಳಿಯ ನೂತನ ಶಾಲೆಗೆ ಎರಡು ಕೊಠಡಿ ಮಂಜೂರಾಗಿದ್ದು ಮತ್ತೆರಡಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಹಕ್ಕುಪತ್ರ ವಿತರಣೆಗೆ ಜಿಲ್ಲಾಧಿಕಾರಿ ಅನುಮೋದನೆ ಬಾಕಿ ಇದೆ. ಕಟ್ಟಡ ಪರಿಹಾರಕ್ಕಾಗಿ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.