ADVERTISEMENT

ಶಾಲೆ ಪುನರಾರಂಭ: ವಿದ್ಯಾರ್ಥಿಗಳ ಸ್ವಾಗತಕ್ಕೆ ಸಿದ್ಧತೆ ಪೂರ್ಣ

ಶಾಲಾ ಪ್ರಾರಂಭೋತ್ಸವದ ದಿನವೇ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ

ವೆಂಕಟೇಶ ಜಿ.ಎಚ್.
Published 28 ಮೇ 2025, 5:13 IST
Last Updated 28 ಮೇ 2025, 5:13 IST
ಶಿವಮೊಗ್ಗದ ಡಿಡಿಪಿಐ ಕಚೇರಿ ಉಗ್ರಾಣದಲ್ಲಿ ಸಂಗ್ರಹಿಸಿಟ್ಟಿರುವ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತಿದೆ
ಶಿವಮೊಗ್ಗದ ಡಿಡಿಪಿಐ ಕಚೇರಿ ಉಗ್ರಾಣದಲ್ಲಿ ಸಂಗ್ರಹಿಸಿಟ್ಟಿರುವ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತಿದೆ   
  • ಸರ್ಕಾರಿ ಶಾಲೆಗಳು: 2,100

  • ಅನುದಾನಿತ ಶಾಲೆಗಳು: 400

  • ಒಟ್ಟು ವಿದ್ಯಾರ್ಥಿಗಳು: 2.58 ಲಕ್ಷ

    ADVERTISEMENT
  • ಸರ್ಕಾರಿ ಶಾಲೆ ವಿದ್ಯಾರ್ಥಿಗಳು: 1.10 ಲಕ್ಷ

ಶಿವಮೊಗ್ಗ: ಎರಡು ತಿಂಗಳು ಬೇಸಿಗೆ ರಜೆಯಲ್ಲಿದ್ದ ವಿದ್ಯಾರ್ಥಿಗಳು ಮೇ 29ರಿಂದ ಮತ್ತೆ ಶಾಲೆಯ ಹಾದಿಗೆ ಮರಳಲಿದ್ದಾರೆ. ಹೊಸ ಶೈಕ್ಷಣಿಕ ವರ್ಷಕ್ಕೆ ಜಿಲ್ಲೆಯಲ್ಲಿ ಶಾಲೆಗೆ ವಿದ್ಯಾರ್ಥಿಗಳ ಸ್ವಾಗತಕ್ಕೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಈಗಾಗಲೇ ಅಗತ್ಯ ಸಿದ್ಧತೆ ಕೈಗೊಂಡಿದೆ.

ವಿದ್ಯಾರ್ಥಿಗಳು ಮರಳುವ ಹಿನ್ನೆಲೆಯಲ್ಲಿ ಶಾಲಾ ಕಟ್ಟಡವನ್ನು ಸುಣ್ಣ–ಬಣ್ಣ ಬಳಿದು, ತಳಿರು–ತೋರಣಗಳಿಂದ ಸಿಂಗರಿಸುವ ಕಾರ್ಯ ನಡೆದಿದೆ. ಆ ದಿನ ಶಾಲೆಗೆ ಬರುವ ಮಕ್ಕಳಿಗೆ ಸಿಹಿ ತಿನಿಸು ಹಾಗೂ ಹೂವಿನ ಸ್ವಾಗತ ದೊರೆಯಲಿದೆ. ಮೊದಲ ದಿನವೇ ಅವರಿಗೆ ಪಠ್ಯ–ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಕೂಡ ಮಾಡಲಾಗುತ್ತಿದೆ.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಲೆಯೊಂದಕ್ಕೆ ಬಂದು ವಿದ್ಯಾರ್ಥಿಗಳನ್ನು ಸ್ವಾಗತಿಸಲು ಆಯಾ ಕ್ಷೇತ್ರದ ಶಾಸಕರನ್ನು ಆಹ್ವಾನಿಸಲಾಗಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಪಿಡಿಒಗಳು, ಹಳೆಯ ವಿದ್ಯಾರ್ಥಿಗಳು, ಊರಿನ ಗಣ್ಯರು, ಸ್ಥಳೀಯ ಸಂಸ್ಥೆಗಳ ಸದಸ್ಯರು, ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳ ಪ್ರಾರಂಭೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಶಾಲೆಯ ಚಟುವಟಿಕೆಗಳಲ್ಲಿ ಸಮುದಾಯವನ್ನು ಭಾಗಿಯಾಗಿಸಿಕೊಳ್ಳುವ ಪುಟ್ಟ ಪ್ರಯತ್ನ ಎಂದು ಶಿವಮೊಗ್ಗ ಡಿಡಿಪಿಐ ಎಸ್‌.ಆರ್‌. ಮಂಜುನಾಥ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಶಾಲಾ ಪ್ರಾರಂಭೋತ್ಸವದ ಪ್ರಕ್ರಿಯೆ ಮೇ 29ರಂದು ಆರಂಭವಾಗಲಿದೆ. ಅಂದು ದಾಖಲಾತಿ ಆಂದೋಲನ ನಡೆಯಲಿದೆ. ಅಂಗನವಾಡಿಗಳಲ್ಲಿ ಕಲಿಯುತ್ತಿರುವ 5 ವರ್ಷ 5 ತಿಂಗಳು ತುಂಬಿರುವ ಮಕ್ಕಳನ್ನು ಕರೆ ತಂದು 1ನೇ ತರಗತಿಗೆ ದಾಖಲಾತಿ ಮಾಡಿಸಿಕೊಳ್ಳಲಾಗುವುದು. ಜೊತೆಗೆ ಆ ಮಕ್ಕಳ ಮನೆಗೆ ತೆರಳಿ ಶಾಲೆಗೆ ಕರೆತರಲು ಆಹ್ವಾನ ನೀಡಲಾಗುವುದು ಎನ್ನುತ್ತಾರೆ.

ಶಾಲೆಗಳಿಗೆ ಈಗಾಗಲೇ ಪಠ್ಯಪುಸ್ತಕ ಬಂದಿವೆ. ಮುಖ್ಯ ಶಿಕ್ಷಕರು ಸಭೆ ನಡೆಸಿ ಶಾಲಾ ಆವರಣ ಅಡುಗೆ ಮನೆ ಶೌಚಾಲಯ ಕೊಠಡಿಗಳ ಸ್ವಚ್ಛತೆಗೆ ಸೂಚಿಸಿದ್ದೇನೆ. ವಿದ್ಯಾರ್ಥಿಗಳು ಶಾಲೆಗೆ ಬಂದ ತಕ್ಷಣ ಸೇತುಬಂಧ ಕಲಿಕೆಯ ಪುನರ್‌ಮನನ ನಡೆಯಲಿದೆ
ಎಸ್.ಆರ್.ಮಂಜುನಾಥ್ ಶಿವಮೊಗ್ಗ ಡಿಡಿಪಿಐ

ಪಠ್ಯಪುಸ್ತಕ: ಶೇ 73.89ರಷ್ಟು ಪೂರೈಕೆ 

ಶಿವಮೊಗ್ಗ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲು ಒಟ್ಟು 20.07 ಲಕ್ಷ ಪಠ್ಯಪುಸ್ತಕಗಳಿಗೆ ಬೇಡಿಕೆ ಇದೆ. ಅದರಲ್ಲಿ ಈಗಾಗಲೇ 14.83 ಲಕ್ಷ ಪುಸ್ತಕ ಪೂರೈಕೆ ಆಗಿದೆ. ಶೇ 73.89ರಷ್ಟು ಪುಸ್ತಕ ಬಂದಿವೆ. ಆ ಪೈಕಿ ಭದ್ರಾವತಿ ತಾಲ್ಲೂಕಿಗೆ ಶೇ 73.71 ಹೊಸನಗರ ಶೇ 73.44 ಸಾಗರ ಶೇ 75.31 ಶಿಕಾರಿಪುರ ಶೇ 72.51 ಶಿವಮೊಗ್ಗ ಶೇ 74.23 ಸೊರಬ ಶೇ 74.45 ಹಾಗೂ ತೀರ್ಥಹಳ್ಳಿ ತಾಲ್ಲೂಕಿಗೆ ಶೇ 73.15ರಷ್ಟು ಪೂರೈಸಲಾಗಿದೆ. ಮಾರಾಟದ ಉದ್ದೇಶಕ್ಕೆ 9.80 ಲಕ್ಷ ಪಠ್ಯಪುಸ್ತಕಗಳಿಗೆ ಬೇಡಿಕೆ ಇದೆ. ಆ ಪೈಕಿ 8.07 ಲಕ್ಷ ಪುಸ್ತಕ ಪೂರೈಕೆ ಆಗಿದೆ. ಶೇ 82.40ರಷ್ಟು ಪುಸ್ತಕಗಳು ಬಂದಿವೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.